
Apple Rate: ಋತು ಬಂದರೂ ಸೇಬು ಬೆಲೆಯಲ್ಲೂ ಗಣನೀಯ ಏರಿಕೆ, ಹೆಚ್ಚಳಕ್ಕೆ ಕಾರಣವೇನು?
ಬೆಂಗಳೂರು: ಸೇಬು ಹಣ್ಣಿನ ಋತು ಆರಂಭಗೊಂಡಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಹವಾಮಾನ ವೈಪರೀತ್ಯ ಹಾಗೂ ದೇಶೀಯ ಉತ್ಪಾದನೆಯಲ್ಲಿನ ಕುಸಿತದಿಂದಾಗಿ ಪ್ರಸಕ್ತ ವರ್ಷ ಸೇಬು ಹಣ್ಣಿನ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ.ಗೆ ಸುಮಾರು ₹100ರಿಂದ ₹335ರವರೆಗೆ ವಹಿವಾಟು ಆಗುತ್ತಿದೆ.
ಬೆಂಗಳೂರು ಚಿಲ್ಲರೆ ಮಾರುಕಟ್ಟೆಯಲ್ಲಿ ಹಬ್ಬಗಳ ಋತುವಿನ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ಸೇಬು ಹಣ್ಣಿನ ಬೆಲೆ ಪ್ರತಿ ಕೆ.ಜಿ.ಗೆ ₹260ರಿಂದ ₹335ರವರೆಗೆ ತಲುಪಿದೆ. ಶಿಮ್ಲಾ ಸೇಬು ಗುಣಮಟ್ಟಕ್ಕೆ ಅನುಗುಣವಾಗಿ ₹120ರಿಂದ ₹180ರವರೆಗೆ ಮಾರಾಟವಾಗುತ್ತಿದೆ. ಕಾಶ್ಮೀರದ ‘ರೆಡ್ ಡೆಲಿಷಿಯಸ್’ ತಳಿಯ ಸೇಬು ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಸುಮಾರು ₹100ರಿಂದ ₹150ರ ದರದಲ್ಲಿದೆ.
ಇನ್ನು ನ್ಯೂಜಿಲೆಂಡ್‌ನ ‘ರಾಯಲ್ ಗಾಲಾ’ ಸೇರಿದಂತೆ ಆಮದು ಮಾಡಿಕೊಳ್ಳುವ ಪ್ರೀಮಿಯಂ ಸೇಬುಗಳ ಬೆಲೆ ಪ್ರತಿ ಕೆ.ಜಿ.ಗೆ ₹220ರಿಂದ ₹430ರವರೆಗೆ ಇದೆ. ಹೀಗಾಗಿ ಆಮದು ಸೇಬುಗಳು ಸಾಮಾನ್ಯ ಗ್ರಾಹಕರ ಕೈಗೆಟುಕದಂತಾಗಿದ್ದು, ಮುಖ್ಯವಾಗಿ ಹೆಚ್ಚಿನ ಆದಾಯದ ಶ್ರೀಮಂತ ಗ್ರಾಹಕರಿಗಷ್ಟೇ ಸೀಮಿತವಾಗಿವೆ.
ಉತ್ಪಾದನೆಯಲ್ಲಿ ಭಾರಿ ಕುಸಿತ
ಹವಾಮಾನ ವೈಪರೀತ್ಯ, ಹಿಮಪಾತದ ಕೊರತೆ ಹಾಗೂ ಆಲಿಕಲ್ಲು ಮಳೆಯಂತಹ ಪ್ರಕೃತಿ ವೈಪರೀತ್ಯಗಳಿಂದಾಗಿ ಪ್ರಮುಖ ಸೇಬು ಉತ್ಪಾದನಾ ಪ್ರದೇಶಗಳಾದ ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಈ ಬಾರಿ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಒಟ್ಟಾರೆ ಸುಮಾರು 4.36 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಸೇಬು ಉತ್ಪಾದನೆ ಕುಂಠಿತಗೊಂಡಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆ ಉಂಟಾಗಿದೆ ಇದು ಬೆಲೆ ಏರಿಕೆಗೆ ಕಾರಣವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸೇಬಿನ ಸಗಟು ದರದಲ್ಲಿ ಸುಮಾರು ಶೇ.20ರಷ್ಟು ಏರಿಕೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಆಮದು ಸೇಬುಗಳಿಗೆ ಹೆಚ್ಚಿದ ಬೇಡಿಕೆ
ದೇಶೀಯ ಉತ್ಪಾದನೆ ಕುಸಿದಿರುವ ಹಿನ್ನೆಲೆಯಲ್ಲಿ ಅಮೆರಿಕ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಿಂದ ಆಮದು ಮಾಡಿಕೊಳ್ಳುವ ಸೇಬುಗಳಿಗೆ ದೇಶದ ಪ್ರಮುಖ ನಗರಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಆದರೆ ಆಮದು ಸುಂಕ, ಸಾಗಣೆ ಹಾಗೂ ವಿತರಣಾ ವೆಚ್ಚ ಹೆಚ್ಚಿರುವುದರಿಂದ ವಿದೇಶಿ ಸೇಬುಗಳ ಬೆಲೆಯೂ ಏರಿಕೆಯಾಗಿದೆ
ಇದರ ಪರಿಣಾಮವಾಗಿ ಸಾಮಾನ್ಯ ಮತ್ತು ಮಧ್ಯಮ ವರ್ಗದ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ದುಬಾರಿ ಆಮದು ಸೇಬುಗಳು ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ಬಹುತೇಕ ಕೈಗೆಟುಕದಂತಾಗಿವೆ.
ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಸೇಬು ಉತ್ಪಾದನೆ ತೀವ್ರವಾಗಿ ಕುಸಿತ ಕಂಡಿದೆ. ಬೆಲೆ ಅಧಿಕವಿದ್ದರೂ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ರೈತರ ಆತಂಕಕ್ಕೆ ಕಾರಣವಾಗಿದೆ. ಉತ್ತಮ ಗುಣಮಟ್ಟದ ಸೇಬಿಗೆ ಪ್ರತಿ 20 ಕೆ.ಜಿ. ಬಾಕ್ಸ್‌ಗೆ ₹3,000ರಿಂದ ₹3,500ರವರೆಗೆ ದರ ದೊರೆಯುತ್ತಿದ್ದರೂ, ಕಾರ್ಮಿಕರು, ರಸಗೊಬ್ಬರ, ಕೀಟನಾಶಕ, ಪ್ಯಾಕಿಂಗ್ ಮತ್ತು ಸಾಗಣೆ ವೆಚ್ಚ ಹೆಚ್ಚಿರುವುದರಿಂದ ರೈತರಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲ.
ಹೂ ಬಿಡುವ ಅವಧಿಯಲ್ಲಿ ಅಕಾಲಿಕ ಮಳೆ, ಆಲಿಕಲ್ಲು ಹಾಗೂ ಚಳಿಯ ಪರಿಣಾಮವಾಗಿ ವಿಶೇಷವಾಗಿ ಕೆಳ ಮತ್ತು ಮಧ್ಯಮ ಪ್ರದೇಶಗಳಲ್ಲಿ ಹಣ್ಣು ಕಟ್ಟುವಿಕೆ ಕುಂಠಿತಗೊಂಡಿದೆ. ಹೆಚ್ಚಿನ ಪ್ರದೇಶಗಳಲ್ಲಿಯೂ ಹಣ್ಣುಗಳ ಗಾತ್ರ ಚಿಕ್ಕದಾಗಿರುವುದು ಮತ್ತೊಂದು ಸಮಸ್ಯೆಯಾಗಿದೆ.
ಕಡಿಮೆ ಗುಣಮಟ್ಟದ ಸೇಬು ಬಾಕ್ಸ್ ಗೆ ₹800–900ರಷ್ಟೇ ದರ ಸಿಗುತ್ತಿದ್ದು, ಸಣ್ಣ ಗಾತ್ರದ ‘ಪಿಟ್ಟು’ ಸೇಬಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ ಎಂದು ರೈತರು ತಿಳಿಸಿದ್ದಾರೆ.
ಇತ್ತ, ಸೇಬು ವ್ಯಾಪಾರಿಗಳು ಕೂಡ ನಷ್ಟದ ಬಗ್ಗೆ ದೂರು ನೀಡಿದ್ದಾರೆ. ಹಿಮಾಚಲದಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಿದ ಸೇಬಿಗೆ ಹೊರ ರಾಜ್ಯಗಳ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೇಡಿಕೆ ಇಲ್ಲದಿರುವುದು ಮತ್ತು ಕಾಶ್ಮೀರದ ಸೇಬಿನ ಆಗಮನದಿಂದ ಬೆಲೆ ಒತ್ತಡ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಸದ್ಯಕ್ಕೆ ಹಬ್ಬದ ಸೀಸನ್ ಮುಂದುವರಿಯುತ್ತಿರುವುದರಿಂದ ಮತ್ತು ಹೊಸ ಬೆಳೆ ಮಾರುಕಟ್ಟೆಗೆ ಪೂರ್ಣ ಪ್ರಮಾಣದಲ್ಲಿ ಬರುವವರೆಗೆ ಸೇಬು ಹಣ್ಣಿನ ಬೆಲೆಯಲ್ಲಿ ದೊಡ್ಡ ಇಳಿಕೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ
( ಲೇಖಕರು: ಮಾರುಕಟ್ಟೆ ಧಾರಣೆ ವಿಶ್ಲೇಷಕರು)