
ರಾಯರ ಭಕ್ತ ಬಳಗ ಅಪಾರವಾಗಿದೆ. ಬೇರೆ ಬೇರೆ ರಾಜ್ಯದಿಂದಾನೂ ಮಠಕ್ಕೆ ಬರ್ತಾರೆ. ರಾಯರು ಅಷ್ಟೇ ತಮ್ಮ ಭಕ್ತರನ್ನ ಸದಾ ಕಾಪಾಡುತ್ತಲೇ ಇರುತ್ತಾರೆ. ಅದರಲ್ಲೂ ಆರಾಧನಾ ಮಹೋತ್ಸವಕ್ಕಾಗಿ ಭಕ್ತವೃಂದವೇ ಕಾಯುತ್ತಾ ಇರುತ್ತದೆ. ಅಂಥ ವಿಶೇಷ ದಿನ ಇಂದು ಶುರುವಾಗಿದೆ. ಇಂದಿನಿಂದ 354ನೇ ಆರಾಧನಾ ಮಹೋತ್ಸವ ಶುರುವಾಗಿದ್ದು, ಏಳು ದಿನಗಳ ಕಾಲ ನಡೆಯಲಿದೆ.

ಈ ಏಳು ದಿನಗಳ ಸಪ್ತರಾತ್ರೋತ್ಸವ ನಡೆಯಲಿದೆ. ಇಂದು ಸಂಜೆ ಧ್ವಜಾರೋಹಣ ಮೂಲಕ ಸಪ್ತರಾತ್ರೋತ್ಸವಕ್ಕೆ ಮಠಕ್ಕೆ ಪೀಠಾಧಿಪತಿ ಸುಬುದೇಂದ್ರ ತೀರ್ಥ ಸ್ವಾಮಿಯವರು ಚಾಲನೆ ನೀಡಲಿದ್ದಾರೆ. ಈ ಸಮಯದಲ್ಲಿ ಗೋ, ಗಜ, ಅಶ್ವ, ಧಾನ್ಯ, ಲಕ್ಷ್ಮೀ ಪೂಜೆಯೊಂದಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಆಗಸ್ಟ್ 10ಕ್ಕೆ ಪೂರ್ವಾರಾಧನೆ, ಆಗಸ್ಟ್ 11ಕ್ಕೆ ಮಧ್ಯಾರಾಧನೆ, ಆಗಸ್ಟ್ 12ಕ್ಕೆ ಉತ್ತರಾರಾಧನೆ ನಡೆಯಲಿದೆ.
ತಿರುಮಲ ತಿರುಪತಿ ದೇವಸ್ಥಾನದಿಂದ ಇಂದು ಬರಲಿರುವ ಶ್ರೀನಿವಾಸ ದೇವರ ಶೇಷವಸ್ತ್ರ ರಾಯರ ಮೂಲ ಬೃಂದಾವನಕ್ಕೆ ಸಮರ್ಪಣೆ ಮಾಡಲಾಗುತ್ತದೆ. ಜೊತೆಗೆ ಮಠದ ಆವರಣದಲ್ಲಿ ನಿರ್ಮಾಣಗೊಂಡಿರುವ ಪುಷ್ಕರಣಿ ಆಗಸ್ಟ್ 9ಕ್ಕೆ ಲೋಕಾರ್ಪಣೆಯಾಗಲಿದೆ. ಆಗಸ್ಟ್ 10ರಂದು ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಆಗಸ್ಟ್ 12ರಂದು ಬೆಳಗ್ಗೆ 10 ಗಂಟೆಗೆ ಶ್ರೀಮಠದ ಮುಂದಿನ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. ರಾಯರ ಮೂಲ ಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ ಮಾಡಲಾಗುತ್ತಿದೆ. ಆರಾಧನಾ ಮಹೋತ್ಸವದ ಏಳು ದಿನಗಳ ಕಾಲ ಮಂತ್ರಾಲಯ ರಾಯರ ಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಈ ಸಮಯದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಠಕ್ಕೆ ಬರುವ ಕಾರಣ ಬಿಗಿ ಭದ್ರತೆಯನ್ನ ದೇವಸ್ಥಾನದ ಆಡಳಿತ ಒದಗಿಸಿದೆ.


