
ಸರ್ಕಾರದ ಸಹಾಯಧನವಿಲ್ಲದೆ ಗ್ರಿಡ್‌ಗೆ ನೀಡುವ ಸೋಲಾರ್ ಶಕ್ತಿ ದರ ಹೆಚ್ಚಳ
ಬೆಂಗಳೂರು: ಸರ್ಕಾರದ ಸಹಾಯಧನ ಇಲ್ಲದೆ ಉತ್ಪಾದನೆ ಮಾಡಿ ಗ್ರಿಡ್‌ಗೆ ನೀಡುವ ಸೌರ ವಿದ್ಯುತ್ ದರವನ್ನು ತುಸು ಹೆಚ್ಚಳ ಮಾಡಲಾಗಿದೆ.
ಸಹಾಯಧನ ಪಡೆದು ಉತ್ಪಾದಿಸುವ ಸೌರ ವಿದ್ಯುತ್ ದರವನ್ನು ಸ್ವಲ್ಪ ಇಳಿಕೆ ಮಾಡಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಮೂರು ವರ್ಷಕ್ಕೆ ಅನ್ವಯವಾಗುವಂತೆ ಸೌರ ವಿದ್ಯುತ್ ದರವನ್ನು ಪರಿಷ್ಕರಿಸಿ ಇದೇ 25ರಂದು ಆದೇಶ ಹೊರಡಿಸಿದೆ. ಸಹಾಯಧನ ಪಡೆಯದೆ 10 ಕಿಲೋವಾಟ್‌ವರೆಗೆ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರೆ ಯೂನಿಟ್‌ಗೆ ₹3.89 ನಿಗದಿ ಮಾಡಲಾಗಿದೆ. ಇದುವರೆಗೆ ಯೂನಿಟ್‌ಗೆ ₹3.86 ಇತ್ತು.
ಪಿ.ಎಂ.ಸೂರ್ಯ ಘರ್ ಯೋಜನೆ, ಡಿಸ್ಟ್ರಿಬ್ಯೂಟೆಡ್ ಸೋಲಾರ್ ಫೊಟೊವೊಲ್ಟಾಯಿಕ್ (ಡಿಎಸ್‌ಪಿವಿ) ಸೇರಿದಂತೆ ವಿವಿಧ ಸೌರ ವಿದ್ಯುತ್ ಯೋಜನೆಗಳಡಿ ಉತ್ಪಾದನೆ ಮಾಡುವ ಸೌರ ವಿದ್ಯುತ್‌ಗೆ ಇದು ಅನ್ವಯವಾಗಲಿದೆ. ಪರಿಷ್ಕೃತ ದರವು 2029ರ ಜೂನ್‌ವರೆಗೂ ಜಾರಿಯಲ್ಲಿ ಇರುತ್ತದೆ. ಕೇಂದ್ರ ಸರ್ಕಾರದ ಸಹಾಯಧನ ಪಡೆದು ಉತ್ಪಾದನೆ ಮಾಡುವ ವಿದ್ಯುತ್‌ಗೆ ಕಿಲೋವಾಟ್‌ಗೆ ಅನುಗುಣವಾಗಿ ಬೇರೆ ಬೇರೆ ದರ ನಿಗದಿ ಪಡಿಸಲಾಗಿದೆ. ಒಂದರಿಂದ ಎರಡು ಕಿಲೋವಾಟ್‌ವರೆಗೆ ಯೂನಿಟ್‌ಗೆ ₹1.96, ಎರಡರಿಂದ ಮೂರು ಕಿಲೋವಾಟ್‌ವರೆಗೆ ಯೂನಿಟ್‌ಗೆ ₹2.14 ಹಾಗೂ ಮೂರು ಕಿಲೋವಾಟ್‌ಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರೆ ಯೂನಿಟ್‌ಗೆ ₹2.58 ದರ ನಿಗದಿ ಮಾಡಲಾಗಿದೆ.
‘ಇದುವರೆಗೆ 2 ಕಿಲೋವಾಟ್‌ವರೆಗೆ ಯೂನಿಟ್‌ಗೆ ₹2.30, 3 ಕಿಲೋವಾಟ್‌ವರೆಗೆ ಯೂನಿಟ್‌ಗೆ ₹2.48 ಹಾಗೂ ಮೂರು ಕಿಲೋವಾಟ್‌ಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಿದರೆ ಯೂನಿಟ್‌ಗೆ ₹2.93 ದರ ಇತ್ತು’ ಎಂದು ಆಯೋಗದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಸೂರ್ಯಘರ್ ಅಡಿ ರಾಜ್ಯದಲ್ಲಿ 1.02 ಲಕ್ಷ ಮನೆಗಳ ಚಾವಣಿಯಲ್ಲಿ ಸೌರವಿದ್ಯುತ್ ಉತ್ಪಾದಿಸುವ ಗುರಿ ಇದೆ. ಇದುವರೆಗೆ ಒಟ್ಟು 55,671 ಅರ್ಜಿಗಳು ಬಂದಿದ್ದು, 23,551 ಮನೆಗಳಲ್ಲಿ 96.45 ಮೆಗಾವಾಟ್ ವಿದ್ಯುತ್
ಉತ್ಪಾದಿಸಲಾಗುತ್ತಿದೆ. ಅಲ್ಲದೆ 21,210 ಮನೆಗಳಿಗೆ ಒಟ್ಟು ₹160.55 ಕೋಟಿ ಸಹಾಯಧನ ನೀಡಲಾಗಿದೆ.
ಚಾವಣಿ ಅಷ್ಟೇ ಅಲ್ಲದೆ ಮನೆಯ ಅಂಗಳ, ಕಾರು ಪಾರ್ಕಿಂಗ್ ತಾಣ, ಗೋಡೆಗಳ ಮೇಲೆಯೂ ಸೌರಫಲಕ ಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸಲು ಅವಕಾಶ ನೀಡಲಾಗಿದೆ. ಗ್ರಾಹಕರು ವಿದ್ಯುತ್ ಅನ್ನು ಬಳಸಿ, ಉಳಿದಿದ್ದನ್ನು ಗ್ರಿಡ್‌ಗೆ ಮಾರಾಟ ಮಾಡಬಹುದು.
ಸೌರ ವಿದ್ಯುತ್ ಉತ್ಪಾದನೆಗೆ ಕೇಂದ್ರ ಸರ್ಕಾರವು ಕನಿಷ್ಠ ₹30 ಸಾವಿರದಿಂದ ಗರಿಷ್ಠ ₹78 ಸಾವಿರವರೆಗೆ ಸಹಾಯಧನ ನೀಡುತ್ತಿದೆ. ಕೆಲವು ಗ್ರಾಹಕರು ಇದರ ಸದುಪಯೋಗ ಪಡೆದುಕೊಂಡು, ವಿದ್ಯುತ್ ಉತ್ಪಾದನೆ ಮಾಡಲು ಮುಂದೆ ಬರುತ್ತಿದ್ದಾರೆ. ತಾವು ಬಳಕೆ ಮಾಡಿ ಉಳಿಯುವ ವಿದ್ಯುತ್ ಅನ್ನು ಸಂಬಂಧಪಟ್ಟ ವಿದ್ಯುತ್ ಸರಬರಾಜು ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಕಿಲೋವಾಟ್‌ಗೆ ₹45 ಸಾವಿರ ವೆಚ್ಚ
ಒಮ್ಮೆ ಸೌರ ವಿದ್ಯುತ್ ಘಟಕ ಅಳವಡಿಸಿದರೆ 25 ವರ್ಷ ಬಳಕೆಗೆ ಬರಲಿದೆ. ಒಂದು ಕಿಲೋವಾಟ್ ವಿದ್ಯುತ್ ಉತ್ಪಾದನೆಗೆ ₹45 ಸಾವಿರ ವೆಚ್ಚವಾಗಲಿದೆ ಎಂದು ಕೆಇಆರ್‌ಸಿ ಅಂದಾಜಿಸಿದೆ. ಅದರ ಆಧಾರದ ಮೇಲೆ ಗ್ರಾಹಕರಿಂದ ಖರೀದಿಸುವ ಸೌರ ವಿದ್ಯುತ್‌ಗೆ ದರ ನಿಗದಿ ಮಾಡಲಾಗಿದೆ.
ಒಂದು ಕಿಲೋವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಅಳವಡಿಸಿಕೊಳ್ಳಲು ₹35 ಸಾವಿರ ವೆಚ್ಚವಾಗಲಿದೆ ಎಂದು ಕರಡು ಪ್ರಸ್ತಾವನೆಯಲ್ಲಿ ಇತ್ತು. ಆದರೆ, ಇದಕ್ಕಿಂತ ಹೆಚ್ಚು ವೆಚ್ಚವಾಗಲಿದೆ. ಇದನ್ನು ಮರುಪರಿಶೀಲಿಸಬೇಕು ಎಂದು ಕೋರಿ ಆಕ್ಷೇಪಣೆಗಳು ಬಂದಿದ್ದವು. ಹೀಗಾಗಿ, ಮೊತ್ತವನ್ನು ಪರಿಷ್ಕರಿಸಲಾಗಿದೆ.
ಸೌರವಿದ್ಯುತ್ ಉತ್ಪಾದನೆಗೆ ಸಿಗುವ ಸಬ್ಸಿಡಿ
1 ಕಿಲೋವಾಟ್‌ಗೆ ₹30 ಸಾವಿರ
2 ಕಿಲೋವಾಟ್‌ಗೆ ₹60 ಸಾವಿರ
3 ಕಿಲೋವಾಟ್‌ವರೆಗೆ ಗರಿಷ್ಠ ₹78 ಸಾವಿರ