ಸಂಸತ್‌ ಸದಸ್ಯ ಬಲ ಹೆಚ್ಚಿಸಕೂಡದು: ರಾಜ್ಯ ಸರ್ಕಾರ

ಸಂಸತ್‌ ಸದಸ್ಯ ಬಲ ಹೆಚ್ಚಿಸಕೂಡದು: ರಾಜ್ಯ ಸರ್ಕಾರ

ಸಂಸತ್‌ ಸದಸ್ಯ ಬಲ ಹೆಚ್ಚಿಸಕೂಡದು: ರಾಜ್ಯ ಸರ್ಕಾರ

ಬೆಂಗಳೂರು: ‘ಲೋಕಸಭೆಯ ಸದಸ್ಯ ಬಲವನ್ನು 543ಕ್ಕೆ ಮಿತಿಗೊಳಿಸಬೇಕು. ಮುಂಬರುವ ಲೋಕಸಭಾ ಚುನಾವಣೆ ಮತ್ತು ಆ ನಂತರ ನಡೆಯುವ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳ ಮೀಸಲಾತಿ ಸೌಲಭ್ಯ ಖಚಿತಪಡಿಸಬೇಕು’ ಎಂದು ನಿರ್ಣಯ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಸದ್ಯ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿಯೇ ಈ ನಿರ್ಣಯ ಮಂಡಿಸಿ, ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ.

‘ಲೋಕಸಭೆಯ ಪ್ರಸ್ತುತ ಸ್ಥಾನಗಳ ಸಂಖ್ಯೆಯನ್ನು ಈಗಿರುವ ಅನುಪಾತದಲ್ಲಿಯೇ ಅಂದರೆ ರಾಜ್ಯಗಳ ನಡುವಿನ ಪ್ರಮಾಣಾನುಪಾತದ ಹಂಚಿಕೆಯಂತೆಯೇ ಶಾಶ್ವತಗೊಳಿಸಬೇಕು. ಲೋಕಸಭೆ ಹಾಗೂ ರಾಜ್ಯಸಭೆ ನಡುವಿನ ಪ್ರಸ್ತುತ 2.2:1ರ ಅನುಪಾತ ಹಾಗೆಯೇ ಮುಂದುವರೆಸಬೇಕೆಂದು ನಿರ್ಣಯ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಮತ್ತು ವಿಧಾನಸಭೆಗಳ ಸದಸ್ಯರ ಸಂಖ್ಯೆಯನ್ನು ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 50 ವರ್ಷಗಳಿಂದ 1971ರ ಜನಗಣತಿಯ ಅಂಕಿಅಂಶಗಳ ಆಧಾರದಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ, ಅದಕ್ಕೆ ಅನುಗುಣವಾಗಿ ಚುನಾವಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಕ್ಷೇತ್ರಗಳ ಪುನರ್‌ವಿಂಗಡಣೆಯ ಮೇಲಿನ 50 ವರ್ಷಗಳ ಹಳೆಯ ನಿರ್ಬಂಧವನ್ನು ತೆರವುಗೊಳಿಸಲು, 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಕೈಗೊಳ್ಳಲು ಮತ್ತು ಲೋಕಸಭೆಯ ಒಟ್ಟು ಸದಸ್ಯ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದ್ದ ಸಂವಿಧಾನ ತಿದ್ದುಪಡಿ ಮಸೂದೆಯು ಇದೇ ಏಪ್ರಿಲ್‌ ತಿಂಗಳಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡಿಲ್ಲ.

ಸಂವಿಧಾನಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದ ಈ ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮರು ಮಂಡಿಸುವ ಸಾಧ್ಯತೆಯಿದೆ. ಒಂದು ವೇಳೆ ಜನಸಂಖ್ಯೆಯನ್ನು 1971ರ ನಂತರದ ಯಾವುದೇ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಕೈಗೊಂಡರೆ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯದ ಮೇಲೆ ಶಾಶ್ವತವಾದ ಪ್ರತಿಕೂಲ ಪರಿಣಾಮ ಉಂಟಾಗಲಿದೆ.

‘ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳನ್ನು ಸಮರ್ಥವಾಗಿ ಜಾರಿಗೆ ತಂದಿರುವ, ಉತ್ತಮ ಆರ್ಥಿಕ ಪ್ರಗತಿಯನ್ನು ಸಾಧಿಸಿರುವ ಹಾಗೂ ಸೂಕ್ತ ಆರೋಗ್ಯ ಸೇವೆ ಮತ್ತು ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಯಾವುದೇ ರಾಜ್ಯಕ್ಕೂ ಕ್ಷೇತ್ರ ಪುನರ್‌ ವಿಂಗಡಣೆಯಿಂದ ಅನ್ಯಾಯ ಅಥವಾ ಪ್ರತಿಕೂಲ ಪರಿಣಾಮ ಉಂಟಾಗದಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ’ ಎಂದೂ ರಾಜ್ಯ ಸರ್ಕಾರ ಈ ನಿರ್ಣಯದಲ್ಲಿ ಪ್ರತಿಪಾದಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ