
Artificial Eye: 20 ವರ್ಷಗಳ ಬಳಿಕ ದೃಷ್ಟಿ ಮರಳಿ ಪಡೆದ ಚೀನಾದ ಮಹಿಳೆ! ಬಂದೇ ಬಿಡ್ತು ಕೃತಕ ಕಣ್ಣು!
ಸುಮಾರು 20 ವರ್ಷಗಳಿಂದ ಬಹುತೇಕ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದ ಚೀನಾದ 40 ವರ್ಷದ ಮಹಿಳೆಯೊಬ್ಬರು ಇದೀಗ ಮತ್ತೆ ದೃಷ್ಟಿಯ ಅನುಭವ ಪಡೆದಿದ್ದಾರೆ. ಇದು ಸಾಧ್ಯವಾಗಿದ್ದೇ ಒಂಥರ ವಿಶಿಷ್ಟ ವೈದ್ಯಕೀಯ ಸಾಧನೆಯಿಂದ. ಈಕೆಗೇನೂ ಹೊಸ ಕಣ್ಣು- ರೆಟಿನಾ ಕೂರಿಸಿಲ್ಲ. ಬದಲಾಗಿ, ಹೈ-ರೆಸಲ್ಯೂಷನ್ ರೆಟಿನಾ ಆಧಾರಿತ ದೃಶ್ಯ ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್ (ಬಿಸಿಐ) ಇಂಪ್ಲಾಂಟ್ ಅನ್ನು ಮೆದುಳಿನಲ್ಲಿ ಕೂರಿಸಲಾಗಿದೆ. ಇದನ್ನು ಕ್ಲಿನಿಕಲ್ ಟ್ರಯಲ್‌ನಲ್ಲಿ ಪಡೆಯುತ್ತಿರುವ ಮೊದಲ ವ್ಯಕ್ತಿಯಾಗಿದ್ದಾರೆ ಈಕೆ. ಎರಡು ತಿಂಗಳ ತರಬೇತಿ ಪಡೆದ ನಂತರ ಅಕ್ಷರಗಳನ್ನು ಗುರುತಿಸುವುದು, ಬರೆಯಲು ಅಭ್ಯಾಸ ಮಾಡುವುದು ಮತ್ತು ಮನೆಯೊಳಗೆ ಆತ್ಮವಿಶ್ವಾಸದಿಂದ ಓಡಾಡುವುದು ಸಾಧ್ಯವಾಗಿದೆ.
ಇದೆಲ್ಲ ಹೇಗೆ? ಇದು ಅರ್ಥವಾಗಲು ನಮ್ಮ ಕಣ್ಣು ಹೇಗೆ ಕೆಲಸ ಮಾಡುತ್ತೆ ಅಂತ ನೋಡಬೇಕು. ನಮ್ಮ ಕಣ್ಣು ಒಂದು ಕ್ಯಾಮೆರಾದಂತೆ ಕೆಲಸ ಮಾಡುತ್ತದೆ. ಬೆಳಕು ಮತ್ತು ಚಿತ್ರಗಳು ಕಣ್ಣಿನ ರೆಟಿನಾವನ್ನು ತಲುಪಿದಾಗ, ಅಲ್ಲಿರುವ ನರಕೋಶಗಳು ಆ ಮಾಹಿತಿಯನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸಿ ಮೆದುಳಿಗೆ ಕಳುಹಿಸುತ್ತವೆ. ಮೆದುಳು ಈ ಸಂಕೇತಗಳನ್ನು ಅರ್ಥೈಸಿದಾಗ ನಮಗೆ ದೃಷ್ಟಿ ಉಂಟಾಗುತ್ತದೆ.
ಆದರೆ ರೆಟಿನಾದಲ್ಲಿರುವ ಫೋಟೊರಿಸೆಪ್ಟರ್‌ಗಳು ಅಥವಾ ಇತರ ನರಕೋಶಗಳು ಗಂಭೀರವಾಗಿ ಹಾನಿಗೊಳಗಾದರೆ ಕಣ್ಣಿಗೆ ಬೆಳಕು ಬಿದ್ದರೂ ಮೆದುಳಿಗೆ ಸರಿಯಾದ ದೃಶ್ಯ ಮಾಹಿತಿ ತಲುಪುವುದಿಲ್ಲ. ಇಂತಹ ಸಂದರ್ಭದಲ್ಲೇ ರೆಟಿನಲ್ ಪ್ರಾಸ್ಥೆಸಿಸ್ ಅಥವಾ ಬಯೋನಿಕ್ ವಿಷನ್ ತಂತ್ರಜ್ಞಾನ ಮಹತ್ವ ಪಡೆಯುತ್ತದೆ. ಚೀನಾದಲ್ಲಿ ನಡೆದಿರುವ ಈ ಪ್ರಯೋಗದಲ್ಲಿ ಇಂಪ್ಲಾಂಟ್, ರೆಟಿನಾದಲ್ಲಿರುವ ಇನ್ನೂ ಕಾರ್ಯನಿರ್ವಹಿಸುತ್ತಿರುವ ನರಕೋಶಗಳಿಗೆ ವಿದ್ಯುತ್ ಸಂಕೇತಗಳ ಮೂಲಕ ದೃಶ್ಯ ಮಾಹಿತಿಯನ್ನು ತಲುಪಿಸುವ ಪ್ರಯತ್ನ ಮಾಡುತ್ತದೆ. ಇದೇ ಕಾರಣಕ್ಕೆ ಇದನ್ನು ದೃಷ್ಟಿ ವ್ಯವಸ್ಥೆಯ ಒಂದು ರೀತಿಯ ಬೈಪಾಸ್ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?
ಈ ತಂತ್ರಜ್ಞಾನದಲ್ಲಿ ಇಂಪ್ಲಾಂಟ್ ಮಾತ್ರವಲ್ಲ, ವಿಶೇಷ ಕ್ಯಾಮೆರಾ ಹೊಂದಿರುವ ಕನ್ನಡಕವೂ ಪ್ರಮುಖ ಪಾತ್ರ ವಹಿಸುತ್ತದೆ. ಕನ್ನಡಕದಲ್ಲಿರುವ ಸಣ್ಣ ಕ್ಯಾಮೆರಾ ವ್ಯಕ್ತಿಯ ಸುತ್ತಲಿನ ದೃಶ್ಯವನ್ನು ಸೆರೆಹಿಡಿಯುತ್ತದೆ. ನಂತರ ವಿಡಿಯೊ ಪ್ರೊಸೆಸರ್ ಆ ದೃಶ್ಯವನ್ನು ವಿಶ್ಲೇಷಿಸಿ, ಅಗತ್ಯ ಮಾಹಿತಿಯನ್ನು ವಿದ್ಯುತ್ ಸಂಕೇತಗಳಾಗಿ ಎನ್‌ಕೋಡ್ ಮಾಡುತ್ತದೆ.
ಆ ಸಂಕೇತಗಳು ವೈರ್‌ಲೆಸ್ ಮೂಲಕ ಕಣ್ಣಿನೊಳಗೆ ಅಳವಡಿಸಿರುವ ಇಂಪ್ಲಾಂಟ್‌ಗೆ ತಲುಪುತ್ತವೆ. ಇಂಪ್ಲಾಂಟ್ ಅವುಗಳನ್ನು ರೆಟಿನಾದ ನರಕೋಶಗಳನ್ನು ಉತ್ತೇಜಿಸುವ ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸುತ್ತದೆ. ಅಲ್ಲಿಂದ ಸಂಕೇತಗಳು ದೃಷ್ಟಿ ಸಂಸ್ಕರಣೆಗೆ ಸಂಬಂಧಿಸಿದ ಮೆದುಳಿನ ಭಾಗಕ್ಕೆ ತಲುಪುತ್ತವೆ.
ಸರಳವಾಗಿ ಹೇಳುವುದಾದರೆ ಇದೊಂದು ಕೃತಕ ದೃಷ್ಟಿಯ ಅನುಭವ. ಇದು ಸಾಮಾನ್ಯ ದೃಷ್ಟಿಯಂತಲ್ಲ. ಇದು ಸಾಮಾನ್ಯ ಕಣ್ಣಿನ ದೃಷ್ಟಿಯನ್ನು ತಕ್ಷಣವೇ ಮರಳಿ ನೀಡುವುದಿಲ್ಲ. ಇಂತಹ ಬಯೋನಿಕ್ ದೃಷ್ಟಿ ವ್ಯವಸ್ಥೆಗಳನ್ನು ಬಳಸುವವರಿಗೆ ಆರಂಭದಲ್ಲಿ ಕತ್ತಲೆಯ ನಡುವೆ ಸಣ್ಣ ಬೆಳಕಿನ ಚುಕ್ಕೆಗಳು ಕಾಣಿಸಿಕೊಳ್ಳಬಹುದು. ಇವುಗಳನ್ನು ಫಾಸ್ಫೀನ್‌ಸ್ ಎಂದು ಕರೆಯಲಾಗುತ್ತದೆ. ತರಬೇತಿಯ ಮೂಲಕ ಈ ಬೆಳಕಿನ ಚುಕ್ಕೆಗಳನ್ನು ಜೋಡಿಸಿ ವಸ್ತುಗಳ ಆಕಾರ, ಅಡೆತಡೆಗಳು, ದಿಕ್ಕಿನ ಗುರುತುಗಳು ಮತ್ತು ಸರಳ ಅಕ್ಷರಗಳನ್ನು ಗುರುತಿಸಲು ವ್ಯಕ್ತಿ ಕಲಿಯಬಹುದು. ಚೀನಾದ ಪ್ರಯೋಗದಲ್ಲಿಯೂ ಇದೇ ರೀತಿಯ ಪುನರ್ವಸತಿ ತರಬೇತಿ ನಡೆಯುತ್ತಿದೆ.
ಹೀಗಾಗಿ, 20 ವರ್ಷಗಳ ನಂತರ ಸಂಪೂರ್ಣ ಸಾಮಾನ್ಯ ದೃಷ್ಟಿ ಮರಳಿ ಬಂದಿದೆ ಎಂದು ಹೇಳಲಾಗುವುದಿಲ್ಲ. ಈಗಿನ ತಂತ್ರಜ್ಞಾನ ಮುಖ್ಯವಾಗಿ ಸೀಮಿತ ಅಥವಾ ಕೃತಕ ದೃಶ್ಯ ಮಾಹಿತಿಯನ್ನು ನೀಡುತ್ತದೆ.
ಚೀನಾ ಇತ್ತೀಚಿನ ವರ್ಷಗಳಲ್ಲಿ ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್ ಕ್ಷೇತ್ರದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. 2026ರ ಜೂನ್‌ನಲ್ಲಿ ಹುನಾನ್ ಪ್ರಾಂತ್ಯದ ಚಾಂಗ್ಶಾದಲ್ಲಿರುವ ಕ್ಸಿಯಾಂಗ್ಯಾ ಆಸ್ಪತ್ರೆಯಲ್ಲಿ 61 ವರ್ಷದ ಮಹಿಳೆಯೊಬ್ಬರು ಇದೇ ಬುದ್ಧಿವಂತ ರೆಟಿನಾ ವ್ಯವಸ್ಥೆಯ ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗವಹಿಸಿದ್ದರು. ಅವರು ರೆಟಿನೈಟಿಸ್ ಪಿಗ್ಮೆಂಟೋಸಾ ಕಾರಣದಿಂದ ಹಲವು ವರ್ಷಗಳಿಂದ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ಅವರು ಸರಳ ಚೀನೀ ಅಕ್ಷರಗಳನ್ನು ಗುರುತಿಸುವುದು ಮತ್ತು ಮನೆಯೊಳಗೆ ಸ್ವತಂತ್ರವಾಗಿ ನಡೆಯುವುದು ಸೇರಿದಂತೆ ಕೆಲವು ಕೆಲಸಗಳನ್ನು ಸಾಧಿಸಿದ್ದರು.
ಇದರಿಂದ ರೆಟಿನಲ್ ಇಂಪ್ಲಾಂಟ್ ಮತ್ತು ತಂತ್ರಜ್ಞಾನ ಈಗ ಕೇವಲ ಪ್ರಯೋಗಾಲಯದ ಕಲ್ಪನೆಯಲ್ಲ. ಇದು ಮಾನವರಲ್ಲಿ ಇಟ್ಟು ಪರೀಕ್ಷಿಸಬಹುದಾದ ವೈದ್ಯಕೀಯ ತಂತ್ರಜ್ಞಾನವಾಗಿ ಬೆಳೆಯುತ್ತಿದೆ.
ಕೃತಕ ದೃಷ್ಟಿಯ ಕಲ್ಪನೆ ಹಲವು ವರ್ಷಗಳಿಂದ ವಿಜ್ಞಾನಿಗಳ ಸಂಶೋಧನೆಯಲ್ಲಿದೆ. ಹಿಂದಿನ ರೆಟಿನಲ್ ಪ್ರಾಸ್ಥೆಸಿಸ್‌ಗಳಲ್ಲಿ ಕೆಲವೇ ಸಂಖ್ಯೆಯ ಎಲೆಕ್ಟ್ರೋಡ್‌ಗಳನ್ನು ಬಳಸಲಾಗುತ್ತಿತ್ತು. ಹೆಚ್ಚಿನ ಎಲೆಕ್ಟ್ರೋಡ್‌ಗಳನ್ನು ಹೊಂದಿರುವ ವ್ಯವಸ್ಥೆಗಳು ಹೆಚ್ಚು ವಿವರವಾದ ಕೃತಕ ದೃಶ್ಯ ಮಾಹಿತಿಯನ್ನು ನೀಡುವ ಉದ್ದೇಶ ಹೊಂದಿವೆ. 2021ರಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ, 256 ಎಲೆಕ್ಟ್ರೋಡ್‌ಗಳ ಐಎಂಐಇ ವ್ಯವಸ್ಥೆಯನ್ನು ಪರೀಕ್ಷಿಸಲಾಗಿತ್ತು. ಸಾಧನವನ್ನು ಆನ್ ಮಾಡಿದಾಗ ಭಾಗವಹಿಸಿದವರ ಕಾರ್ಯಕ್ಷಮತೆ ಸುಧಾರಿಸಿತ್ತು. ಆದರೆ ಹೆಚ್ಚಿನ ಜನರ ಮೇಲೆ ಮತ್ತು ದೀರ್ಘಾವಧಿಯಲ್ಲಿ ಇನ್ನಷ್ಟು ಕ್ಲಿನಿಕಲ್ ಅಧ್ಯಯನ ಅಗತ್ಯವಿದೆ.
ಇಲ್ಲಿ ಒಂದು ಮುಖ್ಯ ವ್ಯತ್ಯಾಸವಿದೆ. ಇದು ಹೊಸ ಕಣ್ಣನ್ನು ದೇಹಕ್ಕೆ ಕಸಿ ಮಾಡುವ ವಿಧಾನವಲ್ಲ. ಬದಲಾಗಿ, ದೃಷ್ಟಿ ವ್ಯವಸ್ಥೆಯಲ್ಲಿರುವ ಹಾನಿಗೊಳಗಾದ ಭಾಗವನ್ನು ತಂತ್ರಜ್ಞಾನದ ಮೂಲಕ ಭಾಗಶಃ ಬದಲಿಸುವ ಪ್ರಯತ್ನ. ಅಂದರೆ ಕಣ್ಣಿನ ಕ್ಯಾಮೆರಾ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದಿದ್ದರೂ, ಉಳಿದಿರುವ ನರಕೋಶಗಳಿಗೆ ಕೃತಕವಾಗಿ ಮಾಹಿತಿಯನ್ನು ತಲುಪಿಸುವ ಮೂಲಕ ಮೆದುಳಿಗೆ ದೃಶ್ಯ ಸಂಕೇತಗಳನ್ನು ನೀಡುವುದು ಇದರ ಉದ್ದೇಶ. ಇದೇ ಕಾರಣಕ್ಕೆ ಇದನ್ನು ಬಯೋನಿಕ್ ವಿಷನ್ ಅಥವಾ ಕೃತಕ ದೃಷ್ಟಿ ಎಂದು ಕರೆಯಲಾಗುತ್ತದೆ.
ಚೀನಾದ ಜೊತೆಗೆ ಅಮೆರಿಕ ಮತ್ತು ಇತರ ದೇಶಗಳಲ್ಲೂ ಕೃತಕ ದೃಷ್ಟಿ ಕುರಿತು ಸಂಶೋಧನೆ ನಡೆಯುತ್ತಿದೆ. ಉದಾಹರಣೆಗೆ, ಅಮೆರಿಕದಲ್ಲಿ ದೃಷ್ಟಿಗೆ ಸಂಬಂಧಿಸಿದ ಮೆದುಳಿನ ಭಾಗಕ್ಕೆ ನೇರವಾಗಿ ವಿದ್ಯುತ್ ಉತ್ತೇಜನ ನೀಡುವ ಕುರಿತ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಇದೇ ಕ್ಷೇತ್ರದಲ್ಲಿ ್ಕೃಐಅ ಎಂಬ ರೆಟಿನಲ್ ಇಂಪ್ಲಾಂಟ್ ವ್ಯವಸ್ಥೆ ಯುರೋಪ್‌ನಲ್ಲಿ ನಿಯಂತ್ರಣಾತ್ಮಕ ಅನುಮೋದನೆ ಪಡೆದು, ಕೆಲವು ರೀತಿಯ ದೃಷ್ಟಿ ಕಳೆದುಕೊಂಡವರಿಗೆ ಕೇಂದ್ರ ದೃಷ್ಟಿಯನ್ನು ಮರಳಿ ನೀಡುವ ಪ್ರಯತ್ನ ಮುಂದುವರಿದಿದೆ. ಅದರ ಕ್ಲಿನಿಕಲ್ ಅಧ್ಯಯನದಲ್ಲಿ 38 ಮಂದಿಯಲ್ಲಿ ಶೇ. 84 ಜನರಿಗೆ ಅಕ್ಷರ, ಸಂಖ್ಯೆಗಳು ಮತ್ತು ಪದಗಳನ್ನು ಓದುವ ಸಾಮರ್ಥ್ಯದಲ್ಲಿ ಸುಧಾರಣೆ ಕಂಡುಬಂದಿತ್ತು.
A 40-year-old Chinese woman who had been almost completely blind for nearly 20 years regained her visual function after becoming the first person in China to receive a homegrown high-resolution retina-based visual brain-computer interface (BCI) implant in a clinical trial.… pic.twitter.com/ELYiw15ET1
— China Science (@ChinaScience) August 7, 2026
A 40-year-old Chinese woman who had been almost completely blind for nearly 20 years regained her visual function after becoming the first person in China to receive a homegrown high-resolution retina-based visual brain-computer interface (BCI) implant in a clinical trial.… pic.twitter.com/ELYiw15ET1
ಸಂಪೂರ್ಣ ದೃಷ್ಟಿ ಮರಳಲಿದೆಯಾ?
ಈಗಿನ ವ್ಯವಸ್ಥೆಗಳು ಸಾಮಾನ್ಯ ಮಾನವ ದೃಷ್ಟಿಯಷ್ಟು ಬಣ್ಣ, ಸ್ಪಷ್ಟತೆ ಮತ್ತು ವಿಶಾಲ ದೃಶ್ಯ ಕ್ಷೇತ್ರವನ್ನು ನೀಡುವುದಿಲ್ಲ. ಶಸ್ತ್ರಚಿಕಿತ್ಸೆ, ಸಾಧನದ ದೀರ್ಘಕಾಲದ ಸುರಕ್ಷತೆ, ನರಕೋಶಗಳ ಪ್ರತಿಕ್ರಿಯೆ ಮತ್ತು ನಿರಂತರ ತರಬೇತಿ ಸೇರಿದಂತೆ ಹಲವು ಸವಾಲುಗಳಿವೆ. ಆದರೆ 20 ವರ್ಷಗಳ ಕತ್ತಲೆಯ ನಂತರ ಒಬ್ಬ ವ್ಯಕ್ತಿ ಮತ್ತೆ ಅಕ್ಷರ ಗುರುತಿಸಲು, ವಸ್ತುಗಳನ್ನು ಗುರುತಿಸಲು ಮತ್ತು ಮನೆಯೊಳಗೆ ಸ್ವತಂತ್ರವಾಗಿ ನಡೆಯಲು ಸಾಧ್ಯವಾಗುತ್ತಿರುವುದು ಬಹಳ ದೊಡ್ಡ ಹೆಜ್ಜೆ. ಒಂದು ಕಾಲದಲ್ಲಿ ಕುರುಡರಿಗೆ ದೃಷ್ಟಿ ನೀಡುವುದು ಕೇವಲ ಕನಸಾಗಿತ್ತು. ಈಗ ಕ್ಯಾಮೆರಾ, ಮೈಕ್ರೋಚಿಪ್, ಕೃತಕ ಬುದ್ಧಿಮತ್ತೆ ಮತ್ತು ಮಾನವ ನರಮಂಡಲವನ್ನು ಸಂಪರ್ಕಿಸುವ ತಂತ್ರಜ್ಞಾನ ಆ ಕನಸನ್ನು ವಾಸ್ತವ ಆಗಿಸುತ್ತಿದೆ.