
ದೀಪಕ್ ಕೇಬಲ್ಸ್ ಲಿಮಿಟೆಡ್‌ಗೆ ಸೇರಿದ ₹150 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಸಹವರ್ತಿ ಬ್ಯಾಂಕ್‌ಗಳಿಂದ ₹899.35 ಕೋಟಿ ಸಾಲ ಪಡೆದು, ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ದೀಪಕ್ ಕೇಬಲ್ಸ್ (ಇಂಡಿಯಾ) ಲಿಮಿಟೆಡ್‌ಗೆ ಸೇರಿದ ₹150 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಖೊಟ್ಟಿ ಬ್ಯಾಂಕ್ ಗ್ಯಾರಂಟಿಗಳನ್ನು ಒದಗಿಸಿ ಸಾಲ ಪಡೆದಿದ್ದ ಕಂಪನಿಯು, ಅದನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿತ್ತು. ಸಾಲ ದುರ್ಬಳಕೆ ಮತ್ತು ಸಾಲ ವಾಪಸಾತಿ ಮಾಡದೇ ಇರುವುದರ ಸಂಬಂಧ ಕಂಪನಿಯ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯ ಭಾಗವಾಗಿ ಇ.ಡಿ ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ಬೆಂಗಳೂರು, ಚೆನ್ನೈ, ಮುಂಬೈ ಸೇರಿ ದೇಶದ 17 ವಿವಿಧ ಸ್ಥಳಗಳಲ್ಲಿ 2026ರ ಮೇ 21ರಂದು ದಾಳಿ ನಡೆಸಿದ್ದರು. ಮೇ 29ರವರೆಗೂ ಸತತವಾಗಿ ನಡೆದಿದ್ದ ದಾಖಲೆಗಳ ಪರಿಶೀಲನೆಯ ನಂತರ ₹19.27 ಕೋಟಿ ಮೌಲ್ಯದ ಚಿನ್ನಾಭರಣ, ನಗದು ಮತ್ತು ಬ್ಯಾಂಕ್ ಠೇವಣಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.
ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ, ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆ.ವೆಂಕಟೇಶ್ವರ ರಾವ್ ಅವರ ವಿಚಾರಣೆ ನಡೆಸಿದ್ದ ಇ.ಡಿ ಅಧಿಕಾರಿಗಳು ಜೂನ್ 2ರಂದು ಅವರನ್ನು ಬಂಧಿಸಿದ್ದರು.
‘ವೆಂಕಟೇಶ್ವರ ರಾವ್ ಅವರ ಅಣತಿಯಂತೆಯೇ ಅಕ್ರಮ ನಡೆದಿದೆ. ಅಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ತನಿಖೆ ನಡೆಯುತ್ತಿದೆ’ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.