ಸಚಿವ ನಾಗೇಂದ್ರ ಪ್ರಕರಣ: ಸಿ.ಎಸ್‌ಗೆ ರಾಜ್ಯಪಾಲರ ಪತ್ರ

ಸಚಿವ ನಾಗೇಂದ್ರ ಪ್ರಕರಣ: ಸಿ.ಎಸ್‌ಗೆ ರಾಜ್ಯಪಾಲರ ಪತ್ರ

ಸಚಿವ ನಾಗೇಂದ್ರ ಪ್ರಕರಣ: ಸಿ.ಎಸ್‌ಗೆ ರಾಜ್ಯಪಾಲರ ಪತ್ರ

ಬೆಂಗಳೂರು: ‘ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಪ್ರಸ್ತಾವವನ್ನು ಸಚಿವ ಸಂಪುಟ ಸಭೆ ಮುಂದೆ ಮಂಡಿಸಿ, ಶಿಫಾರಸು ಮಾಡಿ’ ಎಂದು ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ. 

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ, ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಈಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಜಂಟಿ ಹೋರಾಟ ನಡೆಸಿದ್ದವು. ಹೀಗಾಗಿ, ಎಂಟು ದಿನಗಳ ಅಧಿವೇಶನದಲ್ಲಿ ಗರಿಷ್ಠ 25 ಗಂಟೆಗಳಷ್ಟೇ ಕಲಾಪ ನಡೆದಿತ್ತು. ಹೋರಾಟವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಲು ಮುಂದಾಗಿರುವ ಬಿಜೆಪಿ ನಾಯಕರು, ಪಾದಯಾತ್ರೆ ನಡೆಸುವುದಾಗಿಯೂ ಘೋಷಿಸಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿ.ಎಸ್‌) ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. 

‘ಸಿಬಿಐ ಮತ್ತು ಇ.ಡಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿ ಪತ್ರ ಬರೆದಿವೆ. ಅವುಗಳನ್ನು ಉಲ್ಲೇಖಿಸಿ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ’ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

‘ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ ಪ್ರಸ್ತಾವಗಳ ಬಗ್ಗೆ ಕಾನೂನು ತಜ್ಞರ ಜೊತೆ ರಾಜ್ಯಪಾಲರು ಚರ್ಚೆ ನಡೆಸಿದ್ದಾರೆ. ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ ಅವರನ್ನು ರಾಜ್ಯ ಸಚಿವ ಸಂಪುಟದ ಸಲಹೆ, ಶಿಫಾರಸು ಇಲ್ಲದೆ ಅಮಾನತು ಮಾಡಿದ್ದ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್‌ ರದ್ದು ಮಾಡಿತ್ತು. ರಾಜ್ಯಪಾಲರಿಗೆ ಕೆಲವು ವಿಚಾರಗಳಲ್ಲಿ ವಿವೇಚನಾಧಿಕಾರ ಇದೆಯಾದರೂ, ಇಂತಹ ವಿಚಾರಗಳಲ್ಲಿ ಮಂತ್ರಿ ಪರಿಷತ್‌ ತೆಗೆದುಕೊಳ್ಳುವ ನಿರ್ಣಯವೂ ಮುಖ್ಯವಾಗುತ್ತದೆ. ನಾಗೇಂದ್ರ ವಿರುದ್ಧದ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮೋದನೆ ನೀಡುವ ವಿಚಾರದಲ್ಲಿಯೂ ಏಕಾಏಕಿ ಶಿಫಾರಸು ಮಾಡಿದರೆ ಕಾನೂನು ಸಮಸ್ಯೆ ಎದುರಾಗಬಹುದು. ಅದಕ್ಕೆ ಅವಕಾಶ ಆಗದಂತೆ, ಮಂತ್ರಿ ಪರಿಷತ್‌ ಶಿಫಾರಸು ಮಾಡಿದ ನಂತರ ಪ್ರಾಸಿಕ್ಯೂಷನ್‌ಗೆ ಒಪ್ಪಿಗೆ ನೀಡಬಹುದೆಂಬ ಕಾನೂನು ತಜ್ಞರ ಸಲಹೆಯಂತೆ ರಾಜ್ಯಪಾಲರು ಪತ್ರ ಬರೆದಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ನಾಗೇಂದ್ರ ಮತ್ತು ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಮೇ 20ರಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಕ್ಷಮ ಪ್ರಾಧಿಕಾರಗಳಿಗೆ ಸಿಬಿಐ ಈಗಾಗಲೇ ಪತ್ರ ಬರೆದಿದೆ ಎಂದೂ ಮೂಲಗಳು ಹೇಳಿವೆ.

ರಾಜೀನಾಮೆ ವದಂತಿಯಷ್ಟೆ..

'ನನ್ನ ರಾಜೀನಾಮೆ ಕುರಿತ ಎಲ್ಲ ವದಂತಿಗಳು ಸತ್ಯಕ್ಕೆ ದೂರವಾಗಿವೆ' ಎಂದು ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ. 'ಮುಖ್ಯಮಂತ್ರಿ ಕಚೇರಿಯಿಂದ ನನಗೆ ಯಾವುದೇ ಕರೆ ಬಂದಿಲ್ಲ. ರಾಜೀನಾಮೆ ವಿಚಾರ ಚರ್ಚೆ ಆಗಿಲ್ಲ' ಎಂದೂ ಪ್ರಕಟಣೆಯಲ್ಲಿ ಹೇಳಿದ್ದಾರೆ.

'ಕಾಂಗ್ರೆಸ್‌ನಲ್ಲಿ ಎಲ್ಲರೂ ಶಿಸ್ತಿನ ಸಿಪಾಯಿಗಳು'

'ಕಾಂಗ್ರೆಸ್‌ ಪಕ್ಷದಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಸೇರಿ ಎಲ್ಲರೂ ಶಿಸ್ತಿನ ಸಿಪಾಯಿಗಳು' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

'ಸಚಿವ ನಾಗೇಂದ್ರ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ವದಂತಿಗಳಿವೆಯಲ್ಲ' ಎಂದು ಸುದ್ದಿಗಾರರು ಹೇಳಿದಾಗ ಶಿವಕುಮಾರ್ ಈ ರೀತಿ ಪ್ರತಿಕ್ರಿಯಿಸಿದರು.

'ನಾಗೇಂದ್ರ ಅವರು ಎರಡು ವರ್ಷಗಳಿಂದಲೂ ಸಂಪುಟದಿಂದ ಹೊರಗಿದ್ದರು. ಇಲಾಖೆ ನಡೆಸಿದ ಆಂತರಿಕ ತನಿಖೆಯಲ್ಲಿ, ಪ್ರಕರಣದಲ್ಲಿ ಅವರ ಕೈವಾಡ ಇಲ್ಲ ಎಂದು ಬಂದಿದೆ. ಹೀಗಾಗಿ, ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದೇವೆ' ಎಂದರು.

'ಈ ಪ್ರಕರಣದಲ್ಲಿ ಎಸ್‌ಐಟಿ 'ಬಿ' ರಿಪೋರ್ಟ್ ಬರೆಯುವ ಮೊದಲೇ ಸಿಬಿಐ, ಇ.ಡಿ ಮಧ್ಯಪ್ರವೇಶ ಮಾಡಿವೆ. ಈ ಸಂಸ್ಥೆಗಳು ನಾಗೇಂದ್ರ ಮನೆಯಲ್ಲಿ ಒಂದು ರೂಪಾಯಿಯನ್ನೂ ಪತ್ತೆ ಮಾಡಿಲ್ಲ. ಈ ಹಗರಣದಲ್ಲಿ ಲೂಟಿ ಮಾಡಿದ್ದ ಶೇ 95ರಷ್ಟು ಹಣವನ್ನು ವಾಪಸ್ ಪಡೆಯಲಾಗಿದೆ' ಎಂದೂ ಹೇಳಿದರು.

ಮಂತ್ರಿ ಪರಿಷತ್ತಿನ ಸಲಹೆ ಅಗತ್ಯ

'ಮಂತ್ರಿ ಪರಿಷತ್‌ನ ನೆರವು ಮತ್ತು ಸಲಹೆಯ ಮೇರೆಗೆ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸಬೇಕು ಮತ್ತು ಅಧಿಕಾರ ಚಲಾಯಿಸಬೇಕಾಗುತ್ತದೆ' ಎನ್ನುತ್ತದೆ ಸಂವಿಧಾನದ 163ನೇ ವಿಧಿ. ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸಿ ತೆಗೆದು ಕೊಂಡ ನಿರ್ಧಾರವು ಅಂತಿಮ ಮತ್ತು ಅದನ್ನು ಪ್ರಶ್ನಿಸುವಂತಿಲ್ಲ. ಆದರೆ, ಆ ನಿರ್ಧಾರವನ್ನು ಮಂತ್ರಿ ಪರಿಷತ್ತಿನ ಸಲಹೆಯ ಅನ್ವಯ ತೆಗೆದುಕೊಂಡಿರಬೇಕು ಎಂದು ಈ ವಿಧಿಯಲ್ಲಿ ವಿವರಿಸಲಾಗಿದೆ.

ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸಿ ತೆಗೆದು ಕೊಂಡ ನಿರ್ಧಾರವು ಮಂತ್ರಿ ಪರಿಷತ್ತಿನೊಂದಿಗೆ ಸಹಮತದಲ್ಲಿ ಇರಬೇಕು ಎಂದು ಸಂಶೇರ್ ಸಿಂಗ್ ಮತ್ತು ಪಂಜಾಬ್ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಈ ಕಾರಣಕ್ಕಾಗಿಯೇ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ಹೇಳಿವೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ