ಮಳೆ ಇಲ್ಲದೆ ಒಣಗುತ್ತಿರುವ ರಾಗಿ, ಜೋಳದ ಪೈರು; ರೈತರಿಗೆ ಸಂಕಷ್ಟ

ಮಳೆ ಇಲ್ಲದೆ ಒಣಗುತ್ತಿರುವ ರಾಗಿ, ಜೋಳದ ಪೈರು; ರೈತರಿಗೆ ಸಂಕಷ್ಟ

ಮಳೆ ಇಲ್ಲದೆ ಒಣಗುತ್ತಿರುವ ರಾಗಿ, ಜೋಳದ ಪೈರು; ರೈತರಿಗೆ ಸಂಕಷ್ಟ

ವೇಮಗಲ್: ಜಿಲ್ಲೆಯ ಪ್ರಮುಖ ಕೃಷಿ ವಲಯಗಳಾದ ವೇಮಗಲ್ ಮತ್ತು ನರಸಾಪುರ ಹೋಬಳಿಗಳಲ್ಲಿ ಕಳೆದ ಮೂರ್ನಾಲ್ಕು ವಾರಗಳಿಂದ ಮಳೆ ಕೊರತೆಯಾಗಿದ್ದು, ಹೊಲಗಳಲ್ಲಿ ಸಮೃದ್ಧವಾಗಿ ನಳನಳಿಸಬೇಕಿದ್ದ ರಾಗಿ, ಜೋಳದ ಪೈರು ಬಿಸಿಲಿನ ತಾಪಕ್ಕೆ ಒಣಗುತ್ತಿವೆ.

ಆರಂಭದಲ್ಲಿ ಸುರಿದ ಸಾಧಾರಣ ಮಳೆ ನಂಬಿ ಭೂಮಿ ಹದಮಾಡಿ ಬಿತ್ತನೆ ಕೈಗೊಂಡಿದ್ದ ಅನ್ನದಾತರು ಈಗ ಮುಗಿಲಿನತ್ತ ಮುಖ ಮಾಡುವಂತಾಗಿದೆ.

ವೇಮಗಲ್ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆಯಂತೆ 3,600 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಬೇಕಿತ್ತು. ಆದರೆ, ಮುಂಗಾರಿನ ಅನಿಶ್ಚಿತತೆ ನಡುವೆಯೂ ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ 2,432 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡು ಸುಮಾರು ಶೇ 75ರಷ್ಟು ಪ್ರಗತಿ ದಾಖಲಾಗಿತ್ತು. ನರಸಾಪುರ ಹೋಬಳಿಯಲ್ಲಿ ವಾಡಿಕೆ ಗುರಿಯಾಗಿದ್ದ 851 ಹೆಕ್ಟೇರ್ ಪೈಕಿ 592 ಹೆಕ್ಟೇರ್ ವಿಸ್ತೀರ್ಣದಲ್ಲಿ ರೈತರು ರಾಗಿ ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಸಮಯದಲ್ಲಿ ಆಶಾಭಾವ ಮೂಡಿಸಿದ್ದ ಮುಂಗಾರು, ಆನಂತರ ಸಂಪೂರ್ಣವಾಗಿ ಕೈಕೊಟ್ಟಿರುವುದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎರಡು ಹೋಬಳಿಗಳ ತಿಪ್ಪೇನಹಳ್ಳಿ, ಕ್ಯಾಲನೂರು, ಕಾಡಹಳ್ಳಿ, ಸೀತಿ, ರಾಮಪುರ, ನಾಚಹಳ್ಳಿ, ವೀರೇನಹಳ್ಳಿ, ಚೌಡದೇನಹಳ್ಳಿ, ಬೆಟ್ಟಹೊಸಪುರ, ಶೆಟ್ಟಿಹಳ್ಳಿ, ಬೈರಂಡಳ್ಳಿ, ಬೆಳ್ಳೂರು, ಕೆಂದಟ್ಟಿ, ಪುರಹಳ್ಳಿ, ಚೌಡದೇನಹಳ್ಳಿ, ಕಲ್ವಮಂಜಲಿ, ಬೆಳಮಾರನಹಳ್ಳಿ, ರಾಜಕಲ್ಲಹಳ್ಳಿ, ಸೋಲೂರು ಗ್ರಾಮಗಳಲ್ಲಿ ಬಿತ್ತಿರುವ ರಾಗಿ ಬೆಳೆಯ ಪೈರು ಬಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ 30 ರಿಂದ 36 ಡಿಗ್ರಿವರೆಗೆ ಉಷ್ಣಾಂಶ ಏರಿಕೆ ಆಗುತ್ತಿದ್ದು, ಭೂಮಿಯಲ್ಲಿನ ತೇವಾಂಶ ಆವಿಯಾಗಿ, ಭೂಮಿ ಬಿರುಕು ಬಿಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಮಣ್ಣಿನಲ್ಲಿ ಕನಿಷ್ಠ ತೇವಾಂಶ ಇಲ್ಲದ ಕಾರಣ ಹಸಿರಿನಿಂದ ಕಂಗೊಳಿಸಬೇಕಿದ್ದ ಎಳೆಯ ಪೈರುಗಳು ದಿನದ ಬಿಸಿಲಿಗೆ ಬಾಡಿ ನಿಸ್ತೇಜವಾಗುತ್ತಿವೆ. ಹಲವೆಡೆ ರಾಗಿ ಸಸಿಗಳು ಕರಕಲಾಗಿ ಜೀವ ಕಳೆದುಕೊಳ್ಳುತ್ತಿವೆ.

ಭೂಮಿ ಉಳುಮೆ, ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕಳೆ ಕೀಳುವಿಕೆ ಸೇರಿದಂತೆ ಒಂದು ಎಕರೆ ರಾಗಿ ಬಿತ್ತನೆಗೆ ಈಗಾಗಲೇ ₹20–₹25 ಸಾವಿರದವರೆಗೆ ಖರ್ಚು ಮಾಡಿದ್ದೇವೆ. ಆದರೆ, ಕಳೆದ ಹಲವು ವಾರಗಳಿಂದ ಮಳೆ ಇಲ್ಲದೆ ಎಳೆಯ ಪೈರು ಬಿರುಬಿಸಿಲಿಗೆ ಕರಕಲಾಗಿದ್ದು, ಹಾಕಿದ ಬಂಡವಾಳ ಮಣ್ಣು ಪಾಲಾಗಿದೆ. ಸರ್ಕಾರ ನಿಯಮಾವಳಿಗಳ ನೆಪವೊಡ್ಡಿ ಸಮೀಕ್ಷೆ ಹಾಗೂ ವರದಿ ಸಲ್ಲಿಕೆಗೆ ತಿಂಗಳುಗಟ್ಟಲೆ ಕಾಯಿಸಿದರೆ ಮತ್ತಷ್ಟು ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ ಎಂದು ರೈತರು ಅಲವತ್ತುಕೊಂಡರು.

ರೈತರಿಗೆ ನೆರವು, ಪರಿಹಾರ ನೀಡಲಿ

ಕಳೆದ ವರ್ಷವೂ ಮಳೆಯ ಕೊರತೆ ಹಾಗೂ ಅಂತರ್ಜಲ ಕುಸಿತದಿಂದ ಕಂಗಾಲಾಗಿದ್ದ ಈ ಭಾಗದ ರೈತರು, ಈ ಬಾರಿ ಉತ್ತಮ ಇಳುವರಿ ಪಡೆಯಬಹುದೆಂಬ ಆಸೆಯಿಂದ ಸಾಲಸೋಲ ಮಾಡಿ ಬೀಜ, ಗೊಬ್ಬರ, ಟ್ರ್ಯಾಕ್ಟರ್ ಬಾಡಿಗೆಗೆ ಸಾವಿರಾರು ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ, ಪ್ರಕೃತಿಯ ಮುನಿಸು ಹೀಗೆಯೇ ಮುಂದುವರಿದರೆ ಹಾಕಿದ ಬಂಡವಾಳವೂ ವಾಪಸ್ ಬರುವುದು ಕಷ್ಟವಾಗಲಿದ್ದು, ಜಾನುವಾರುಗಳಿಗೆ ಮೇವಿನ ಅಭಾವವೂ ಎದುರಾಗುವ ಭೀತಿ ಆವರಿಸಿದೆ. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಒಣಗುತ್ತಿರುವ ರಾಗಿ ಪೈರಿನ ಸ್ಥಿತಿಗತಿ ಹಾಗೂ ಮಳೆ ಕೊರತೆಯ ವಾಸ್ತವ ಸಮೀಕ್ಷೆ ನಡೆಸಿ, ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ಪರಿಹಾರ ಹಾಗೂ ನೆರವು ಒದಗಿಸಲು ಕ್ರಮ ಕೈಗೊಳ್ಳಬೇಕೆಂಬುದು ಈ ಭಾಗದ ಕೃಷಿಕರ ಒತ್ತಾಯ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ