
ಕ್ರಿಕೆಟ್: ಭಾರತ ತಂಡದ ಬಾಂಗ್ಲಾ ಪ್ರವಾಸ ಅನುಮಾನ
ನವದೆಹಲಿ (ಪಿಟಿಐ): ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು (ಎಸಿಬಿ) ಸೆ.13, 15 ಮತ್ತು 17ರಂದು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಯೋಜಿಸಲಿದೆ ಎಂದು ವರದಿಯೊಂದು ತಿಳಿಸಿದೆ.
ಸೆ.1ರಿಂದ 13ರವರೆಗೆ ಸೀಮಿತ ಓವರ್‌ಗಳ ಆರು ಪಂದ್ಯಗಳನ್ನು ಒಳಗೊಂಡ ಭಾರತ ಪುರುಷರ ತಂಡದ ಬಾಂಗ್ಲಾದೇಶ ಪ್ರವಾಸವು ನಿಗದಿಯಾಗಿತ್ತು. ಆದರೆ, ಈ ಬೆಳವಣಿಗೆಯು ಬಾಂಗ್ಲಾ ಪ್ರವಾಸದ ಬಗ್ಗೆ ಅನುಮಾನ ಹುಟ್ಟುಹಾಕಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
‘ಭಾರತ ವಿರುದ್ಧದ ಅಫ್ಘಾನಿಸ್ತಾನ ಪ್ರವಾಸ ಸೆ.13ರಿಂದ 17ರವರೆಗೆ ನಿಗದಿಯಾಗಿದೆ ಎಂಬುದನ್ನು ಈ ಮೂಲಕ ಖಚಿತಪಡಿಸುತ್ತೇವೆ’ ಎಂದು ಎಸಿಬಿ ಸಿಇಒ ನಸೀಬ್ ಖಾನ್ ಅವರು ಮಂಡಳಿಯ ವಾಣಿಜ್ಯ ಪಾಲುದಾರರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಸರಣಿಯ ದಿನಾಂಕಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆ ಚರ್ಚಿಸಿ ದೃಢೀಕರಿಸಲಾಗಿದೆ. ಪಂದ್ಯಗಳ ತಾಣಗಳನ್ನು ಸಹ ಅಂತಿಮಗೊಳಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-51-939137798