
Bengaluru Weather: ನಗರದಲ್ಲಿಂದು 38 ವಾರ್ಡ್‌ಗಳಲ್ಲಿ ಮಳೆ, ಕರೆಂಟ್ ಕಟ್! ಆಗಸ್ಟ್ 20ವರೆಗಿನ ಮುನ್ಸೂಚನೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ (ಆಗಸ್ಟ್ 14) ಮತ್ತೆ ಮುಂಗಾರು ಮಳೆ ಸಕ್ರಿಯವಾಗಿದೆ. ನಗರದ ಅನೇಕ ಕಡೆಗಳಲ್ಲಿ ಜೋರು ಮಳೆ ದಾಕಲಾಗಿದೆ. ಸಂಜೆ 6 ಗಂಟೆ ನಂತರ ಒಟ್ಟು 38 ವಾರ್ಡ್‌ಗಳಲ್ಲಿ ಮಳೆ ತಂಪೆರೆದಿದೆ. ಮುಂದಿನ ಆಗಸ್ಟ್ 20ರವರೆಗೆ ಬೆಂಗಳೂರು ಹವಾಮಾನ ಕೇಂದ್ರ ನೀಡಿದ ಮುನ್ಸೂಚನೆ ಇಲ್ಲಿದೆ.
ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ತಂಪು ಹಾಗೂ ಮೋಡ ಕವಿದ ವಾತಾವರಣ ಕಂಡು ಬರುತ್ತಿತ್ತು. ಕೆಲವು ಕಡೆಗಳಲ್ಲಿ ಸೋನೆ ಮಳೆ ಬಿಟ್ಟರೆ ಜೋರು ಮಳೆ ಆಗಿರಲಿಲ್ಲ. ಇದೀಗ ಶುಕ್ರವಾರ ಸಂಜೆ ಎಚ್ ಎಸ್ ಆರ್ ಬಡಾವಣೆ, ಬೊಮ್ಮನಹಳ್ಳಿ, ಕೋರಮಂಗಲ ಮತ್ತು ಯಲಹಂಕ ಭಾಗದಲ್ಲಿ ಅಧಿಕ ಮಳೆ ದಾಖಲಾಗಿದೆ. ಕೆಲವೆಡೆ ಮಳೆಗೆ ರಾತ್ರಿ ವಿದ್ಯುತ್ ಕಡಿತಗೊಂಡಿದ್ದು, ಕತ್ತಲ್ಲಲ್ಲೇ ಹಲವು ಗಂಟೆಗಳ ಸಮಯ ಕಳೆಯುವಂತಾಯಿತು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಮಳೆ ಬರುತ್ತಿದ್ದಂತೆ ಮಳೆ ವಿಡಿಯೋ, ಫೋಟೋಗಳು ವೈರಲ್ ಆಗಿವೆ.
ಅಟ್ಟೂರು, ಚೌಡೇಶ್ವರಿ, ಯಲಹಂಕ, ವಿಜಯನಗರ, ರಾಜರಾಜೇಶ್ವರಿ ನಗರ, ಮಾರತ್ತಹಳ್ಳಿ, ವಿದ್ಯಾರಣ್ಯಪುರ, ಜಕ್ಕೂರು, ಬೆಳ್ಳಂದೂರು, ಬಿಳೇಕಹಳ್ಳಿ, ಅರಕೆರೆ, ಉತ್ತರಹಳ್ಳಿ, ವಸಂತಪುರ, ಅಂಜನಾಪುರ, ವಿವಿ ಪುರಂ, ಚಲವಾದಿ ಪಾಳ್ಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಜಿಟಿ ಜಿಟಿ ಮಳೆ ಸುರಿದಿದೆ, ಕೆಲವೆಡೆ 4.5ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ಬೆಂಗಳೂರು ಗ್ರಾಮಾಂತರ ಭಾಗವಾದ ಹೊಸಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಜೋರು ಮಳೆ ಆಗಿದೆ. ಬೆಂಗಳೂರು ನಗರ, ಗ್ರಾಮಾಂತರ ಭಾಗಗಳಲ್ಲೂ ಮಳೆ ಮುಂದುವರಿಯಲಿದೆ ಎಂಬ ಮುನ್ನೆಚ್ಚರಿಕೆ ಕೊಡಲಾಗಿದೆ.
ಆಗಸ್ಟ್ 20ರವರೆಗೆ ಬೆಂಗಳೂರಲ್ಲಿ ಮಳೆ ಮುನ್ಸೂಚನೆ
ಬೆಂಗಳೂರು ಹವಾಮಾನ ಕೇಂದ್ರ ನೀಡಿರುವ ಮುನ್ಸೂಚನೆ ಪ್ರಕಾರ, ಮುಂದಿನ ಆಗಸ್ಟ್ 20ರವರೆಗೆ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ. ಕೊಂಚ ಬಿಸಿಲು ಸಹಿತ ತಂಪು ವಾತಾವರಣ, ಮಬ್ಬು ವಾತಾವರಣ ಕಂಡು ಬರಲಿದೆ. ನಗರದ ಗರಿಷ್ಠ ತಾಪಮಾನ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.
ರಾಜ್ಯ ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ಮಳೆನಾಡು ಜಿಲ್ಲೆಗಳನ್ನು ದಕ್ಷಿಣ ಒಳನಾಡು ಜಿಲ್ಲೆಗಳ ವಿವಿಧೆಡೆ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ. ಕಳೆದ ಕೆಲವು ವಾರಣಗಳಿಂದ ಉತ್ತರ ಕರ್ನಾಟಕದ ವಿವಿಧೆಡೆ ಸುರಿಯುತ್ತಿದ್ದ ಹಗುರ ಮಳೆಯು ಮುಂದಿನ ವಾರವು ಮುಂದುವರಿಯುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.