
ನಾಳೆ ಬೈಯಪ್ಪನಹಳ್ಳಿ–ಎಂ.ಜಿ. ರಸ್ತೆ ನಿಲ್ದಾಣಗಳ ನಡುವೆ ಮೆಟ್ರೊ 2 ತಾಸು ಸ್ಥಗಿತ
ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಸ್ವಾಮಿ ವಿವೇಕಾನಂದ ನಿಲ್ದಾಣ ಮತ್ತು ಇಂದಿರಾನಗರ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು ಹಮ್ಮಿಕೊಂಡಿರುವುದರಿಂದ ಆಗಸ್ಟ್ 9ರಂದು ಬೆಳಿಗ್ಗೆ 7ರಿಂದ 9ರವರೆಗೆ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೊ ಸಂಚಾರ ಸ್ಥಗಿತಗೊಳ್ಳಲಿದೆ.
ಚಲ್ಲಘಟ್ಟದಿಂದ ಎಂ.ಜಿ. ರಸ್ತೆವರೆಗೆ, ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ (ಕಾಡುಗೋಡಿ) ಸಂಚಾರ ಎಂದಿನಂತೆ ಇರಲಿದೆ. ಹಸಿರು ಹಾಗೂ ಹಳದಿ ಮಾರ್ಗದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.