
ಭ್ರಷ್ಟಾಚಾರ: ED ದಾಖಲೆ ಉಲ್ಲೇಖಿಸಿ ಡಿಎಂಕೆ ವಿರುದ್ಧ 65 ನಿಮಿಷ ವಿಜಯ್ ವಾಗ್ದಾಳಿ
ಚೆನ್ನೈ: ಡಿಎಂಕೆ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಗಂಭೀರ ಮತ್ತು ಸಂಘಟಿತ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸದನದಲ್ಲಿ 65 ನಿಮಿಷಗಳ ಕಾಲ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ಡಿಎಂಕೆ ಇರುವಲ್ಲಿ ಮಾತ್ರ ಅಕ್ರಮಗಳು ನಡೆಯುತ್ತವೆ ಮತ್ತು ತಪ್ಪುಗಳು ಸಂಭವಿಸುವಲ್ಲಿ ಮಾತ್ರ ಡಿಎಂಕೆ ಇರುತ್ತದೆ. ಭ್ರಷ್ಟಾಚಾರದ ಮೂಲಕ ಪಕ್ಷಕ್ಕಾಗಿ ನಿಧಿ ಸಂಗ್ರಹಿಸಿದೆ’ ಎಂದು ವಿಜಯ್ ಅವರು ಏರು ಧ್ವನಿಯಲ್ಲಿ ಟೀಕಿಸಿದ್ದಾರೆ. ಅಕ್ರಮದ ಕುರಿತು ಜಾರಿ ನಿರ್ದೇಶನಾಲಯ ನಡೆಸಿದ ತನಿಖೆಯ ದಾಖಲೆಗಳನ್ನು ಅವರು ಉಲ್ಲೇಖಿಸಿದ್ದಾರೆ.
ಡಿಎಂಕೆಯನ್ನು ‘ಭ್ರಷ್ಟ’ ಮತ್ತು ‘ನಿಂದನಾತ್ಮಕ ಶಕ್ತಿ’ ಎಂದು ಕರೆದಿರುವ ವಿಜಯ್, ಮಾಜಿ ಸಿಎಂ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಅವರು 2021ರಿಂದ 2026ರವರೆಗೆ ಉದ್ಯಮಿಗಳಿಂದ ಪಕ್ಷಕ್ಕಾಗಿ ದೇಣಿಗೆ ಪಡೆದಿದ್ದಾರೆ. ಅವರು (ಸ್ಟಾಲಿನ್ ಮತ್ತು ಉದಯನಿಧಿ) ಪ್ರತ್ಯಕ್ಷ ಫಲಾನುಭವಿಗಳು ಎಂದು ಗುಡುಗಿದ್ದಾರೆ.
ನಮ್ಮ ಸರ್ಕಾರವು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಧೋರಣೆ ತಳೆಯಲಿದೆ ಎಂದು ಘೋಷಿಸಿದ ವಿಜಯ್, ರಾಜಕೀಯ ಪ್ರವೇಶಿಸಿದ ನಂತರದ ತಮ್ಮ ಸುದೀರ್ಘ 65 ನಿಮಿಷಗಳ ಭಾಷಣದಲ್ಲಿ ಡಿಎಂಕೆ ವಿರುದ್ಧ ಸಿನಿಮೀಯ ಮತ್ತು ಆಕ್ರೋಶಭರಿತರಾಗಿ ಮಾತನಾಡಿದ್ದಾರೆ.
ವಿಜಯ್ ಅವರು ಮಾತನಾಡಿದ 65 ನಿಮಿಷಗಳಲ್ಲಿ 20 ನಿಮಿಷ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕುವ ಕುರಿತು ಲಿಖಿತ ಭಾಷಣಕ್ಕೆ ಬಳಸಿದರೆ, ಉಳಿದ 45 ನಿಮಿಷಗಳನ್ನು ಸಂಪೂರ್ಣವಾಗಿ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಲು ಮೀಸಲಿಟ್ಟಿದ್ದರು.
ಡಿಎಂಕೆಯನ್ನು ಟಿವಿಕೆಯ ಮುಖ್ಯ ರಾಜಕೀಯ ಎದುರಾಳಿ ಎಂದ ವಿಜಯ್, ಕಾನೂನು ಮತ್ತು ಸುವ್ಯವಸ್ಥೆ ಕುರಿತು ಡಿಎಂಕೆ ಸೇರಿದಂತೆ ಇತರೆ ಪಕ್ಷಗಳ ನಾಯಕರು ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ವಿಜಯ್ ಅವರು ಎಐಎಡಿಎಂಕೆಯನ್ನು ಉಲ್ಲೇಖಿಸದೆ, ಭ್ರಷ್ಟಾಚಾರ, ಪರಿವಾರವಾದದಿಂದ ಹಿಡಿದು ಕಾನೂನು ಮತ್ತು ಸುವ್ಯವಸ್ಥೆಯವರೆಗೆ ಪ್ರತಿಯೊಂದು ವಿಚಾರದಲ್ಲೂ ಡಿಎಂಕೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ಗೃಹ ಇಲಾಖೆಯ ಅನುದಾನ ಬೇಡಿಕೆಗಳ ಮೇಲಿನ ವಿಜಯ್ ಉತ್ತರಕ್ಕೆ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಸೇರಿದಂತೆ ಡಿಎಂಕೆ ಸದಸ್ಯರು ಎದ್ದು ನಿಂತು ಪ್ರತಿಭಟಿಸಿದ್ದಾರೆ.
ಕಳೆದ ವಾರ ವಿಜಯ್ ಅವರು ‘ಸದನದಿಂದ ಓಡಿಹೋಗಬಾರದು’ ಎಂದು ಮಾಡಿದ ಸಾರ್ವಜನಿಕ ಮನವಿಯನ್ನು ಡಿಎಂಕೆ ಸದಸ್ಯರು ತುಸು ಗಂಭೀರವಾಗಿಯೇ ಪರಿಗಣಿಸಿದ್ದರು. ಆದ್ದರಿಂದಲೇ ವಿಜಯ್ ಭಾಷಣ ಮಾಡುವಾಗ ಯಾರೂ ಸದನದಿಂದ ಹೊರನಡೆಯಲಿಲ್ಲ. ಆದರೆ, ಸಿಎಂ ಮಾಡಿದ ಸುಳ್ಳು ಆರೋಪಗಳಿಗೆ ಉತ್ತರಿಸಲು ಉದಯನಿಧಿಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದರು.
ವಿಜಯ್ ಭಾಷಣ ಮುಗಿಸಿದ ನಂತರ ಉದಯನಿಧಿಗೆ ಮಾತನಾಡಲು ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರು ನಿರಾಕರಿಸಿದ್ದಾರೆ. ಇದನ್ನು ಖಂಡಿಸಿ ಪ್ರತಿಪಕ್ಷ ಶಾಸಕರು ಸಭಾತ್ಯಾಗ ಮಾಡಿದ್ದಾರೆ.
ರಾಜಕೀಯ ಸಂದೇಶ ರವಾನಿಸಿದ ವಿಜಯ್
ತಮಿಳುನಾಡಿನಲ್ಲಿ ಎಐಎಡಿಎಂಕೆಯನ್ನು ಪಕ್ಕಕ್ಕೆ ಸರಿಸಿ, ಸಂಪೂರ್ಣವಾಗಿ ಡಿಎಂಕೆಯನ್ನು ಎದುರಾಳಿಯನ್ನಾಗಿಸಿಕೊಳ್ಳುವುದು ವಿಜಯ್ ಗುರಿಯಾಗಿತ್ತು. ಭಾಷಣದ ನಡುವೆ ಎಐಎಡಿಎಂಕೆ ನಾಯಕರಾದ ಜೆ. ಜಯಲಲಿತಾ ಮತ್ತು ಎಂ.ಜಿ. ರಾಮಚಂದ್ರನ್ ಅವರನ್ನು ಸ್ಮರಿಸಿದರು. ಆದರೆ, ಆದರೆ, ಆ ಪಕ್ಷದ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲ.
ಡಿಎಂಕೆ ಆರು ದಶಕಗಳಿಂದ ರಾಜ್ಯವನ್ನು ಕಾಡುತ್ತಿರುವ ವ್ಯವಸ್ಥಿತ ‘ಪಿಡುಗು’ ಎಂದು ಕಿಡಿಕಾರಿದ ವಿಜಯ್, ಎಂಜಿಆರ್ ಮತ್ತು ಜಯಲಲಿತಾ ಅವರ ತಂತ್ರವನ್ನು ಅನುಸರಿಸಿದ್ದು ಎದ್ದು ಕಾಣುತ್ತಿತ್ತು. ಎಐಎಡಿಎಂಕೆಯ ಪ್ರಭಾವವನ್ನು ಮತ್ತಷ್ಟು ಕುಗ್ಗಿಸಲು ಅವರು ಪ್ರಸಿದ್ಧ ತಮಿಳು ಕವಿ ಕಣ್ಣದಾಸನ್ ಅವರನ್ನು ಉಲ್ಲೇಖಿಸಿ ಡಿಎಂಕೆಗೆ ಟಾಂಗ್ ನೀಡಿದ್ದಾರೆ.
ವಿಜಯ್ ಅವರು ಸರ್ಕಾರಿಯಾ ಕಮಿಷನ್ ಅನ್ನು ಉಲ್ಲೇಖಿಸಿ ಮತ್ತು ಉದ್ಯೋಗಕ್ಕಾಗಿ ಲಂಚ ಹಾಗೂ ‘ಟಾಸ್ಮಾಕ್’ನಲ್ಲಿ ‘ಪಕ್ಷದ ನಿಧಿ’ಯನ್ನು (ಇದು ಕಮಿಷನ್‌ಗೆ ಬಳಸುವ ಸಂಕೇತ ಪದ) ಮೂಲಕ 1970ರ ದಶಕದಿಂದಲೂ ಡಿಎಂಕೆ ಭ್ರಷ್ಟವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಿಸಾ (MISA) ಅಡಿಯಲ್ಲಿ ಸ್ಟಾಲಿನ್ ಅವರ ಶಿಕ್ಷೆಯನ್ನು ಗೇಲಿ ಮಾಡಿದ ವಿಜಯ್, ಮಹಿಳೆಯರ ಮೇಲೆ ದಾಳಿ ಮಾಡುವುದು ಮತ್ತು ನಿಂದಿಸುವುದನ್ನು ನಿಲ್ಲಿಸುವಂತೆ ಡಿಎಂಕೆಗೆ ಸವಾಲು ಹಾಕಿದ್ದಾರೆ.
ಟಿವಿಕೆಯ ಮುಖ್ಯ ವೋಟ್ ಬ್ಯಾಂಕ್ ಆಗಿರುವ ತಮಿಳುನಾಡಿನ ಯುವ ಮತದಾರರಿಗೆ ಡಿಎಂಕೆ ವಿರೋಧಿ ಇತಿಹಾಸವನ್ನು ಪರಿಚಯಿಸುವ ಉದ್ದೇಶದಿಂದ ವಿಜಯ್ ಅವರು‘ ಸರ್ಕಾರಿಯಾ ಕಮಿಷನ್’ ಅನ್ನು ಉಲ್ಲೇಖಿಸಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ.
ಉದ್ಯೋಗಕ್ಕಾಗಿ ಲಂಚ ಹಗರಣ ಕುರಿತಾದ ಇಡಿ ದಾಖಲೆಗಳನ್ನು ಪ್ರದರ್ಶಿಸಿದ ವಿಜಯ್, ‘ಪಕ್ಷದ ಗ್ಯಾಂಗ್’ ಅಡಿಯಲ್ಲಿ ಸ್ಟಾಲಿನ್ ಮತ್ತು ಉದಯನಿಧಿ ಪಕ್ಷಕ್ಕಾಗಿ ದೇಣಿಗೆ ಸಂಗ್ರಹಿಸಿದ ಪ್ರತ್ಯಕ್ಷ ಫಲಾನುಭವಿಗಳು ಎಂದು ಆರೋಪಿಸಿದ್ದಾರೆ. ಜತೆಗೆ, ಮಾಜಿ ಸಚಿವ ಸೆಂಥಿಲ್ ಬಾಲಾಜಿ ‘ಕರೂರ್ ಗ್ಯಾಂಗ್’ನ ಅವಿಭಾಜ್ಯ ಅಂಗ ಎಂದು ಕಿಚಾಯಿಸಿದ್ದಾರೆ
‘ಟಾಸ್ಮಾಕ್’ ಪ್ರಕರಣದಲ್ಲಿ ಇಡಿ ಹೆಸರಿಸಿರುವ ಉದಯನಿಧಿ ಅವರ ಆಪ್ತ ರತೀಶ್, ಡಿಎಂಕೆ ಸರ್ಕಾರದ ಅವಧಿಯಲ್ಲಿ ವರ್ಗಾವಣೆಗಳನ್ನು ನಿರ್ಧರಿಸುತ್ತಿದ್ದರು ಎಂದು ದೂರಿದ್ದಾರೆ. ಈ ಕುರಿತು ವಿಧಾನಸಭೆಯ ಹೊರಗೆ ತಿರುಗೇಟು ನೀಡಿದ ಉದಯನಿಧಿ, ಮುಖ್ಯಮಂತ್ರಿಯ (ವಿಜಯ್) ಆಪ್ತರಾಗಿರುವ ವಿಷ್ಣು ರೆಡ್ಡಿ ಯಾರೆಂಬುದನ್ನು ತಾನೂ ಹೇಳಬಲ್ಲೆ ಎಂದಿದ್ದಾರೆ.
ಡಿಎಂಕೆ ಶಾಸಕನ ‘ಕೈ’ ಹಿಡಿದ ವಿಜಯ್
ತಮಿಳುನಾಡು ವಿಧಾನಸಭೆ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆ ಶಾಸಕರೊಬ್ಬರು ನಿಯಂತ್ರಣ ತಪ್ಪಿ ಸದನದ ಬಾವಿಗೆ ಬೀಳುತ್ತಿದ್ದರು. ಆದರೆ, ಪಕ್ಕದಲ್ಲೇ ಇದ್ದ ವಿಜಯ್ ಅವರು ಎದ್ದು ನಿಂತು ಶಾಸಕರ ಕೈಯನ್ನು ಹಿಡಿದು ನೆರೆವಾದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ಖುದ್ದು ವಿಜಯ್ ಮತ್ತು ಟಿವಿಕೆ ಸಚಿವರು ‘ಬ್ಲಾಕ್‌ಬಸ್ಟರ್’ ಭಾಷಣದ ಮುನ್ಸೂಚನೆ ನೀಡಿದ್ದರಿಂದ ಸಿಎಂ ಭಾಷಣದ ಬಗ್ಗೆ ಅಪಾರ ನಿರೀಕ್ಷೆಯಿತ್ತು. ತಮಿಳಿನ ಪ್ರಮುಖ ಯೂಟ್ಯೂಬ್ ಚಾನೆಲ್‌ಗಳಲ್ಲಿ 15ರಿಂದ 20 ಲಕ್ಷ ಜನರು ನೇರ ಪ್ರಸಾರ ವೀಕ್ಷಿಸಿದ್ದಾರೆ.