ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಿದೆ ಎಂಬ ವದಂತಿಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೊಳಗಾಗಬಾರದು ಎಂದು ಮನವಿ ಮಾಡಿದೆ.ಕೆಲವು ಪ್ರದೇಶಗಳಲ್ಲಿ ಜನರು ಪೆಟ್ರೋಲ್ ಬಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ವರದಿಗಳು ಸರ್ಕಾರದ ಗಮನಕ್ಕೆ ಬಂದಿದ್ದು, ಇದು ಇಂಧನ ಕೊರತೆಯ ಸೂಚನೆಯಲ್ಲ, ವದಂತಿಗಳ ಪರಿಣಾಮ ಮಾತ್ರ ಎಂದು ಸ್ಪಷ್ಟಪಡಿಸಿದೆ.
ದೇಶಾದ್ಯಂತ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸಾಕಷ್ಟು ಇಂಧನ ಸಂಗ್ರಹವಿದ್ದು, ಯಾವುದೇ ತೊಂದರೆ ಇಲ್ಲ ಎಂದು ಕೇಂದ್ರ ಸರ್ಕಾರದ ಮಾಹಿತಿಯನ್ನು ಉಲ್ಲೇಖಿಸಿದೆ.ವದಂತಿಗಳ ಹಿನ್ನೆಲೆಯಲ್ಲಿ ಕೆಲವರು ಬಾಟಲಿ, ಕ್ಯಾನ್ ಮುಂತಾದ ಪಾತ್ರೆಗಳಲ್ಲಿ ಇಂಧನ ಸಂಗ್ರಹಿಸಲು ಮುಂದಾಗುತ್ತಿರುವುದು ಗಂಭೀರ ಸುರಕ್ಷತಾ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಇಂಧನವನ್ನು ಕೇವಲ ವಾಹನಗಳ ಟ್ಯಾಂಕ್‌ಗಳಿಗೆ ಮಾತ್ರ ಪೂರೈಸುವಂತೆ ಪೆಟ್ರೋಲ್ ಬಂಕ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಬಾಹ್ಯ ಪಾತ್ರೆಗಳಲ್ಲಿ ಇಂಧನ ವಿತರಣೆ ಮತ್ತು ಸಂಗ್ರಹಣೆ ಕಾನೂನುಬಾಹಿರವಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.
ಇದೇ ವೇಳೆ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಇಂಧನ ಕೊರತೆ ಕುರಿತು ಸುಳ್ಳು ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದು, ನಗರದಲ್ಲಿ ಸಾಕಷ್ಟು ಇಂಧನ ಲಭ್ಯವಿದೆ ಎಂದು ಭರವಸೆ ನೀಡಿದ್ದಾರೆ. ಇಂಧನ ಪೂರೈಕೆ ಸಮರ್ಪಕವಾಗಿದ್ದು, ಜನರು ವದಂತಿಗಳಿಗೆ ಕಿವಿಗೊಡದೆ ಶಾಂತವಾಗಿರಬೇಕು ಎಂದು ಸರ್ಕಾರ ಮನವಿ ಮಾಡಿದೆ.







source https://suddione.com/here-is-the-governments-clarification-on-petrol-diesel-shortage/


0 Comments
If u have any queries, Please let us know