
ಮೆಣಸಿನಕಾಯಿ: ಕ್ವಿಂಟಲ್‌ಗೆ ₹ 50,669 ದರ
ಬ್ಯಾಡಗಿ(ಹಾವೇರಿ ಜಿಲ್ಲೆ): ಏಷ್ಯಾದ ಅತೀ ದೊಡ್ಡ ಒಣ ಮೆಣಸಿನಕಾಯಿ ಮಾರುಕಟ್ಟೆಯೆಂದೇ ಪರಿಗಣಿಸಲಾಗುವ ಇಲ್ಲಿನ ಮಾರುಕಟ್ಟೆಗೆ ಅವಧಿಗೂ ಮುನ್ನವೇ ಮೆಣಸಿನಕಾಯಿ ಫಸಲು ಲಗ್ಗೆ ಇಟ್ಟಿದೆ. ಮೊದಲ ದಿನವೇ ಪ್ರತಿ ಕ್ವಿಂಟಲ್‌ಗೆ ₹ 50,669ರ ದರದಲ್ಲಿ ಮೆಣಸಿನಕಾಯಿ ಮಾರಾಟವಾಗಿದೆ.
ಬಳ್ಳಾರಿ ಭಾಗದ ರೈತರು ನೀರಾವರಿ ಮೂಲಕ ಬೆಳೆದ 102 ಮಾದರಿ ತಳಿ ಮೆಣಸಿನಕಾಯಿಯನ್ನು ಮಾರುಕಟ್ಟೆಗೆ ತಂದಿದ್ದಾರೆ. ಎರಡು ಅಂಗಡಿಗಳಲ್ಲಿ 200ಕ್ಕೂ ಹೆಚ್ಚು ಚೀಲ ಮೆಣಸಿನಕಾಯಿ ಸಂಗ್ರಹವಿದೆ.
ಕುಂದಗೋಳ, ಸಂಶಿ, ಗುಡಗೇರಿ, ಅಣ್ಣಿಗೇರಿ, ಗದಗ ಹಾಗೂ ಇತರೆ ಭಾಗದಲ್ಲಿ ಉತ್ತಮ ಮಳೆಯಾದರೆ ಬ್ಯಾಡಗಿ ಮಾರುಕಟ್ಟೆಗೆ ದಸರಾ ಹಬ್ಬಕ್ಕೆ ಹೊಸ ಮೆಣಸಿನಕಾಯಿ ತರಲಾಗುತ್ತದೆ.
‘ಒಣ ಪುಡಿ ಉತ್ತಮವಿರುವ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದೆ. ಪ್ರತಿ ವರ್ಷ ಗಣೇಶ ಚತುರ್ಥಿ ಬಳಿಕ ಹೊಸ ಮೆಣಸಿನಕಾಯಿ ಫಸಲು ಬರುತ್ತದೆ. ಈಗ, ಅವಧಿಗೂ ಮುನ್ನವೇ ಫಸಲು ಬಂದಿದೆ’ ಎಂದು ಉದ್ಯಮಿ ಸುರೇಶ ಮೇಲಗಿರಿ ‘ಪ್ರಜಾವಾಣಿ’ಗೆ ತಿಳಿಸಿದರು.