ತ್ವರಿತವಾಗಿ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಿ : ಸಚಿವ ಡಿ.ಸುಧಾಕರ್

ಚಿತ್ರದುರ್ಗ. ಆಗಸ್ಟ್ 04: ಜಲ ಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿ, ತೊಂದರೆ ಕಂಡು ಬಂದರೆ ಅವುಗಳನ್ನು ಪರಿಹರಿಸಿ, ಗ್ರಾ.ಪಂ.ಗಳಿಗೆ ಹಸ್ತಾಂತರಿಸುವಂತೆ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.

ಓವರ್ ಹೆಡ್ ಟ್ಯಾಂಕ್‍ಗಳ ನಿರ್ಮಾಣಕ್ಕೆ ಜಾಗದ ತೊಂದರೆ ಇರುವ ಗ್ರಾಮಗಳ ಪಟ್ಟಿಯನ್ನು ಸಿದ್ಧಪಡಿಸಿ, ಆಯಾ ತಾಲ್ಲೂಕಿನ ಶಾಸಕರೊಂದಿಗೆ ಚರ್ಚಿಸಬೇಕು. ಸ್ಥಳೀಯ ಜನಪ್ರತಿನಿಧಿಗಳ ಸಹಾಯದಿಂದ ಸಮಸ್ಯೆ ಪರಿಹರಿಸಿ ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ಕುಡಿಯುವ ನೀರಿನ ಕಾಮಗಾರಿಗಳ ಪೈಪ್ ಲೈನ್ ಅಳವಡಿಕೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಹರಿಸಬೇಕು. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿಗಳಿಗೆ ಅನುಮತಿ ನೀಡಲು ಅರಣ್ಯ ಇಲಾಖೆ ನಿಯಮಗಳಲ್ಲಿ ಅವಕಾಶವಿದೆ. ಈ ಕುರಿತು ಜಿ.ಪಂ. ಸಿಇಓ ಅವರ ನೇತೃತ್ವದಲ್ಲಿ  ಉಪ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸಚಿವ ಡಿ.ಸುಧಾಕರ್ ನಿರ್ದೇಶನ ನೀಡಿದರು.

ಕೆ.ಎಂ.ಇ.ಆರ್.ಸಿ ಹಾಗೂ ಡಿಎಂಎಫ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರಮುಖ ರಸ್ತೆಗಳನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸಿ ರಸ್ತೆ ನಿರ್ಮಾಣಕ್ಕೂ ಮುನ್ನವೇ ಪೈಪ್‍ಲೈನ್‍ಗಳನ್ನು ಅಳವಡಿಸಬೇಕು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಇನ್ನೂ ಕಾಮಗಾರಿ ಆರಂಭಿಸದ ಗುತ್ತಿಗೆದಾರರನ್ನು ಕೈಬಿಟ್ಟು, ಮರು ಟೆಂಡರ್ ಮಾಡಿ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ಜಿಲ್ಲೆಯಲ್ಲಿ ರೂ.938 ಕೋಟಿ ವೆಚ್ಚದಲ್ಲಿ 1,560 ಕಾಮಗಾರಿಗಳಿಗೆ 4 ಬ್ಯಾಚ್‍ಗಳಲ್ಲಿ ಅನುಮೋದನೆ ನೀಡಲಾಗಿದೆ. ಈವರೆಗೂ 856 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 660 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. 44 ಕಾಮಗಾರಿಗಳನ್ನು ಪ್ರಾರಂಭಿಸಬೇಕಿದೆ. ಅಂದಾಜು ಶೇ.50 ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ. 511 ಕಾಮಗಾರಿಗಳನ್ನು ಗ್ರಾ.ಪಂ.ಗಳಿಗೆ ಹಸ್ತಾಂತರಿಸಲಾಗಿದೆ. ರೂ.2,997 ಕೋಟಿ ವೆಚ್ಚದಲ್ಲಿ ಒಟ್ಟು 10 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿ.ಪಂ. ಸಿಇಓ ಡಾ.ಆಕಾಶ್ ಮಾಹಿತಿ ನೀಡಿದರು.

ಐಮಂಗಲ ಹಾಗೂ ಜವಗೊಂಡನಹಳ್ಳಿ ಸೇರಿದಂತೆ 76 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ 37 ಹಳ್ಳಿಗಳ ಕಾಮಗಾರಿ ಪೂರ್ಣಗೊಂಡಿದೆ. 34 ಅಂತಿಮ ಹಂತದಲ್ಲಿವೆ. ಓಬಳಾಪುರ ಗ್ರಾಮದಲ್ಲಿ ಈಗಿರುವ ವ್ಯವಸ್ಥೆಯಲ್ಲಿ ನೀರು ಸರಬರಾಜು ಮುಂದುವರಿಸುವಂತೆ ಗ್ರಾ.ಪಂ. ನಡಾವಳಿ ಮಾಡಿ ಜಿ.ಪಂ. ಗೆ ಕಳುಹಿಸಿಕೊಟ್ಟಿದ್ದಾರೆ. ಮರಡಿಹಳ್ಳಿ ಗ್ರಾಮದ ಕಾಮಗಾರಿಗೆ ಮರು ಟೆಂಡರ್ ಕರೆಯಲಾಗಿದೆ. ಯಲಕೂರನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಅವಶ್ಯಕತೆಯಿದೆ. 17 ಗ್ರಾಮಗಳಲ್ಲಿ ಕಾಮಗಾರಿ ಪ್ರಾರಂಭಿಸಬೇಕಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೀಲ್, ಜಲಜೀವನ್ ಮಿಷನ್ ಯೋಜನೆಯ ಯೋಜನಾ ವ್ಯವಸ್ಥಾಪಕ ಮಂಜುನಾಥ ಎಸ್ ನಾಡರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರು, ಗುತ್ತಿದಾರರು ಸಭೆಯಲ್ಲಿ ಉಪಸ್ಥಿರಿದ್ದರು.

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ