
ಇನ್ಮುಂದೆ ಮಳೆ ಆದ್ರೂ ಫಲವಿಲ್ಲ: ಬರದಿಂದ ತತ್ತರಿಸಿರುವ ಹೊರ್ತಿ, ರೈತರ ಅಳಲು
ಹೊರ್ತಿ: ‘ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ ಬೆಳೆ ಮಳೆ ಕೊರತೆಯಿಂದ ನೆಲ ಬಿಟ್ಟು ಮೇಲೆದ್ದಿಲ್ಲ, ಹೂವಾಗಿಲ್ಲ, ಕಾಯಿಯೂ ಇಲ್ಲ. ಇನ್ಮುಂದೆ ಮಳೆ ಬಂದರೂ ಯಾವುದೇ ಫಲ ಇಲ್ಲ, ಬೆಳೆ ನಾಶ ಮಾಡುವುದೊಂದೇ ಬಾಕಿ ಇದೆ’ ಎನ್ನುತ್ತಾರೆ ಹೊರ್ತಿ ಭಾಗದ ರೈತರು.
ಮಳೆಯ ಭರವಸೆಯಿಂದ ಸಜ್ಜೆ, ತೊಗರಿ, ಹೆಸರು, ಹುರಳಿ, ಉದ್ದು, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಮಾಡಿದ್ದ ರೈತರು, ಈಗ ಬೆಳೆ ಕಣ್ಣೆದುರೇ ಒಣಗಿ ಹೋಗುತ್ತಿರುವುದನ್ನು ನೋಡಿ ಕಂಗಾಲಾಗಿದ್ದಾರೆ.
ಬಿಸಿಲು ಹಾಗೂ ಆಷಾಢ ಒಣಗಾಳಿ ಬೆಂಬಿಡದೆ ಬೀಸುತ್ತಿರುವುದರಿಂದ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳುವಂತಾಗಿದೆ. ಜುಲೈ ಎರಡನೇ ವಾರದೊಳಗೆ ವಾಡಿಕೆ ಮಳೆಗಿಂತ ಶೇ 60 ರಷ್ಟು ಮಳೆ ಕೊರತೆಯಾಗಿದೆ. ತದ ನಂತರ ಹನಿ ಮಳೆ ನೀರು ಭೂಮಿಗೆ ಬಿದ್ದಿಲ್ಲ.
ಮುಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದರಿಂದ ರೈತರ ಬದುಕು ಅಂತಂತ್ರವಾಗಿದೆ. ಪ್ರತಿ ವರ್ಷದ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದ್ದರಿಂದ ಮಳೆ ನಂಬಿ ಬಿತ್ತನೆ ಮಾಡಿದ ರೈತನ ಬದುಕು ಬೀದಿಗೆ ಬಂದಿದೆ.
ಜೂನ್ ಆರಂಭದಲ್ಲಿ ಅಲ್ಪ ಸ್ವಲ್ಪ ಮಳೆ ನಂಬಿ, ದೇವರ ಮೇಲೆ ಭಾರ ಹಾಕಿ ಬಿತ್ತನೆ ಮಾಡಿದ ರೈತನ ಬದುಕು ದುಸ್ತರವಾಗಿ ಕೈ ಕೈ ಹಿಚುಕಿಕೊಳ್ಳುವಂತಾಗಿದೆ.
ಚಡಚಣ ತಾಲ್ಲೂಕಿನಾದ್ಯಂತ ಕೃಷಿ ಹಾಗೂ ವಾಣಿಜ್ಯ ಬೆಳೆಗಳೆ ಸೇರಿದಂತೆ ಶೇ 70 ರಷ್ಟು ಬಿತ್ತನೆಯಾಗಿದೆ. ಭೀಮಾ ನದಿ ತೀರ ಹಾಗೂ ಕೃಷ್ಣಾ ಕಾಲುವೆ ಪಕ್ಕದಲ್ಲಿರುವ ರೈತರಿಗೆ ಸ್ವಲ್ಪ ನೀರಿನ ಅನುಕೂಲತೆ ಇದ್ದರೂ, ನೀರಿಕ್ಷಿತ ಪ್ರಮಾಣದಲ್ಲಿ ವಾಣಿಜ್ಯ ಬೆಳೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ತೇವಾಂಶ ಕೊರತೆಯಿಂದಾಗಿ ಕೃಷಿ ಬೆಳೆಯಂತೂ ನೆಲ ಬಿಟ್ಟು ಮೇಲೆಳುತ್ತಿಲ್ಲ.
ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಮೆಕ್ಕೆ ಜೋಳ, ತೊಗರಿಗೆ ಬರುತ್ತವೆ. ಹಬ್ಬ ಹರಿದಿನ, ಮಕ್ಕಳ ಶಿಕ್ಷಣಕ್ಕೆ ಅಲ್ಪ ಸ್ವಲ್ಪ ಅನುಕೂಲವಾಗುತ್ತದೆ ಎಂದು ನಂಬಿದ್ದ ರೈತನ ಕೈಯಲ್ಲಿ ನಯಾ ಪೈಸಾ ಇಲ್ಲ. ಆಗಸ್ಟ್ ತಿಂಗಳಲ್ಲಿ ಮಳೆಯಾಗಿಲ್ಲ. ಎಲ್ಲಿಯಾದರೂ ಕೆಲಸಕ್ಕೆ ಹೋಗಬೇಕು ಎಂದರೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಸಾಕಿದ ದನ ಕರುಗಳಿಗೆ ಮೇವಿನ ಚಿಂತೆಯಾದರೆ, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗುವದಂತೂ ನಿಶ್ಚಿತ ಎನ್ನುತ್ತಾರೆ ಇಂಚಗೇರಿ ರೈತ ಸಿದ್ದು ಅಗಸರ, ಅಮಸಿದ್ಧ.