ಆಹಾರ ಸುರಕ್ಷತೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಜನರಲ್ಲಿ ಇನ್ನೂ ಅಪನಂಬಿಕೆ: ಸಮೀಕ್ಷೆ

ಆಹಾರ ಸುರಕ್ಷತೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಜನರಲ್ಲಿ ಇನ್ನೂ ಅಪನಂಬಿಕೆ: ಸಮೀಕ್ಷೆ

ಆಹಾರ ಸುರಕ್ಷತೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಜನರಲ್ಲಿ ಇನ್ನೂ ಅಪನಂಬಿಕೆ: ಸಮೀಕ್ಷೆ

ಬೆಂಗಳೂರು: ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ವಿರುದ್ಧ ಇತ್ತೀಚೆಗೆ ಕಾರ್ಯಾಚರಣೆ ಚುರುಕುಗೊಂಡಿದ್ದರೂ, ಇಲಾಖೆಯ ಕಾರ್ಯವೈಖರಿ ಬಗ್ಗೆ ನಗರದ ಜನರಿಗೆ ಇನ್ನೂ ವಿಶ್ವಾಸ ಮೂಡಿಲ್ಲ.

‘ಲೋಕಲ್ ಸರ್ಕಲ್’ ಸಂಸ್ಥೆಯು ಬೆಂಗಳೂರಿನ 2,762 ನಿವಾಸಿಗಳ ಸಮೀಕ್ಷೆ ನಡೆಸಿದ್ದು, ರಾಜ್ಯದ ಆಹಾರ ಮತ್ತು ಔಷಧ ಆಡಳಿತ (ಎಫ್.ಡಿ.ಎ) ಇಲಾಖೆಯ ಮೇಲೆ ಶೇ 43ರಷ್ಟು ಮಂದಿಗೆ ಅತ್ಯಂತ ಕಡಿಮೆ ನಂಬಿಕೆ ಅಥವಾ ಯಾವುದೇ ನಂಬಿಕೆ ಇಲ್ಲ ಎಂದು ತಿಳಿದುಬಂದಿದೆ.

ಶೇ 31ರಷ್ಟು ಮಂದಿ ಕಡಿಮೆ ನಂಬಿಕೆ ಹೊಂದಿರುವುದಾಗಿ ಹೇಳಿದ್ದಾರೆ. ನಿಯಂತ್ರಕ ಸಂಸ್ಥೆಯ ಮೇಲೆ ಹೆಚ್ಚಿನ ನಂಬಿಕೆ ಇದೆ ಎಂದು ಶೇ 23ರಷ್ಟು ಮಂದಿ ಮಾತ್ರ ಹೇಳಿದ್ದು, ಶೇ 3ರಷ್ಟು ಮಂದಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ನಗರದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆಗಳನ್ನು ಹೆಚ್ಚಿಸಿರುವ ನಡುವೆಯೇ ಈ ಸಮೀಕ್ಷೆಯ ಫಲಿತಾಂಶಗಳು ಬಂದಿವೆ. ಆದರೆ, ವರ್ಷವಿಡೀ ಇರುವ ಸಮಸ್ಯೆಗಳನ್ನು ಪರಿಹರಿಸಲು ಆಗಾಗ್ಗೆ ನಡೆಸುವ ಕಾರ್ಯಾಚರಣೆಗಳು ಸಾಲುವುದಿಲ್ಲ ಎಂದು ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.

‘ದೊಡ್ಡ ಸಮಸ್ಯೆಯೊಂದು ಉಂಟಾದ ಬಳಿಕವಷ್ಟೇ, ಅಪರೂಪಕ್ಕೆ ಕಾರ್ಯಾಚರಣೆಗಳು ನಡೆಯುತ್ತವೆ. ವರ್ಷದ ಉಳಿದ ಅವಧಿಯಲ್ಲಿ ಏನಾಗುತ್ತದೆ?’ ಎಂದು ಹೆಬ್ಬಾಳದ ನಿವಾಸಿ ರಂಜಿತಾ ಅಯ್ಯರ್ ಪ್ರಶ್ನಿಸಿದರು.

‘ಈ ಸ್ಥಳಗಳಲ್ಲಿ ತಪಾಸಣೆ ನಡೆಯುತ್ತಿದೆಯೇ ಎಂಬುದನ್ನು ತಿಳಿಯದೆ ಸಾರ್ವಜನಿಕರು ಅಲ್ಲಿನ ಆಹಾರ ಸೇವಿಸುವುದನ್ನು ಮುಂದುವರಿಸುತ್ತಾರೆ’ ಎಂದು ಅವರು ಹೇಳಿದರು.

ತಪಾಸಣೆಗಳ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಎಂದು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಮತ್ತೊಬ್ಬ ನಿವಾಸಿ ಅಭಿಪ್ರಾಯಪಟ್ಟರು.

‘ಕಾರ್ಯಾಚರಣೆಗಳ ಬಗ್ಗೆ ನಾವು ಕೇಳುತ್ತೇವೆ. ಆದರೆ, ಗ್ರಾಹಕರೊಬ್ಬರಿಗೆ ನಿರ್ದಿಷ್ಟ ರೆಸ್ಟೋರೆಂಟ್‌ನಲ್ಲಿ ಕೊನೆಯ ಬಾರಿ ಯಾವಾಗ ತಪಾಸಣೆ ನಡೆಸಲಾಗಿತ್ತು? ತಪಾಸಣೆಯಲ್ಲಿ ಏನು ಪತ್ತೆಯಾಗಿತ್ತು? ಎಂಬುದನ್ನು ತಿಳಿದುಕೊಳ್ಳಲು ಯಾವುದೇ ಮಾರ್ಗವಿಲ್ಲ. ಇದರಿಂದ ವ್ಯವಸ್ಥೆಯ ಮೇಲೆ ನಂಬಿಕೆ ಇಡುವುದು ಕಷ್ಟವಾಗುತ್ತದೆ’ ಎಂದು ಅವರು ಹೇಳಿದ್ದಾರೆ. ‘ಪ್ರತಿ ರೆಸ್ಟೋರೆಂಟ್‌ನಲ್ಲೂ ಕೊನೆಯ ತಪಾಸಣೆಯ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರೆ ಅನುಕೂಲವಾಗುತ್ತದೆ’ ಎಂದಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಶೇ 79ರಷ್ಟು ಗ್ರಾಹಕರು ತಮ್ಮ ಸ್ಥಳೀಯ ಆಹಾರ ಸುರಕ್ಷತಾ ನಿಯಂತ್ರಕ ಸಂಸ್ಥೆಯ ಮೇಲೆ ಕಡಿಮೆ, ಅತ್ಯಂತ ಕಡಿಮೆ ಅಥವಾ ಯಾವುದೇ ನಂಬಿಕೆ ಹೊಂದಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

ತಿನಿಸುಗಳ ಮಳಿಗೆಗಳ ಹೊರತಾಗಿ, ನಗರದಲ್ಲಿ ನಕಲಿ ಔಷಧಗಳ ಮಾರಾಟ ಹಾಗೂ ಹಂಚಿಕೆ ಬಗ್ಗೆಯೂ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ದಕ್ಷಿಣ ಜಿಲ್ಲೆಯಲ್ಲಿ ಇತ್ತೀಚೆಗೆ ಪತ್ತೆಯಾದ ಔಷಧ ದಂಧೆಯ ಹಿನ್ನೆಲೆಯಲ್ಲಿ ಈ ಆತಂಕಗಳು ವ್ಯಕ್ತವಾಗಿವೆ.

ನಾಗರಿಕರ ನೇತೃತ್ವದ ನಿಗಾ ವ್ಯವಸ್ಥೆ

ಕಾರ್ಯಾಚರಣೆಗಳಲ್ಲಿ ಸಾರ್ವಜನಿಕರು ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮನವಿ ಮಾಡಿದ್ದಾರೆ.

‘ಅನುಮಾನಾಸ್ಪದವಾಗಿರುವ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಇದೊಂದೇ ಮಾರ್ಗ. ಯಾವುದೇ ಅಕ್ರಮ ಅಥವಾ ಅನೈರ್ಮಲ್ಯಕರ ಆಹಾರ ಕಂಡುಬಂದರೆ ಕಣ್ಮುಚ್ಚಿ ಕುಳಿತುಕೊಳ್ಳಬೇಡಿ, ದೂರು ನೀಡಿ’ ಎಂದು ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡುವಾಗ ಹೇಳಿದರು. ಅಲ್ಲದೆ ನಿಯಮಿತವಾಗಿ ಕಾರ್ಯಾಚರಣೆಗಳನ್ನು ನಡೆಸುತ್ತೇವೆ ಎಂದು ಭರವಸೆ ನೀಡಿದರು.

ತಾಲ್ಲೂಕು ಮಟ್ಟದಲ್ಲಿ ಶೀಘ್ರದಲ್ಲೇ ನಾಗರಿಕರ ನೇತೃತ್ವದ ಆಹಾರ ಸುರಕ್ಷತಾ ನಿಗಾ ತಂಡಗಳನ್ನು ರಚಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ‘ಆರೋಗ್ಯ ಮತ್ತು ಪೌಷ್ಟಿಕಾಂಶ ಕ್ಷೇತ್ರದ ಹಿನ್ನೆಲೆಯುಳ್ಳ ಹಿರಿಯರು ಹಾಗೂ ನಿವೃತ್ತರನ್ನು ಈ ತಂಡಗಳಿಗೆ ನೇಮಿಸಲಾಗುವುದು. ಈ ಮೂಲಕ ಜಾರಿ ಕಾರ್ಯಾಚರಣೆಗಳಲ್ಲಿ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ’ ಎಂದು ಅವರು ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ