
ಸ್ವಂತ ಉದ್ಯಮ ಆರಂಭಿಸುವವರಿಗೆ ಸಿಹಿಸುದ್ದಿ; ಸರ್ಕಾರದಿಂದ ಸಿಗಲಿದೆ ₹10 ಲಕ್ಷದವರೆಗೆ ನೆರವು!
ನಮ್ಮಲ್ಲಿ ಅನೇಕ ಮಂದಿ ಮನೆಯಿಂದಲೇ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಾರೆ. ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಮಸಾಲೆ ಪದಾರ್ಥ, ಬೇಕರಿ ತಿನಿಸು, ಸಿಹಿತಿಂಡಿ ಮತ್ತು ಇತರ ಆಹಾರ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿ ಮಾರಾಟ ಮಾಡ್ತಾರೆ. ಮನೆಯಿಂದಲೇ ನಡೆಯುವುದರಿಂದ ಈ ವ್ಯಾಪಾರ ವಹಿವಾಟು ಸಣ್ಣ ಪ್ರಮಾಣದಲ್ಲಿಯೇ ಸಾಗುತ್ತದೆ. ಇಲ್ಲಿ ಯಂತ್ರೋಪಕರಣಗಳು, ಪ್ಯಾಕೇಜಿಂಗ್, ಲೈಸೆನ್ಸ್, ಬ್ರ್ಯಾಂಡಿಂಗ್ ಮತ್ತು ವ್ಯಾಪಾರ ವಿಸ್ತರಣೆಗೆ ಹಣದ ಕೊರತೆಯಿಂದಾಗಿ ಹೆಚ್ಚಿನ ಸಣ್ಣ ವ್ಯವಹಾರಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ.
ಈ ಸಣ್ಣ ಬ್ಯುಸಿನೆಸ್ ಅನ್ನು ಬಲಪಡಿಸಲು, ಕೇಂದ್ರ ಸರ್ಕಾರವು PMFME ಯೋಜನೆಯನ್ನು ಪ್ರಾರಂಭಿಸಿದೆ. ಸಣ್ಣ ವ್ಯವಹಾರಗಳಿಗೆ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುವುದು ಇದರ ಉದ್ದೇಶ. ಸಣ್ಣ ಉದ್ಯಮವನ್ನು ಹೆಚ್ಚು ಸಂಘಟಿತವಾಗಿ ದೊಡ್ಡ ಮಾರುಕಟ್ಟೆಗೆ ತಯಾರು ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಯೋಜನೆಯು ವೈಯಕ್ತಿಕ ಉದ್ಯಮಿಗಳಿಗೆ, ಸ್ವಸಹಾಯ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳಿಗೆ ವಿವಿಧ ರೀತಿಯ ಸಹಾಯವನ್ನು ನೀಡುತ್ತದೆ. ವೈಯಕ್ತಿಕ ಅಥವಾ ಗ್ರೂಪ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಯೂನಿಟ್‌ಗಳಿಗೆ ಅರ್ಹ ಯೋಜನಾ ವೆಚ್ಚದ 35% ವರೆಗೆ ಕ್ರೆಡಿಟ್-ಸಂಬಂಧಿತ ಬಂಡವಾಳ ಸಬ್ಸಿಡಿಯನ್ನು ನೀಡಲಾಗುತ್ತದೆ. ಪ್ರತಿ ಯೂನಿಟ್‌ಗೆ ಗರಿಷ್ಠ ಮಿತಿ 10 ಲಕ್ಷದವರೆಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಹೆಚ್ಚುವರಿಯಾಗಿ, ತರಬೇತಿ, ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಹೀಗೆ ವ್ಯವಹಾರ ಸುಧಾರಣೆಗೆ ಅಗತ್ಯವಿರುವ ಸಹಾಯವನ್ನು ಕೂಡಾ ನೀಡಲಾಗುತ್ತದೆ.
PMFME, ಅಥವಾ ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ ಅಪ್‌ಗ್ರೇಡೇಶನ್ ಸ್ಕೀಮ್, ಆಹಾರ ಸಂಸ್ಕರಣಾ ಸಚಿವಾಲಯದ ಒಂದು ಯೋಜನೆಯಾಗಿದೆ. ಇದನ್ನು ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಪ್ರಾರಂಭಿಸಲಾಗಿದೆ. ಸಣ್ಣ ಮತ್ತು ಅಸಂಘಟಿತ ಆಹಾರ ಸಂಸ್ಕರಣಾ ವ್ಯವಹಾರಗಳನ್ನು ಬಲಪಡಿಸುವುದು ಮತ್ತು ಅವುಗಳನ್ನು ಸಂಘಟಿತ ವ್ಯವಹಾರಗಳಾಗಿ ಪರಿವರ್ತಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.
ಇದು ಹೊಸ ಮೈಕ್ರೋ ಫುಡ್ ಪ್ರೊಸೆಸಿಂಗ್ ವ್ಯವಹಾರಗಳನ್ನು ಪ್ರಾರಂಭಿಸಲು ಮತ್ತು ಅಸ್ತಿತ್ವದಲ್ಲಿರುವ ಬುಸಿನೆಸ್ ಅನ್ನು ಅಪ್‌ಗ್ರೇಡ್ ಮಾಡಲು ಸಹಾಯ ನೀಡುತ್ತದೆ. ಸಣ್ಣ ಬೇಕರಿ, ಮಸಾಲೆ ಘಟಕ, ಉಪ್ಪಿನಕಾಯಿ, ಹಪ್ಪಳ ಅಥವಾ ಇತರ ಆಹಾರ ಸಂಸ್ಕರಣಾ ವ್ಯವಹಾರವನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ಬಯಸುವವರು ತಮ್ಮ ಅರ್ಹತೆಯ ಆಧಾರದ ಮೇಲೆ ಈ ಯೋಜನೆಯ ಲಾಭವನ್ನು ಪಡೆಯಬಹುದು.
35% ವರೆಗೆ ಸಬ್ಸಿಡಿ, ಗರಿಷ್ಠ 10 ಲಕ್ಷ ರೂ.
ಈ ಯೋಜನೆಯ ಪ್ರಮುಖ ಲಕ್ಷಣವೆಂದರೆ ಕ್ರೆಡಿಟ್-ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ. ಅರ್ಹ ವ್ಯಕ್ತಿ ಅಥವಾ ಗ್ರೂಪ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಯೂನಿಟ್‌ಗಳು ಯೋಜನಾ ವೆಚ್ಚದ 35% ವರೆಗೆ ಪ್ರಯೋಜನ ಪಡೆಯಬಹುದು. ಪ್ರತಿ ಯೂನಿಟ್‌ಗೆ ಗರಿಷ್ಠ ಮಿತಿ 10 ಲಕ್ಷ ಎಂದು ನಿಗದಿ ಮಾಡಲಾಗಿದೆ. ಉದಾಹರಣೆಗೆ, ಅರ್ಹ ಯೋಜನಾ ವೆಚ್ಚ 20 ಲಕ್ಷವಾಗಿದ್ದರೆ, 35% ಸಬ್ಸಿಡಿ ಅಂದರೆ 7 ಲಕ್ಷದವರೆಗೆ ಇರುತ್ತದೆ.
ಅರ್ಹ ವೆಚ್ಚ 30 ಲಕ್ಷವಾಗಿದ್ದರೆ, 35% ಮೊತ್ತ ಅಂದರೆ 10.5 ಲಕ್ಷ. ಆದರೆ ಯೋಜನೆಯ ಗರಿಷ್ಠ ಮಿತಿ 10 ಲಕ್ಷವಾಗಿರುವುದರಿಂದ, ಸಬ್ಸಿಡಿ 10 ಲಕ್ಷಕ್ಕೆ ಸೀಮಿತವಾಗಿರುತ್ತದೆ. ಇದು ನೇರ ನಗದು ಪಾವತಿಯಲ್ಲ. ಬ್ಯಾಂಕ್ ಸಾಲಕ್ಕೆ ಲಿಂಕ್ ಮಾಡಲಾದ ಬಂಡವಾಳ ಸಬ್ಸಿಡಿಯಾಗಿದೆ. ಆದ್ದರಿಂದ, ಅರ್ಜಿ, ಬ್ಯಾಂಕ್ ಸಾಲ ಮತ್ತು ಅರ್ಹತಾ ಅವಶ್ಯಕತೆಗಳು ಅನ್ವಯಿಸುತ್ತವೆ.
ಸಾಲ ಮತ್ತು ಸಬ್ಸಿಡಿ ಜೊತೆಗೆ ಸಿಗುತ್ತದೆ ತರಬೇತಿ
ವ್ಯವಹಾರಗಳನ್ನು ನಡೆಸಲು ಅಗತ್ಯವಾದ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೂ PMFME ಒತ್ತು ನೀಡುತ್ತದೆ. ಆಹಾರ ಸಂಸ್ಕರಣಾ ಉದ್ಯಮಿಗಳಿಗೆ ವ್ಯವಹಾರ ಮತ್ತು ತಾಂತ್ರಿಕ ಜ್ಞಾನವನ್ನು ಒದಗಿಸಲು ತರಬೇತಿಯನ್ನು ನೀಡಲಾಗುತ್ತದೆ. ಸ್ವಸಹಾಯ ಗುಂಪುಗಳಿಗೂ ಬೀಜ ಬಂಡವಾಳವನ್ನು ನೀಡಲಾಗುತ್ತದೆ. ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ ಸ್ವಸಹಾಯ ಗುಂಪುಗಳು ಕಾರ್ಯನಿರತ ಬಂಡವಾಳ ಮತ್ತು ಸಣ್ಣ ಉಪಕರಣಗಳ ಖರೀದಿಗಾಗಿ ಪ್ರತಿ ಸದಸ್ಯರಿಗೆ 40,000 ವರೆಗೆ ಬೀಜ ಬಂಡವಾಳ ಅಥವಾ ಸೀಡ್ ಕ್ಯಾಪಿಟಲ್ ಅನ್ನು ಒದಗಿಸಬಹುದು.
ವ್ಯಾಪಾರ ಬ್ರ್ಯಾಂಡಿಂಗ್‌ಗೂ ಸಹಾಯ
ಸಣ್ಣ ವ್ಯವಹಾರಗಳಿಗೆ ಇರುವ ಪ್ರಮುಖ ಸಮಸ್ಯೆಯೆಂದರೆ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್. ಉತ್ಪನ್ನಗಳು ಟಾಪ್ ರೇಟೆಡ್ ಆಗಿದ್ದರೂ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಸಮಸ್ಯೆ ಇದನ್ನು ಕಾಡುತ್ತದೆ. ಇದೀಗ PMFME ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಬೆಂಬಲವನ್ನು ಒದಗಿಸುತ್ತದೆ. ಈ ಯೋಜನೆಯು ಒಂದು ಜಿಲ್ಲೆ ಒಂದು ಉತ್ಪನ್ನ ಮಾದರಿಯನ್ನು ಒತ್ತಿಹೇಳುತ್ತದೆ. ಜಿಲ್ಲೆಯ ಪ್ರಾಥಮಿಕ ಆಹಾರ ಉತ್ಪನ್ನದ ಸುತ್ತ ಸಂಪೂರ್ಣ ಸಂಗ್ರಹಣೆ, ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ವ್ಯವಸ್ಥೆಯನ್ನು ಬಲಪಡಿಸುವುದು ಇದರ ಗುರಿಯಾಗಿದೆ.
ಸಂಜೀತ್ ತನ್ನ ಜೀವನವನ್ನು ಬದಲಾಯಿಸಿದ್ದು ಹೀಗೆ
ಉತ್ತರ ಪ್ರದೇಶದ ಭದೌಲಿ ಗ್ರಾಮದ ಸಂಜೀತ್ ಕುಮಾರ್ ಅವರ ಕಥೆಯು ಯಶಸ್ವಿ ಸಣ್ಣ ವ್ಯವಹಾರಕ್ಕೆ ಒಂದು ಉದಾಹರಣೆಯಾಗಿದೆ. ಅವರು ಹಿಂದೆ ತಮ್ಮ ಹಳ್ಳಿಯಲ್ಲಿ ಒಂದು ಸಣ್ಣ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದರು. ಕಡಿಮೆ ಆದಾಯದಿಂದ, ಅವರ ಕುಟುಂಬವನ್ನು ಪೋಷಿಸುವುದು ಕಷ್ಟಕರವಾಗಿತ್ತು. ಒಬ್ಬ ಗ್ರಾಹಕರು PMFME ಯೋಜನೆಯ ಬಗ್ಗೆ ಅವರಿಗೆ ತಿಳಿಸಿದ್ದಾರೆ. ನಂತರ ಸಂಜೀತ್ ಕೈಗಾರಿಕಾ ಇಲಾಖೆ ಕಚೇರಿಗೆ ಹೋಗಿ, ಯೋಜನೆಯ ಬಗ್ಗೆ ವಿಚಾರಿಸಿ, ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯ ಪ್ರಯೋಜನಗಳನ್ನು ಪಡೆದ ನಂತರ, ಅವರು ಬೇಕರಿ ಯಂತ್ರೋಪಕರಣಗಳನ್ನು ಖರೀದಿಸಿ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು.
ಇದೀಗ ಅವರ ಬೇಕರಿಯಲ್ಲಿ ಬರ್ಗರ್, ಬಿಸ್ಕಿಟ್, ಟೋಸ್ಟ್ ಮತ್ತು ಬ್ರೆಡ್ ಸೇರಿದಂತೆ ವಿವಿಧ ಉತ್ಪನ್ನಗಳು ತಯಾರಾಗುತ್ತವೆ. ಇವುಗಳನ್ನು ಶೇಖಪುರ ಮತ್ತು ದೇಶದ ಇತರ ಭಾಗಗಳಿಗೆ ಸರಬರಾಜು ಮಾಡಲಾಗುತ್ತದೆ. ಅವರ ವ್ಯವಹಾರ ಬೆಳೆದಂತೆ, ಸಂಜೀತ್ 10 ಜನರಿಗೆ ಉದ್ಯೋಗ ನೀಡಿದ್ದಾರೆ. ಸರಿಯಾದ ಸರ್ಕಾರಿ ಬೆಂಬಲ, ಬ್ಯಾಂಕ್ ಹಣಕಾಸು ಮತ್ತು ವ್ಯವಹಾರದ ಜ್ಞಾನ ಇದ್ದರೆ ಸಣ್ಣ ವ್ಯವಹಾರವು ಕೂಡಾ ಉದ್ಯೋಗ ಸೃಷ್ಟಿಸುವ ವ್ಯವಹಾರವಾಗಿ ಬೆಳೆಯಬಹುದು ಎನ್ನುವುದನ್ನು ಇದು ತೋರಿಸುತ್ತದೆ.