
BDA Sites: ನಿವೇಶನ ಹಂಚಿಕೆಯಲ್ಲಿ ಕನ್ನಡಿಗರಿಗೆ ಅನ್ಯಾಯ? ಮಾನದಂಡ 25 ವರ್ಷಕ್ಕೆ ವಿಸ್ತರಿಸಲು ಒತ್ತಾಯ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಬಡಾವಣೆಗಳಲ್ಲಿ ನಿವೇಶನ ಹಂಚಿಕೆಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸೈಟ್ ಹಂಚಿಕೆಗೆ ಇರುವ 15 ವರ್ಷದ ಡೊಮಿಸೈಲ್ ಮಾನದಂಡವನ್ನು ತಕ್ಷಣ ಕನಿಷ್ಠ 25 ವರ್ಷಗಳಿಗೆ ವಿಸ್ತರಿಸಬೇಕು, ಈ ಮನವಿಗೆ ಸ್ಪಂದಿಸುವಂತೆ ಒತ್ತಾಯ ಕೇಳಿ ಬಂದಿದೆ.
ಬಿಡಿಎ ಸೈಟ್ ಹಂಚಿಕೆ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಅವರು, 1984ರ ಕಾಲಘಟ್ಟದಲ್ಲಿ ರೂಪುಗೊಂಡ ಮಾನದಂಡ ಇಂದಿಗೂ ಮುಂದುವರಿಸಲಾಗುತ್ತಿದೆ. ಈ ಮೂಲಕ ಸರ್ಕಾರದ ನಿರ್ಲಕ್ಷ್ಯ ಧೋರಣೆ ಸಾಬೀತಾಗುತ್ತದೆ. ಮೂರು ದಶಕಗಳಲ್ಲಿ ಬೆಂಗಳೂರು ಸಂಪೂರ್ಣವಾಗಿ ಬದಲಾಗಿದೆ. ಆದರೆ ಸರ್ಕಾರದ ನಿಯಮಗಳು ಮಾತ್ರ ಬದಲಾಗಿಲ್ಲ. ಇದರ ನೇರ ಹೊಡೆತ ತಲೆತಲಾಂತರಗಳಿಂದ ಕರ್ನಾಟಕದಲ್ಲಿ ಬದುಕುತ್ತಿರುವ ಕನ್ನಡಿಗರ ಮೇಲಾಗುತ್ತಿದೆ ಎಂದು ಅವರು ಕಿಡಿ ಕಾರಿದರು.
ಕನ್ನಡಿಗರ ಭೂಮಿ ಸ್ವಾಧೀನ: ಕನ್ನಡಿಗರಿಗಿಲ್ಲ ಸೈಟ್!
ಬೆಂಗಳೂರು ಅಭಿವೃದ್ಧಿಯ ಹೆಸರಿನಲ್ಲಿ ಕನ್ನಡಿಗ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು, ಅದೇ ಭೂಮಿಯನ್ನು ಸೈಟುಗಳಾಗಿ ಪರಿವರ್ತಿಸಿ, ಕನ್ನಡಿಗನೇ ಖರೀದಿಸಲಾಗದಷ್ಟು ದುಬಾರಿ ಬೆಲೆ ನಿಗದಿಪಡಿಸುವುದು ಯಾವ ರೀತಿಯ ಅಭಿವೃದ್ಧಿ? ಪ್ರಶ್ನಿಸಿದರು.
ಬಿಡಿಎ ಸೈಟ್‌ಗಳ ದರ ಗಗನಕ್ಕೆ..!
ಬಿಡಿಎ ಸಾರ್ವಜನಿಕ ವಸತಿ ಒದಗಿಸುವ ಸಂಸ್ಥೆಯೇ ಹೊರತು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಯಲ್ಲ. ಆದರೆ ಇಂದು ಬಿಡಿಎ ಸೈಟ್‌ಗಳ ಬೆಲೆ ಸಾಮಾನ್ಯ ಕನ್ನಡಿಗನ ಕೈಗೆಟುಕದ ಮಟ್ಟಕ್ಕೆ ಹೋಗಿದೆ. ಒಂದು ಕಡೆ ಕನ್ನಡಿಗನ ಜಮೀನು ಕಳೆದುಕೊಳ್ಳುತ್ತಾನೆ. ಮತ್ತೊಂದು ಕಡೆ ಅದೇ ಜಮೀನಿನ ಸೈಟ್ ಖರೀದಿಸಲು ಕನ್ನಡಿಗನೇ ಹಣವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸರ್ಕಾರದ ನೀತಿಯ ವೈಫಲ್ಯವಲ್ಲದೆ ಮತ್ತೇನು? ಎಂದರು.
ಮಾನದಂಡ ವಿಸ್ತರಣೆಯ ಪ್ರಯೋಜನಗಳೇನು?
15 ವರ್ಷದ ಹಳೆಯ ಮಾನದಂಡ ಮುಂದುವರಿದರೆ ಸ್ಥಳೀಯ ಕನ್ನಡಿಗರಿಗೆ ಸಿಗಬೇಕಾದ ಅವಕಾಶಗಳು ಮತ್ತಷ್ಟು ಕುಂಠಿತವಾಗಲಿವೆ. ಕನ್ನಡಿಗನು ತನ್ನದೇ ನೆಲದಲ್ಲಿ ಸೈಟಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಸರ್ಕಾರ ದಾರಿ ಮಾಡಿಕೊಡಬಾರದು. ಸರ್ಕಾರ ತಕ್ಷಣ ನಿಯಮ ತಿದ್ದುಪಡಿ ಮಾಡಿ 25 ವರ್ಷದ ಡೊಮಿಸೈಲ್ ಮಾನದಂಡ ಜಾರಿಗೊಳಿಸುವುದರ ಜೊತೆಗೆ, ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಸ್ಥಳೀಯರಿಗೆ ನ್ಯಾಯಯುತ ಆದ್ಯತೆ, ಸಾಮಾನ್ಯ ಕನ್ನಡಿಗರಿಗೆ ಕೈಗೆಟುಕುವ ಸೈಟ್ ಬೆಲೆ ಹಾಗೂ ಸಂಪೂರ್ಣ ಪಾರದರ್ಶಕ ಹಂಚಿಕೆ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಇದು ಕೇವಲ ಪಕ್ಷವೊಂದರ ವಿಚಾರವಲ್ಲ. ಕನ್ನಡಿಗರ ಬದುಕು, ಭೂಮಿ ಮತ್ತು ಭವಿಷ್ಯದ ಪ್ರಶ್ನೆ. ನಾಡಿನ ಎಲ್ಲ ಕನ್ನಡಪರ ಸಂಘಟನೆಗಳು, ರೈತರು, ಹೋರಾಟಗಾರರು ಹಾಗೂ ಕನ್ನಡಪರ ನಾಯಕರು ಪಕ್ಷಭೇದ ಮರೆತು ಈ ಬೇಡಿಕೆಗೆ ಧ್ವನಿ ನೀಡಬೇಕು. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಕನ್ನಡಿಗರ ಭೂಮಿ ಕನ್ನಡಿಗರ ಕೈಯಿಂದ ಜಾರಿಹೋಗುವ ಅಪಾಯ ಇನ್ನಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಸಿದರು.