
ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 8 ಕಾರ್ಮಿಕರು ಸಾವು, 32 ಮಂದಿಗೆ ಗಾಯ
ಭಿಂಡ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಪಿಕಪ್ ವಾಹನ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಕಾರ್ಮಿಕರು ಮೃತಪಟ್ಟಿದ್ದು, 32 ಮಂದಿ ಗಾಯಗೊಂಡಿದ್ದಾರೆ.
ಭಿಂಡ್-ಗ್ವಾಲಿಯರ್ ರಾಷ್ಟ್ರೀಯ ಹೆದ್ದಾರಿಯ ಛಿಮ್ಕಾ ಗ್ರಾಮದ ಬಳಿ ತಡರಾತ್ರಿ 1 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಗ್ವಾಲಿಯರ್ನಲ್ಲಿ ಭತ್ತದ ಸಸಿ ನೆಡುವ ಕೆಲಸ ಮುಗಿಸಿಕೊಂಡು ಸ್ವಗ್ರಾಮಕ್ಕೆ ಕಾರ್ಮಿಕರು ಪಿಕಪ್ ವಾಹನದಲ್ಲಿ ಹಿಂತಿರುಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಪ್ರಾಥಮಿಕ ವರದಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಜಾನುವಾರುಗಳನ್ನು ತಪ್ಪಿಸಲು ಯತ್ನಿಸಿದಾಗ ಪಿಕಪ್ ವಾಹನದ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಪಿಕಪ್ ವಾಹನವು ರಸ್ತೆಯ ವಿರುದ್ಧ ದಿಕ್ಕಿಗೆ ಸಾಗಿ, ಎದುರಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್ಗೆ ಮುಖಾಮುಖಿ ಡಿಕ್ಕಿಯಾಗಿದೆ ಎಂದು ಗೋಹಾದ್ ಚೌರಾಹಾ ಪೊಲೀಸ್ ಠಾಣೆಯ ಉಸ್ತುವಾರಿ ರಾಮ್ನರೇಶ್ ಯಾದವ್ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಸ್ಥಳೀಯರ ನೆರವಿನಿಂದ ವಾಹನದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.