ಇರಾಕ್ ಇರಾನ್ ಯುದ್ಧದ ಬೆನ್ನಲ್ಲೇ ಜಾಗತಿಕ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ ಕರ್ನಾಟಕದ ಬಳ್ಳಾರಿ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ದುಬೈ ಪ್ರವಾಸಕ್ಕೆ ತೆರಳಿದ್ದ ಸುಮಾರು 51 ಮಂದಿ ಹಿರಿಯ ನಾಗರಿಕರು ಕಷ್ಟ ಅನುಭವಿಸುತ್ತಿದ್ದಾರೆ. ಶಾರ್ಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಇವರೆಲ್ಲರೂ ವಾಪಸ್ ಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ 15 ಮಂದಿ ಹಾಗೂ ಬಳ್ಳಾರಿ, ಚಿತ್ರದುರ್ಗದ 36 ಜನರು ಸೇರಿದಂತೆ ಒಟ್ಟು 51 ಮಂದಿಯ ತಂಡ ಕಳೆದ ಫೆಬ್ರವರಿ 23ರಂದು ಬೆಂಗಳೂರಿನಿಂದ ದುಬೈ ಪ್ರವಾಸಕ್ಕೆ ತೆರಳಿತ್ತು. ಫೆಬ್ರವರಿ 28ರ ಶನಿವಾರ ರಾತ್ರಿ 9:30ಕ್ಕೆ ಇವರೆಲ್ಲರಿಗೂ ಮರಳಿ ಬರಲು ವಿಮಾನ ಬುಕ್ ಆಗಿತ್ತು. ಆದರೆ, ಇವರು ವಿಮಾನ ನಿಲ್ದಾಣಕ್ಕೆ ತಲುಪುವಷ್ಟರಲ್ಲಿ ಯುದ್ಧದ ತೀವ್ರತೆಯಿಂದಾಗಿ ಶಾರ್ಜಾ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಯೊಳಗೆ ನಿಲ್ದಾಣ ತಲುಪಿದ್ದವರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗಿತ್ತು. ಆದರೆ ಈ ತಂಡವು ಮಧ್ಯಾಹ್ನದ ನಂತರ ಬಂದ ಕಾರಣ ಏರ್‌ಪೋರ್ಟ್ ಸಿಬ್ಬಂದಿ ಇವರನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದಾಗಿ ವಾಪಸ್ ಮರಳಲು ಇವರು ಕಷ್ಟಪಡುವಂತಾಗಿದೆ.
ಸಿಲುಕಿಕೊಂಡಿರುವವರಲ್ಲಿ 27 ವೃದ್ಧರು ಮತ್ತು 24 ವೃದ್ಧೆಯರಿದ್ದಾರೆ. ಇವರೆಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದು, ಬಹುತೇಕರು ಬಿಪಿ (ರಕ್ತದೊತ್ತಡ) ಮತ್ತು ಶುಗರ್ (ಮಧುಮೇಹ) ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನಿರಂತರವಾಗಿ ಔಷಧಿ ಸೇವಿಸಬೇಕಾದ ಅನಿವಾರ್ಯತೆ ಇವರದ್ದಾಗಿದೆ. ಸದ್ಯ ಇವರು ಶಾರ್ಜಾ ವಿಮಾನ ನಿಲ್ದಾಣದಿಂದ ಸುಮಾರು 23 ಕಿ.ಮೀ ದೂರದಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ಆಶ್ರಯ ಪಡೆದಿದ್ದಾರೆ.

ತಮ್ಮ ಅಸಹಾಯಕ ಸ್ಥಿತಿಯ ಬಗ್ಗೆ ಮೊಬೈಲ್ ವಿಡಿಯೋ ಮಾಡಿರುವ ವಯೋವೃದ್ಧರು, ಬಳ್ಳಾರಿ ಶಾಸಕರಾದ ಭರತ್ ರೆಡ್ಡಿ, ಬಿ. ನಾಗೇಂದ್ರ ಹಾಗೂ ದಾವಣಗೆರೆ ಜಿಲ್ಲಾಡಳಿತಕ್ಕೆ ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. “ನಾವು ಇಲ್ಲಿ ಅಕ್ಷರಶಃ ಲಾಕ್ ಆಗಿದ್ದೇವೆ. ವಿಮಾನ ನಿಲ್ದಾಣದೊಳಗೆ ನಮ್ಮನ್ನು ಬಿಡುತ್ತಿಲ್ಲ, ಹೊರಗೆ ಉಳಿಯಲು ಹಣವಿಲ್ಲ. ದಯವಿಟ್ಟು ನಮ್ಮನ್ನು ಭಾರತಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿ” ಎಂದು ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಸೇರಿದಂತೆ ಹಲವರು ಕಣ್ಣೀರಿಟ್ಟಿದ್ದಾರೆ.




source https://suddione.com/the-elderly-people-of-davangere-and-chitradurga-stuck-in-the-middle-of-the-war/


0 Comments
If u have any queries, Please let us know