
ರಾಜ್ಯದಲ್ಲಿ ಈ ವರ್ಷ 4,212 ಎಚ್1ಎನ್1 ಪ್ರಕರಣಗಳು ದೃಢ: ಯು.ಟಿ. ಖಾದರ್
ಬೆಂಗಳೂರು: ‘ರಾಜ್ಯದಲ್ಲಿ ಈ ವರ್ಷ ಇದುವರೆಗೆ 4,212 ಎಚ್1ಎನ್1 ಪ್ರಕರಣಗಳು ವರದಿಯಾಗಿವೆ. ಮಳೆ ಮತ್ತು ಚಳಿಗಾಲದ ಅವಧಿಯಲ್ಲಿ ವೈರಾಣು ಹೆಚ್ಚು ಸಕ್ರಿಯವಾಗಿರುವುದರಿಂದ, ಮುಂದಿನ ದಿನಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ’ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಜನರಿಗೆ ಮನವಿ ಮಾಡಿದರು.
ಋತುಮಾನದ ಜ್ವರ (ಇನ್‌ಫ್ಲುಯೆಂಜಾ) ರಾಜ್ಯ ದಲ್ಲಿ ಏರುಗತಿ ಪಡೆದ ಕಾರಣ, ಸಚಿವರು ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದರು. ಪ್ರತಿ ಜಿಲ್ಲೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ಅವರು, ಎಚ್1ಎನ್1 ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಳೆ ಮತ್ತು ಚಳಿ ಇದ್ದಾಗ ವೈರಾಣು ಜ್ವರ ಸ್ವಾಭಾವಿಕವಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಜ್ವರ ಬಾರದಂತೆ ಹಾಗೂ ಜ್ವರ ಬಂದಾಗ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಈ ವರ್ಷ ವರದಿಯಾದ ಎಚ್1ಎನ್1 ಪ್ರಕರಣಗಳಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ. ಹೆಚ್ಚಿನವರು ಮನೆ ಆರೈಕೆಯಿಂದಲೇ ಚೇತರಿಸಿ ಕೊಂಡಿದ್ದಾರೆ. ದೃಢ ಪ್ರಕರಣಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಜಿಬಿಎ ವ್ಯಾಪ್ತಿಯಲ್ಲಿಯೇ ಕಂಡುಬಂದಿವೆ. ಶೀತ ಮತ್ತು ಜ್ವರದಿಂದ ಬಳಲುತ್ತಿರುವವರು ಜನದಟ್ಟಣೆ ಪ್ರದೇಶಗಳಿಗೆ ತೆರಳಿದರೆ, ರೋಗ ಹರಡುತ್ತದೆ’ ಎಂದು ಹೇಳಿದರು.
‘ಶೀತ ಮತ್ತು ಜ್ವರದ ಸಮಸ್ಯೆ ಎದುರಿಸುತ್ತಿರುವವರು ಅನಗತ್ಯ ಓಡಾಟ ತಪ್ಪಿಸಿ, ಮನೆಯಲ್ಲಿಯೇ ಇರಬೇಕು. ಮನೆಯಿಂದ ಹೊರಗಡೆ ಹೋಗುವುದು ಅನಿವಾರ್ಯವಾದಲ್ಲಿ ಮುಖಗವಸು ಧರಿಸಬೇಕು. ಇದರಿಂದ ರೋಗ ಹರಡುವಿಕೆಗೆ ತಡೆ ಬೀಳಲಿದೆ. ಎರಡು ದಿನ ಕಳೆದರೂ ಜ್ವರ ಕಡಿಮೆಯಾಗದಿದ್ದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬಹದು’ ಎಂದರು.
ವ್ಯವಸ್ಥೆಯ ಬಲವರ್ಧನೆ: ‘ಶೀತ ಜ್ವರ ಮಾದರಿ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಪ್ರಕರಣಗಳ ಪರೀಕ್ಷೆ ಮತ್ತು ಪತ್ತೆಗೆ ಕ್ರಮವಹಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿಗದಿತ ಕಣ್ಗಾವಲು ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಇದರ ಜತೆಗೆ ವಿವಿಧ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.
‘ರಾಜ್ಯದಾದ್ಯಂತ ಎಲ್ಲ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಪಿಪಿಇ ಕಿಟ್, ಎನ್ 95 ಮುಖಗವಸು ಮತ್ತು ‘ಒಸೆಲ್ಟಾಮಿವಿರ್’ ಔಷಧಗಳನ್ನು ಸಮರ್ಪಕ ಪ್ರಮಾಣದಲ್ಲಿ ಲಭ್ಯವಿರು ವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ’ ಎಂದರು.
ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಆಯುಕ್ತ ಗುರುದತ್ತ ಹೆಗಡೆ ಉಪಸ್ಥಿತರಿದ್ದರು.
‘ಶಾಲೆಗಳಿಗೆ ಮಾರ್ಗಸೂಚಿ’
‘ಶಾಲೆಯೊಂದಲ್ಲಿ ಎಚ್1ಎನ್1 ಹರಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಅಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ಹರಡಿರಲಿಲ್ಲ. ಇಬ್ಬರು ಶಿಕ್ಷಕರಿಗೆ ಮಾತ್ರ ಎಚ್1ಎನ್1 ದೃಢಪಟ್ಟಿತ್ತು. ಅವರು ಶಾಲೆಗೆ ಬಾರದ ಕಾರಣ ಪಾಲಕರು ಭಯಭೀತರಾಗಿ ಮಕ್ಕಳನ್ನು ಕಳುಹಿಸಿರಲಿಲ್ಲ. ಈ ರೀತಿ ಪ್ರಕರಣಗಳು ವರದಿಯಾದಾಗ ಅನಗತ್ಯ ಭಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಲ್ಲ ಶಾಲಾ–ಕಾಲೇಜುಗಳಿಗೆ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಬಗ್ಗೆ ಮಾರ್ಗಸೂಚಿ ಕಳುಹಿಸಲಾಗುತ್ತದೆ’ ಎಂದು ಯು.ಟಿ. ಖಾದರ್ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-51-333401137