
ದೆಹಲಿಗೆ ಬರಲು ಆಹ್ವಾನ: ಡಿ.ಕೆ. ಶಿವಕುಮಾರ್ ಹೇಳಿಕೆಗೆ ವಿಜಯೇಂದ್ರ ತಿರುಗೇಟು
ಕಾರಟಗಿ (ಕೊಪ್ಪಳ ಜಿಲ್ಲೆ): ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗುವುದಾಗಿ ಹೇಳಿರುವ ಮುಖ್ಯಮಂತ್ರಿ ಡಿ.ಕೆ. ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಬಳ್ಳಾರಿ ಚಲೊ ಪಾದಯಾತ್ರೆಯ 5ನೇ ದಿನವಾದ ಶನಿವಾರ ಕಾರಟಗಿ ಪಟ್ಟಣದಲ್ಲಿ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಇದಕ್ಕೂ ಮೊದಲು ಶಿಕ್ಷಕರ ದಿನದ ಅಂಗವಾಗಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿದರು.
ರಾಜ್ಯ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಬರುವ ಸಹಕಾರಿ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮೊದಲು ಮನ್ನಾ ಮಾಡಬೇಕು. ಮುಖ್ಯಮಂತ್ರಿ ಅವಕಾಶದಲ್ಲಿ ನಕ್ಷತ್ರ ತೋರಿಸುವುದನ್ನು ಬಿಟ್ಟು ತಮ್ಮ ಜವಾಬ್ದಾರಿಗೆ ತಕ್ಕಂತೆ ನಡೆದುಕೊಳ್ಳಬೇಕು. ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದನ್ನು ಬಿಡಬೇಕು, ಕೇಂದ್ರ ಸರ್ಕಾರ ಎನು ಮಾಡಬೇಕೊ ಅದನ್ನು ಮಾಡಿಯೇ ತಿರುತ್ತದೆ ಎಂದರು.
ಕೇಂದ್ರವನ್ನು ಕೇಳುವ ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ ಕೆಲಸ ಮಾಡಬೇಕು, ನಮ್ಮಲ್ಲಿ 139 ಶಾಸಕರು ಇದ್ದಾರೆ, ನಮ್ಮದು ಬಲಿಷ್ಠ ಸರ್ಕಾರ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಇಂಥ ಬಲಿಷ್ಠ ಸರ್ಕಾರ ರಾಜ್ಯದ ಜನರಿಗೆ ಆಸರೆ ಆಗದಿದ್ದರೆ ಇದ್ದರೆಷ್ಟು, ಬಿದ್ದರೆಷ್ಟು ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಮೂರು ತಿಂಗಳಾದರೂ ಟೇಕಾಫ್ ಆಗಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಗಾಢನಿದ್ದೆಯಲ್ಲಿರುವ ರಾಜ್ಯ ಸರ್ಕಾರ ಎದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ದೇವಸ್ಥಾನಕ್ಕೆ ಭೇಟಿ: ಕಾರಟಗಿಯ ಶರಣ ಬಸವೇಶ್ವರ ದೇವಸ್ಥಾನಕ್ಕೆ ವಿಜಯೇಂದ್ರ ಹಾಗೂ ಬಿಜೆಪಿ ನಾಯಕರು ಭೇಟಿ ನೀಡಿದರು. ನಂತರ ಕಾರಟಗಿಯ ಕನಕದಾಸ ವೃತ್ತದಿಂದ 5ನೇ ದಿನದ ಪಾದಯಾತ್ರೆ ಆರಂಭಿಸಿದರು.
ಕಾರಟಗಿಯಿಂದ ಶನಿವಾರ ಆರಂಭವಾದ ಪಾದಯಾತ್ರೆ ಗಂಗಾವತಿ ಸಮೀಪದ ಜಂಗಮರ ಕಲ್ಗುಡಿ ತನಕ ಕ್ರಮಿಸಲಿದೆ.
ಮಾಜಿಸಚಿವ ಬಿ. ಶ್ರೀರಾಮುಲು, ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬಿಜೆಪಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ನವೀನ ಗುಳಗಣ್ಣನವರ ಇದ್ದರು.