
ಆನೆ ಹಾವಳಿ: ಶಾಶ್ವತ ಪರಿಹಾರಕ್ಕೆ ₹261 ಕೋಟಿ!
ರಾಮನಗರ: ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಾಡಾನೆ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕೆ ಸರ್ಕಾರ ₹260.01 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ತವರು ಜಿಲ್ಲೆಯ ಗಂಭೀರ ಸಮಸ್ಯೆಗೆ ಮಿಡಿದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಜಿಲ್ಲೆಗೆ ₹260 ಕೋಟಿ ಹಂಚಿಕೆ ಮಾಡಿದ್ದಾರೆ.
ಈ ಅನುದಾನದ ಮೂಲಕ ಜಿಲ್ಲೆಗೆ ಹೊಂದಿಕೊಂಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕನಕಪುರ ವನ್ಯಜೀವಿ ವಿಭಾಗ ಹಾಗೂ ಜಿಲ್ಲೆಯಲ್ಲಿ ರೈಲ್ವೆ ಬ್ಯಾರಿಕೇಡ್, ಸೌರ ಬೇಲಿ, ಉಕ್ಕಿನ ಹಗ್ಗದ ಬೇಲಿ (ಸ್ಟೀಲ್ ರೋಪ್ ವೈರ್ ಫೆನ್ಸ್) ಹಾಗೂ ಆನೆ ನಿರೋಧಕ ಕಂದಕಗಳನ್ನು ನಿರ್ಮಿಸಿ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.
ಕಾಡಾನೆ ದಾಳಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಜೀವಹಾನಿ ಹಾಗೂ ಬೆಳೆಹಾನಿಗೆ ನಲುಗಿರುವ ಜಿಲ್ಲೆಯ ರೈತರು, ಆನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ರೂಪಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ದುರ್ಘಟನೆಗಳು ನಡೆದಾಗಲೆಲ್ಲಾ ರಸ್ತೆ ತಡೆ ನಡೆಸಿದ್ದಾರೆ. ಆರ್‌ಎಫ್‌ಒ ಹಾಗೂ ಡಿಸಿಎಫ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಶಾಶ್ವತ ಪರಿಹಾರಕ್ಕೆ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಮುಂದಾಗಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ.
ಪ್ರಸ್ತಾವ ಕಳಿಸಿದ್ದ ಇಲಾಖೆ: ‘ವಿವಿಧ ಕಾರಣಗಳಿಗಾಗಿ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಬಿಗಡಾಯಿಸುತ್ತಲೇ ಇದೆ. ರೈತರು, ಅರಣ್ಯ ಇಲಾಖೆ ಸಿಬ್ಬಂದಿ ಆನೆ ದಾಳಿಗೆ ಬಲಿಯಾಗಿದ್ದಾರೆ. ಶಾಶ್ವತ ಪರಿಹಾರಕ್ಕಾಗಿ ಜಿಲ್ಲೆಯ ರೈತರು ಹಲವು ವರ್ಷಗಳಿಂದ ಹೋರಾಡುತ್ತಾ ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದ್ದಾರೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶಾಶ್ವತ ಪರಿಹಾರಕ್ಕಾಗಿ ರೈಲ್ವೆ ಬ್ಯಾರಿಕೇಡ್, ಸೌರ ಬೇಲಿ, ಉಕ್ಕಿನ ಹಗ್ಗದ ಬೇಲಿ, ಆನೆ ನಿರೋಧಕ ಕಂದಕ ನಿರ್ಮಾಣ ಕ್ರಮ ಹಾಗೂ ಅಗತ್ಯ ಅನುದಾನದ ಕುರಿತು ಪ್ರಸ್ತಾವ ಸಿದ್ದಪಡಿಸಿ ಇಲಾಖೆಗೆ ಕಳಿಸಿ ಕೊಡಲಾಗಿತ್ತು. ಜೊತೆಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿ ಗಮನಕ್ಕೂ ತರಲಾಗಿತ್ತು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ವಿಶೇಷ ಆಸಕ್ತಿ ವಹಿಸಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ’ ಎಂದು ಹೇಳಿದರು.
ಈಗಾಗಲೇ ನಿರ್ಮಾಣ: ಹೊಸದಾಗಿ ಪರಿಚಯಿಸಲಾಗಿರುವ ಉಕ್ಕಿನ ಹಗ್ಗದ ಬೇಲಿ ಹೊರತುಪಡಿಸಿ, ಉಳಿದ ಮೂರು ಕ್ರಮಗಳನ್ನು ಆನೆ ಹಾವಳಿ ತೀರಾ ಹೆಚ್ಚಾಗಿರುವ ಕಡೆ ಕೈಗೊಳ್ಳಲಾಗಿದೆ. ಆದರೆ, ಜಿಲ್ಲೆಯು ಒಂದು ಕಡೆ ಕಾವೇರಿ ವನ್ಯಜೀವಿಧಾಮ, ಮತ್ತೊಂದೆಡೆ ಬನ್ನೇರುಘಟ್ಟ ಉದ್ಯಾನದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಬ್ಯಾರಿಕೇಡ್, ಸೌರಬೇಲಿ ಹಾಗೂ ನಿರೋಧಕ ಗುಂಡಿಗಳನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿತ್ತು.
ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವ ಕನಕಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು ₹10.73 ಕೋಟಿ ವೆಚ್ಚದಲ್ಲಿ 28.25 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಉಳಿದಂತೆ ಸೌರಬೇಲಿಯನ್ನು ರಾಮನಗರ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯಲ್ಲಿ 41 ಕಿ.ಮೀ. ಉದ್ದ ಹಾಗೂ ಕನಕಪುರ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಯಲ್ಲಿ 8.25 ಕಿ.ಮೀ. ಉದ್ದದ ಬೇಲಿಯನ್ನು ಸುಮಾರು ₹2.13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಏನೇನು ಪರಿಹಾರ ಕ್ರಮ?ಸಾರ್ವಜನಿಕರು ಏನಂತಾರೆ?
ಕಾಡಾನೆ ಮತ್ತು ಮಾನವ ಸಂಘರ್ಷದಿಂದಾಗಿ ವರ್ಷದಿಂದ ವರ್ಷಕ್ಕೆ ಜೀವ ಕಳೆದುಕೊಳ್ಳುವುದು ಹೆಚ್ಚಾಗಿದೆ. ಬೆಳೆಹಾನಿಯೂ ಹೆಚ್ಚುತ್ತಲೇ ಇದೆ. ಇದಕ್ಕೆಲ್ಲಾ ಪರಿಹಾರದ ತೇಪೆ ಹಾಕುತ್ತಿದ್ದ ಸರ್ಕಾರ ಕಡೆಗೂ ಶಾಶ್ವತ ಪರಿಹಾರಕ್ಕೆ ಮುಂದಾಗಿರುವುದು ಸಮಾಧಾನ ತಂದಿದೆ. ವಿಳಂಬ ಮಾಡದೆ ಆದಷ್ಟು ಬೇಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.
-ಐ ಕೆ. ಮಲ್ಲಯ್ಯ, ರಾಜ್ಯ ಉಪಾಧ್ಯಕ್ಷ, ರೈತ ಸಂಘ,ಚನ್ನಪಟ್ಟಣ
ಬ್ಯಾರಿಕೇಡ್, ಸೌರಬೇಲಿ ದುರಸ್ತಿಯಾಗಲಿ
ಹೊಸದಾಗಿ ರೈಲ್ವೆ ಬ್ಯಾರಿಕೇಡ್, ಸೌರಬೇಲಿ, ಆನೆ ನಿರೋಧಕ ಗುಂಡಿಗಳ ನಿಯಂತ್ರಣಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಹಾನಿಗೊಂಡಿರುವ ಮತ್ತು ನಿರ್ವಹಣೆ ಇಲ್ಲದೆ ಸೊರಗಿರುವ ಬ್ಯಾರಿಕೇಡ್ ಮತ್ತು ಸೌರಬೇಲಿ ದುರಸ್ತಿಗೆ ಅರಣ್ಯ ಇಲಾಖೆಗೆ ಸೂಚನೆ ನೀಡಬೇಕು.
-ನಲ್ಲಹಳ್ಳಿ ಶ್ರೀನಿವಾಸ್, ರೈತ ಸಂಘ, ಕನಕಪುರ
ಆನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಜಿಲ್ಲೆಯ ರೈತರು ಇದುವರೆಗೆ ಮಾಡಿಕೊಂಡು ಬಂದಿರುವ ಪ್ರತಿಭಟನೆ, ಹೋರಾಟ ಹಾಗೂ ಕಚೇರಿ ಮುತ್ತಿಗೆಯಂತ ಹೋರಾಟಗಳಿಗೆ ಲೆಕ್ಕವಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡುತ್ತಿದ್ದ ಶಾಶ್ವತ ಪರಿಹಾರ ಭರವಸೆ ಇದೀಗ ನಿಜವಾಗುತ್ತಿದೆ. ನಿಯಂತ್ರಣ ಕ್ರಮಗಳ ಅನುಷ್ಠಾನ ತಡವಾಗದೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ.
-ಸಿ. ಪುಟ್ಟಸ್ವಾಮಿ, ರೈತ ಮುಖಂಡ, ಚನ್ನಪಟ್ಟಣ ತಾಲ್ಲೂಕು
ಪ್ರವಾಸಿ ಚಟುವಟಿಕೆಗೆ ಕಡಿವಾಣ
ಆನೆ ಹಾವಳಿಗೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಅರಣ್ಯ ಪ್ರದೇಶಗಳಲ್ಲಿ ಅನಧಿಕೃತವಾಗಿ ತಲೆ ಎತ್ತುತ್ತಿರುವ ಪ್ರವಾಸಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ರೆಸಾರ್ಟ್, ಹೋಂಸ್ಟೇಗಳನ್ನು ತೆರವುಗೊಳಿಸಬೇಕು. ಅರಣ್ಯ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಗಳು ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು.
-ಚೀಲೂರು ಮುನಿರಾಜು, ರೈತ ಸಂಘ, ಹಾರೋಹಳ್ಳಿ ತಾಲ್ಲೂಕು
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-15-1736911038