
ಹಳೇಬೀಡು: ಅಡಗೂರು ಜಿನ ಮಂದಿರದಲ್ಲಿ ಜಿನಬಿಂಬ, ಕಳಸ ಪ್ರತಿಷ್ಠಾಪನೆ,ಪುಣ್ಯಪ್ರಭಾವನೆ
ಹಳೇಬೀಡು: ಭಕ್ತರ ಜಯಘೋಷ, ಪುರೋಹಿತರ ಮಂತ್ರಘೋಷ, ವಾದ್ಯಘೋಷದೊಂದಿಗೆ ಅಡಗೂರು ಜಿನ ಮಂದಿರದಲ್ಲಿ ಭಾನುವಾರ ಮಾನಸ್ತಂಭದ ಮಂಟಪದಲ್ಲಿ ಚತುರ್ಮುಖ ಜಿನ ಬಿಂಬ ಹಾಗೂ ಶಿಖರದ ಮೇಲೆ ಕಳಸ ಪ್ರತಿಷ್ಠಾಪನೆ ಹಾಗೂ ಪುಣ್ಯಪ್ರಭಾವನೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮಂದಿರದಲ್ಲಿ ಮುಂಜಾನೆಯೇ ಮಂಗಲಾಷ್ಟಕ, ಸುಪ್ರಭಾತ ನಂತರ ಮಹಾವೀರ ತೀರ್ಥಂಕರ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು.
ಪುರಪ್ರವೇಶ ಮಾಡಿದ ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಶ್ರಾವಕ– ಶ್ರಾವಕಿಯರು ಪುಷ್ಪವೃಷ್ಟಿಯೊಂದಿಗೆ ಸ್ವಾಗತಿಸಿದರು. ನಂತರ ಬೆಳ್ಳಿರಥದಲ್ಲಿ ಸ್ವಾಮೀಜಿ ಅವರನ್ನು ಜಿನಮಂದಿರಕ್ಕೆ ಕರೆತರಲಾಯಿತು.
ವಿವಿಧ ಪೂಜಾ ವಿಧಾನ ನಡೆಸಿದ ನಂತರ ಚತುರ್ಮುಖ ಜಿನಬಿಂಬ ಹಾಗೂ ಶಿಖರದ ಕಳಸವನ್ನು ಮೆರವಣಿಗೆಯಲ್ಲಿ ತರಲಾಯಿತು ಮುನಿಶ್ರೀ ವೀರಸಾಗರ ಮಹಾರಾಜ್ ಹಾಗೂ ಭಟ್ಟಾರಕಸ್ವಾಮೀಜಿ ಅವರ ಸಮ್ಮುಖದಲ್ಲಿ ಊರಿನ ಜೈನ ಯುವಕರು ಚತುರ್ಮುಖ ಜಿನ ಬಿಂಬ ಪ್ರತಿಷ್ಠಾಪಿಸಿದರು.
ಪ್ರತಿಷ್ಠಾಪನೆ ನೆರವೇರಿದ ತಕ್ಷಣ ಸಣ್ಣದಾಗಿ ಮಳೆ ಸಿಂಚನ ಆಗಿದ್ದನ್ನು ಭಕ್ತರು ಶುಭ ಲಕ್ಷಣ ಎಂದು ಸಂಭ್ರಮಿಸಿದರು. ಎ.ಎನ್. ಧರಣೇಂದ್ರ ಸಹೋದರರು ಕಳಸ ಪ್ರತಿಷ್ಠಾಪಿಸಿ ಪುಣ್ಯ ಪ್ರಭಾವನೆ ಮಾಡಿಕೊಂಡರು.
ಜಿನ ಬಿಂಬಗಳಿಗೆ 108 ಕಳಸದ ಜಲ. ಗಂಧ, ಎಳನೀರು, ಕಷಾಯ, ಕಬ್ಬಿನಹಾಲು, ಅರಸಿನ, ಚಂದನ, ಕಲ್ಕಚೂರ್ಣ, ಪುಷ್ಪಗಳಿಂದ ಅಭಿಷೇಕ ನೆರವೇರಿಸಲಾಯಿತು.
ಚತುಷ್ಕೋನ ಹಾಗೂ ಪೂರ್ಣ ಕಳಸದ ಅಭಿಷೇಕ ನೆರವೇರಿಸಿದ ನಂತರ ಜಗತ್ತಿನ ಸಕಲ ಜೀವಿಗಳಿಗೆ ಶಾಂತಿ, ನೆಮ್ಮದಿ ಮುಕ್ತಿ ದೊರಕಲಿ ಎಂದು ಪ್ರಾರ್ಥಿಸಿ ಜಿನ ಬಿಂಬಗಳಿಗೆ ಶಾಂತಿಧಾರೆ ನೆರವೇರಿಸಲಾಯಿತು. ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಜಿನ ಗಾಯನ ಪ್ರಸ್ತುತಪಡಿಸಿ, ನೆರೆದಿದ್ದವರನ್ನು ಭಕ್ತಿಲೋಕಕ್ಕೆ ಕೊಂಡೊಯ್ದರು.
ಭಕ್ತರು ಸರದಿ ಸಾಲಿನಲ್ಲಿ ಅಟ್ಟಣಿಗೆಯ ಮೆಟ್ಟಿಲೇರಿ ಚತುರ್ಮುಖ ಜಿನ ಬಿಂಬದ ದರ್ಶನ ಪಡೆದರು.
ಪ್ರಮುಖರಾದ ಎ.ಎಸ್.ನಾಗೇಂದ್ರ ಕುಮಾರ್, ಶಾಮಲ ಜಿನರಾಜಯ್ಯ, ಡಾ.ನಿರಜಾ ನಾಗೇಂದ್ರ ಕುಮಾರ್, ಶಶಿಕುಮಾರ್, ಧವನ್ ಜೈನ್, ಎ.ಬಿ.ಕಾಂತರಾಜು, ಪುಷ್ಪರತ್ನರಾಜು, ಸುಧಾ ವಿಜಯ್ ಕುಮಾರ್, ಪ್ರಾಧ್ಯಾಪಕ ಎ.ಪಿ.ಪವನ್ ಕುಮಾರ್, ನಿಶ್ಚಲ ಸನತ್ ಕುಮಾರ್ ಪಾಲ್ಗೊಂಡಿದ್ದರು.
ಶ್ರವಣಬೆಳಗೊಳ– ಅಡಗೂರಿಗೆ ಸಂಬಂಧ
ಶ್ರವಣಬೆಳಗೊಳ ಹಾಗೂ ಅಡಗೂರು ಗ್ರಾಮಕ್ಕೆ ಐತಿಹಾಸಿಕ ಮಹತ್ವದ ಸಂಬಂಧವಿದೆ. ಹೊಯ್ಸಳರ ಕಾಲದಲ್ಲಿ ಅಡಗೂರು ಬಳಿಯ ರಾಶಿಗುಡ್ಡದಲ್ಲಿ ಸಂಭವಿಸಿದ ಜ್ವಾಲಾಮುಖಿಯನ್ನು ಶಮನ ಮಾಡಲು, ಶ್ರವಣಬೆಳಗೊಳದ ಶುಭಚಂದ್ರ ಮುನಿ ಮಹಾರಾಜರು, ಆನೆಯ ಮೇಲೆ ಕೂಷ್ಮಾಂಡಿನಿ ಮಾತೆಯನ್ನು ಕರೆತಂದು ವಿವಿಧ ಪೂಜಾ ವಿಧಾನ ನಡೆಸಿದರು. ಹೊಯ್ಸಳ ರಾಜರು ಶ್ರವಣಬೆಳಗೊಳದ ಸ್ವಾಮೀಜಿ ಅವರಿಗೆ ಚಾರುಕೀರ್ತಿ ಬಿರುದು ನೀಡಿದರು. ಹೀಗಾಗಿ ಅಡಗೂರು ಚಾರುಕೀರ್ತಿ ಪೀಠ ಸ್ಥಾಪನೆಗೆ ಕಾರಣವಾಗಿದೆ ಎಂದು ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅಡಗೂರಿನ ದೇವಪ್ಪ ಮುನಿಗಳಿಗೆ ಶ್ರವಣಬೆಳಗೊಳದಲ್ಲಿ ಮುನಿ ದೀಕ್ಷೆ ನಡೆದಿದೆ ಎಂಬುದಕ್ಕೆ ದಾಖಲೆಗಳಿವೆ. ಅಡಗೂರು ಜಿನಮಂದಿರ ಆವರಣದಲ್ಲಿರುವ ದೇವಪ್ಪ ಸ್ವಾಮಿ ಅವರ ಪಾದಗಳಿಗೆ ಶ್ರವಣಬೆಳಗೊಳ ಮಠದಿಂದ ಶಿಲಾಮಯ ಮಂಟಪ ನಿರ್ಮಿಸಿಕೊಡುತ್ತೇವೆ ಎಂದರು.
ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಜೈನ ಧರ್ಮ ಪ್ರಬಲವಾಗಿತ್ತು. ಹಾಸನ ಜಿಲ್ಲೆ ಒಂದರಲ್ಲಿಯೇ ಸಾವಿರಾರು ಜಿನ ಮಂದಿರಗಳು ನೆಲಸಮಗೊಂಡಿವೆ. ಈಗ ಜೈನ ಯುವಕರು ಧರ್ಮ ರಕ್ಷಣೆಗೆ ಮುಂದಾಗಬೇಕು. ಜೈನಕ್ಷೇತ್ರ, ಜಿನಮಂದಿರ, ಜಿನಮೂರ್ತಿ ಹಾಗೂ ಜೈನ ಶಾಸನಗಳನ್ನು ರಕ್ಷಣೆ ಮಾಡಬೇಕು. ಎಲ್ಲರೂ ಒಗ್ಗಟ್ಟನಿಂದ ಧರ್ಮ ಜಾಗೃತಿಯಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-36-1536784815