
ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ 16 ವರ್ಷಗಳಲ್ಲಿ 278 ಕಳ್ಳಬೇಟೆ ಪ್ರಕರಣ
ಚಾಮರಾಜನಗರ/ಹನೂರು: ಕಾವೇರಿ ವನ್ಯಧಾಮದ ಹೊಳೆ ಮುರದಟ್ಟಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿಗೆ ಮೂವರು ಮೃತಪಟ್ಟ ಘಟನೆ ಬೆನ್ನಲ್ಲೇ ಕಾಡಿನೊಳಗೆ ಹೆಚ್ಚುತ್ತಿರುವ ಬೇಟೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಬೇಟೆಗಾರರ ನಡುವಿನ ಸಂಘರ್ಷ ಪ್ರಕರಣಗಳು ಮುನ್ನೆಲೆಗೆ ಬಂದಿದೆ.
ಹನೂರು ತಾಲ್ಲೂಕಿನ ಭೌಗೋಳಿಕ ವಿಸ್ತೀರ್ಣದಲ್ಲಿ ಶೇ 60ರಷ್ಟು ಕಾಡು ಆವರಿಸಿದ್ದು, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳನ್ನು ಒಳಗೊಂಡಿದೆ. ಇವುಗಳ ಪೈಕಿ ಮಲೆ ಮಹದೇಶ್ವರ ವನ್ಯಧಾಮದಲ್ಲಿ 2010ರಿಂದ ಇಲ್ಲಿಯವರೆಗೂ 278 ಕಳ್ಳಬೇಟೆ ಪ್ರಕರಣಗಳು ದಾಖಲಾಗಿವೆ. ಆನೆ, ಜಿಂಕೆ, ಕಡವೆ, ಉಡ, ಕಾಟಿ ಸಹಿತ ಮಾಂಸಾಹಾರಿ ಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇಲೆ ಬೇಟೆಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
‘ಕಾವೇರಿ ವನ್ಯಧಾಮದೊಳಗೂ ಕಳ್ಳಬೇಟೆ ಪ್ರಕರಣಗಳು ಅವ್ಯಾಹತವಾಗಿದ್ದು ಉಭಯ ಅರಣ್ಯಗಳಲ್ಲಿ ವರ್ಷಕ್ಕೆ ಕನಿಷ್ಠ 20ರಿಂದ 30 ಕಳ್ಳಬೇಟೆ ಪ್ರಕರಣಗಳು ದಾಖಲಾಗುತ್ತಿವೆ, ಸಿಬ್ಬಂದಿ ಕೊರತೆಯ ನಡುವೆ ಕಳ್ಳಬೇಟೆ ತಡೆಯುವುದು ಸವಾಲಾಗಿ ಪರಿಣಮಿಸಿದೆ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ದಶಕಗಳ ಹಿಂದೆ ಕಾಡುಗಳ್ಳ ವೀರಪ್ಪನ್ ಅಟ್ಟಹಾಸ ಮಿತಿಮೀರಿದ್ದ ಅವಧಿಯಲ್ಲಿ ಕಳ್ಳ ಬೇಟೆ ಹೆಚ್ಚಿತ್ತು. 2004ರಲ್ಲಿ ವೀರಪ್ಪನ್ ಹತನಾದ ಬಳಿಕ ನಿಯಂತ್ರಣಕ್ಕೆ ಬಂದರೂ ಸಂಪೂರ್ಣವಾಗಿ ನಿಂತಿಲ್ಲ. ಮಲೆ ಮಹದೇಶ್ವರ ವನ್ಯಧಾಮ 934 ಚ.ಕಿ.ಮೀ ಹಾಗೂ ಕಾವೇರಿ ವನ್ಯಧಾಮ 1024 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು ಶೇ 90ರಷ್ಟು ಕಳ್ಳಬೇಟೆ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ತಮಿಳುನಾಡು ಬೇಟೆಗಾರರ ಹಾವಳಿ:
ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿರುವ ರಾಮಾಪುರ, ಹೂಗ್ಯಂ, ಪಾಲಾರ್ ವನ್ಯಜೀವಿ ವಲಯಗಳು ಹಾಗೂ ಕಾವೇರಿ ವನ್ಯಧಾಮ ವ್ಯಾಪ್ತಿಯಲ್ಲಿರುವ ಗೋಪಿನಾಥಂ, ಕೌದಳ್ಳಿ ವನ್ಯಜೀವಿ ವಲಯಗಳು ನೆರೆಯ ತಮಿಳುನಾಡಿನ ಜೊತೆಗೆ ಗಡಿ ಹಂಚಿಕೊಂಡಿವೆ.
ಈ ಭಾಗದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಕಳ್ಳಬೇಟೆಯೂ ಹೆಚ್ಚಾಗುತ್ತದೆ. ನದಿ ದಾಟಿ ರಾಜ್ಯದ ಅರಣ್ಯ ಪ್ರವೇಶಿಸುವ ತಮಿಳುನಾಡಿನ ಬೇಟೆಗಾರರು ವನ್ಯಜೀವಿಗಳನ್ನು ಬೇಟೆಯಾಡಿ ಮಾಂಸ, ಚರ್ಮ ಕೊಂಡೊಯ್ಯುತ್ತಿದ್ದಾರೆ. ಈ ಸಂಬಂಧ ಇಲಾಖೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.