Ganesha: ಮನೆಯೇ ಗಣೇಶಾಲಯ, ಬ್ಯಾಂಕ್‌ ನಿವೃತ್ತ ಅಧಿಕಾರಿ ವಿಭಿನ್ನ ಹವ್ಯಾಸ

Ganesha: ಮನೆಯೇ ಗಣೇಶಾಲಯ, ಬ್ಯಾಂಕ್‌ ನಿವೃತ್ತ ಅಧಿಕಾರಿ ವಿಭಿನ್ನ ಹವ್ಯಾಸ

Ganesha: ಮನೆಯೇ ಗಣೇಶಾಲಯ, ಬ್ಯಾಂಕ್‌ ನಿವೃತ್ತ ಅಧಿಕಾರಿ ವಿಭಿನ್ನ ಹವ್ಯಾಸ

ಬೆಂಗಳೂರು: ಇವರ ಮನೆ ಹೊಕ್ಕರೆ ಕಾಣುವುದು ಬರೀ ಗಣೇಶನೇ. ಇದೊಂದು ರೀತಿ ಗಣೇಶಾಲಯ. ಅವೆಲ್ಲವೂ ವಿಭಿನ್ನ ಶೈಲಿಯ ಗಣೇಶ ಮೂರ್ತಿಗಳು. ನಿಂತ, ಕುಳಿತ ಭಂಗಿಯ ಗಣೇಶ ವಿಗ್ರಹಗಳು, ವಿವಿಧ ರೂಪದಲ್ಲಿ ಒಡಮೂಡಿರುವ ಗಣೇಶನೇ ಅಧಿಕ. ಆ ಮನೆಯ ಶೋಕೇಸ್‌ ಅನ್ನು ಅಂದಗಾಣಿಸಿದ್ದಾನೆ ವಿಘ್ನ ನಿವಾರಕ. ಅಂದರೆ, ಅದೊಂದು ರೀತಿ ಗಣೇಶ ಮ್ಯೂಸಿಯಂ.

ಕೆಲವೊಬ್ಬರಿಗೆ ಒಂದೊಂದು ಹವ್ಯಾಸ. ಅಂಚೇ ಚೀಟಿಯನ್ನು ಸಂಗ್ರಹಿಸುವ ಹವ್ಯಾಸ ಹಲವರದ್ದಾಗಿದ್ದರೆ, ಇನ್ನೂ ಕೆಲವರು ಬಗೆಬಗೆಯ ನಟರ, ಚಿತ್ರಗಳ ಮಾಹಿತಿ ಕಲೆ ಹಾಕುತ್ತಾರೆ.

ಆದರೆ, ಇಲ್ಲೊಬ್ಬರು ನಿವೃತ್ತ ಬ್ಯಾಂಕ್ ಅಧಿಕಾರಿ ಸುಮಾರು 3 ದಶಕದಿಂದಲೂ ವಿಭಿನ್ನ ವಿನ್ಯಾಸ ಗಣೇಶನ ಮೂರ್ತಿಗಳನ್ನು ಸಂಗ್ರಹಿಸುತ್ತಾ ಬಂದಿದ್ದಾರೆ.

ಈವರೆಗೂ ಬರೋಬ್ಬರಿ 550 ಗಣೇಶ ಮೂರ್ತಿಗಳನ್ನು ಅವರು ಸಂಗ್ರಹಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಹಲವು ರಾಜ್ಯಗಳಿಗೆ ಪ್ರವಾಸ ಹೋದಾಗ ಅಲ್ಲಿಂದ ಸಂಗ್ರಹಿಸಿಕೊಂಡು ಬಂದ ಗಣೇಶ ಮೂರ್ತಿಗಳೂ ಅಧಿಕ. ಬ್ಯಾಂಕ್ ಕಚೇರಿ ಸಂಬಂಧ ಪ್ರವಾಸ ಹೋದರೆ ವಾರಾಂತ್ಯ ಗಣೇಶನ ಮೂರ್ತಿಗಳ ವೀಕ್ಷಣೆ ಹಾಗೂ ಖರೀದಿಗೆ ಮೀಸಲು. ಇದಕ್ಕಾಗಿ ಲಕ್ಷಾಂತರ ಹಣ ವಿನಿಯೋಗಿಸಿ ಗಣೇಶನನ್ನು ಅತ್ಯಾಪ್ತನನ್ನಾಗಿಸಿಕೊಂಡಿದ್ದಾರೆ.

ಹವ್ಯಾಸ ಶುರುವಾಗಿದ್ದು ಹೀಗೆ

ಇವರ ಹೆಸರು ಜಯರಾಮ ಕಾಮತ್‌. ಮೂಲತಃ ಉಡುಪಿ ಜಿಲ್ಲೆ ಕಾರ್ಕಳದವರು. ಅಲ್ಲಿಂದ ಸಣ್ಣ ವಯಸ್ಸಿನಲ್ಲಿಯೇ ಚಿಕ್ಕಮಗಳೂರು ಜಿಲ್ಲೆಯ ಕಳಸಕ್ಕೆ ವರ್ಗಾವಣೆಯಾಯಿತು. ಅಲ್ಲಿಯೇ ಶಿಕ್ಷಣ ಪಡೆ್ದವರು ಕಾಮತರು. ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಉಜಿರಿಗೆ ಕಾಲೇಜು ಶಿಕ್ಷಣಕ್ಕೆ ಬಂದಿದ್ದರಿಂದ ಅಲ್ಲಿ ನೆಲೆಸಬೇಕಾಯಿತು. ಶಿಕ್ಷಣ ಮುಗಿದು ಕಾರ್ಪರೇಷನ್‌ ಬ್ಯಾಂಕ್‌ನಲ್ಲಿ ಉದ್ಯೋಗ ಸಿಕ್ಕಿತು. ಅವರ ಕೆಲಸದ ಮೊದಲ ಊರು ತುಮಕೂರು.

ಬ್ಯಾಂಕ್‌ ಕಚೇರಿ ಇದ್ದ ಪಕ್ಕದ ಕೊಠಡಿಯೊಂದರಲ್ಲಿ ಜ್ಯೋತಿಷಿ ಒಬ್ಬರಿದ್ದರು. ಪ್ರತಿದಿನ ಅವರನ್ನು ನೋಡುತ್ತಿದ್ದ ಕಾಮತರು ಅವರನ್ನು ಭೇಟಿ ನೀಡಿದ್ದರು. ನೀವು ಗಣೇಶನನ್ನು ಪೂಜಿಸಿ ಎಂದು ಜ್ಯೋತಿಷಿ ಇವರಿಗೆ ತಿಳಿಸಿದ್ದರು. ಅದರಂತೆ ಅವರು ಗಣೇಶನ ಪೂಜೆ ಆರಂಭಿಸಿದರು. ಗಣೇಶನ ಮೇಲೆ ಅಭಿಮಾನವೂ ಶುರುವಾಯಿತು.

ಕಾಮತ್ ಅವರನ್ನು ಬ್ಯಾಂಕ್‌ ನಿಂದ ತಪಾಸಣೆ ತಂಡದಲ್ಲಿ ಪ್ರವಾಸ ಕಳುಹಿಸಲಾಗುತ್ತಿತ್ತು. ಒಮ್ಮೆ ಗೋವಾಕ್ಕೆ ಹೋಗಿದ್ದರು. ವಾರಾಂತ್ಯ ಬೀಚ್‌ ಒಂದಕ್ಕೆ ಸ್ನೇಹಿತರೊಂದಿಗೆ ಹೊರಟರು. ಅಲ್ಲಿ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದುದು ಅವರ ಗಮನ ಸೆಳೆಯಿತು. ಆರು ವಿಭಿನ್ನ ಗಣೇಶ ಮೂರ್ತಿಗಳನ್ನು ಖರೀದಿಸಿದರು.

ಆಗಿನಿಂದಲೇ ಗಣೇಶನ ಖರೀದಿ ಅವರ ಹವ್ಯಾಸವಾಗಿ ಮಾರ್ಪಟ್ಟಿತು. ಇದಾದ ಬಳಿಕ ಕರ್ನಾಟಕದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ ಅವರು ಮೈಸೂರಿಗೆ ಬಂದು ಅಲ್ಲಿಯೇ ಮನೆ ಕಟ್ಟಿಸಿ ನಿವಾಸಿಯೂ ಆದರು. ಆಗಿನಿಂದ ಗಣೇಶನಿಗೋಸ್ಕರವೇ ಶೋಕೇಸ್‌ ನಿರ್ಮಿಸಿ ಅಲ್ಲಿ ಗಣೇಶ ಮೂರ್ತಿಗಳನ್ನು ಪ್ರದರ್ಶನ ಇರತೊಡಗಿದರು.

ಒಂದು ಬಾರಿ ದೆಹಲಿಯಲ್ಲಿ ತಪಾಸಣೆಗೆಂದು ಕಾಮತರನ್ನು ಕಳುಹಿಸಲಾಗಿತ್ತು. ಅದು ಮೂರು ತಿಂಗಳ ಅವಧಿ. ಅಲ್ಲಿಯೇ ಇದ್ದುದರಿಂದ ಸಮೀಪದ ದೆಹಲಿ ಸಮೀಪದ ಮೊರಾದಾಬಾದ್ ಹಾಗೂ ಆಲಿಘರ್‌ನಲ್ಲಿ ಹಿತ್ತಾಳೆಯಲ್ಲಿ ತಯಾರಿಸಿದ ಗಣೇಶ ಮೂರ್ತಿ ಸಿಗುತ್ತವೆ ಎನ್ನುವ ಮಾಹಿತಿ ದೊರೆತಿತ್ತು. ಅಲ್ಲಿಗೆ ಹಲವು ಬಾರಿ ಹೋಗಿ ಬಂದರು. ಆಗ ಅವರಿಗೆ ಹೆಚ್ಚಿನ ಗಣೇಶ ಮೂರ್ತಿ ಸಿಕ್ಕಿದ್ದವು.

ಒಂದು ಗಣೇಶ ಮೂರ್ತಿ ಚೆನ್ನಾಗಿತ್ತು. ದುಬಾರಿ ಆಗಿದ್ದರಿಂದ ಅಷ್ಟು ಹಣ ಅವರಲ್ಲಿ ಇರಲಿಲ್ಲ. ಇವರು ಅಲ್ಲಿಗೆ ಬಂದು ಹೋಗುತ್ತಿದ್ದದನ್ನು ಗಮನಿಸಿದ ವ್ಯಾಪಾರಿ, ನಿಮಗೆ ಗಣೇಶ ವಿಗ್ರಹವನ್ನು ಪೋಸ್ಟ್ ಮೂಲಕ ಕಳುಹಿಸುತ್ತೇವೆ. ಅಲ್ಲಿಯೇ ಹಣ ಕೊಡಿ ಎಂದು ಹೇಳಿದ್ದರು. ನಿಜಕ್ಕೂ ನನ್ನ ಹವ್ಯಾಸಕ್ಕೆ ಪ್ರೋತ್ಸಾಹ ಸಿಗುತ್ತಿದೆ ಎನ್ನಿಸಿತು ಕಾಮತರಿಗೆ. ಆ ಅವಧಿಯಲ್ಲಿ ಸಂಗ್ರಹಿಸಿದ್ದ ಗಣೇಶಗಳೆಲ್ಲವು ಮನೆಯ ಶೋಕೇಸ್ ಅನ್ನು ಅಲಂಕರಿಸಿದ್ದವು.

ದೆಹಲಿಯ ಜಾಮೀಯಾ ಮಸೀದಿ ಸಮೀಪ ಮುಸ್ಲೀಂ ಸಮುದಾಯದ ವ್ಯಾಪಾರಿಗಳು ಗಣೇಶನ ಮೂರ್ತಿ ಮಾರಾಟ ಮಾಡುತ್ತಾರೆ. ಕೆಲವು ಕಡೆ ಕೆಜಿ ಗಟ್ಟಲೇ ಗಣೇಶನ ಪುಟ್ಟ ವಿಗ್ರಹ ಮಾಡುವುದು ಇದೆ. ಅಲ್ಲಿಯೂ ಮೂರ್ತಿಗಳನ್ನು ಖರೀದಿಸಿದ್ದಾರೆ ಕಾಮತರು.

ಅವರ ಮನೆಯಲ್ಲಿ ನಾನಾ ಭಂಗಿಯ ಗಣೇಶಗಳಿವೆ. ಅದರಲ್ಲಿ ನಟರಾಜ ಅವತಾರದಲ್ಲಿ ಗಣೇಶ, ಮೂಷಿಕ ವಾಹನ, ಬಾಲಕೃಷ್ಣ, ತ್ರಿಮುಖ, ಪಂಚಮುಖಿ ಗಣತಿ, ಗೌರಿಯೊಂದಿಗೆ ಗಣೇಶ, ವೀಣಾವಾದಕ ಗಣೇಶ, ಓಂಕಾರ ಗಣಪತಿ, ಹಾವಿನ ಹೆಡೆ ಮೇಲೆ ನಿಂತ ಭಂಗಿ, ಅಂಬೇಗಾಲು ಗಣೇಶ, ಶಂಕದಲ್ಲಿ ಕುಳಿತ ಗಣೇಶ.ಮೃದಂಗ ವಿದ್ವಾನ್‌ ವಿಘ್ನೇಶ. ಹೀಗೆ ನೋಡುತ್ತಾ ಹೋದರೆ ಅವುಗಳ ಕುರಿತು ಆಸಕ್ತಿ ಮೂಡುತ್ತದೆ.

ಕೆಲವೊಂದು ಒಂದು ಅಡಿಯವು ಇದ್ದರೆ, ಇನ್ನೂ ಹಲವರು ಎರಡು, ಮೂರು ಅಡಿವರೆಗೂ ಇವೆ. ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಹಾಳಾಗದಂತೆ ಮುತುವರ್ಜಿ ವಹಿಸಿಕೊಂಡು ಬಂದಿದ್ದಾರೆ. ನಿವೃತ್ತಿ ನಂತರವೂ ಗಣೇಶನ ಸಂಗ್ರಹದ ಅವರ ಹವ್ಯಾಸ ಮುಂದುವರಿದಿದೆ.

ಇದಕ್ಕಾಗಿಯೇ ಲಕ್ಷಾಂತರ ರೂ ವೆಚ್ಚ ಮಾಡಿರುವ ಜಯರಾಮ ಕಾಮತರು ಅವುಗಳನ್ನು ಮನೆಗೆ ಬಂದವರೂ ವೀಕ್ಷಿಸಿದರೆ ಒಳ್ಳೆಯದು ಎಂದು ಒಂದು ಲಕ್ಷ ವಿನಿಯೋಗಿಸಿ ವಿಶಾಲ ಶೋಕೇಸ್‌ ಅನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ಗಣೇಶನನ್ನು ಅಲ್ಲಿ ನೋಡುವುದೇ ಚೆಂದ.

ಒಂದು ಗಣೇಶನ ಮೂರ್ತಿ ಬೆಲೆ ₹15ಸಾವಿರವಿದ್ದರೆ, ಇನ್ನೂ ಹಲವಕ್ಕೆ ₹5ಸಾವಿರಕ್ಕೂ ಅಧಿಕ. ಇವರ ಸಂಗ್ರಹದಲ್ಲಿ ಈಗ 550ಗಣೇಶ ಮೂರ್ತಿಗಳಿದ್ದು, ಎಲ್ಲವೂ ವಿಭಿನ್ನ ಶೈಲಿಯಲ್ಲಿಯೇ ಇವೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ