ವಿಶೇಷ ಅಧಿವೇಶನ ಇಂದಿನಿಂದ: ಕಸ್ತೂರಿರಂಗನ್ ವರದಿ, ರೈತರ ಸಮಸ್ಯೆ ಕುರಿತು ಚರ್ಚೆ

ವಿಶೇಷ ಅಧಿವೇಶನ ಇಂದಿನಿಂದ: ಕಸ್ತೂರಿರಂಗನ್ ವರದಿ, ರೈತರ ಸಮಸ್ಯೆ ಕುರಿತು ಚರ್ಚೆ

ವಿಶೇಷ ಅಧಿವೇಶನ ಇಂದಿನಿಂದ: ಕಸ್ತೂರಿರಂಗನ್ ವರದಿ, ರೈತರ ಸಮಸ್ಯೆ ಕುರಿತು ಚರ್ಚೆ

ಬೆಂಗಳೂರು: ಪಶ್ಚಿಮಘಟ್ಟದ ಸಂರಕ್ಷಣೆ ಕುರಿತು ಕಸ್ತೂರಿರಂಗನ್ ನೇತೃತ್ವದ ಸಮಿತಿ ನೀಡಿರುವ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ಹಾಗೂ ರಾಜ್ಯದಲ್ಲಿನ ತೀವ್ರ ಸ್ವರೂಪದ ಬರಗಾಲ, ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೋಮವಾರದಿಂದ (ಸೆ. 21) ಮೂರು ದಿನ‌ ರಾಜ್ಯ ವಿಧಾನ ಮಂಡಲದ ವಿಶೇಷ ಅಧಿವೇಶನ ನಡೆಯಲಿದೆ.

ಸೆ. 23ರವರೆಗೆ ನಡೆಯುವ ಅಧಿವೇಶನದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಈ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ. ಪಶ್ಚಿಮಘಟ್ಟದ ಕುರಿತ ಅಧಿಸೂಚನೆಯಿಂದ ಆತಂಕಗೊಂಡಿರುವ ಜನರ ಭಾವನೆ ಆಧರಿಸಿ, ಅದರ ವಿರುದ್ಧ ಉಭಯ ಸದನಗಳಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಕಸ್ತೂರಿರಂಗನ್ ವರದಿ ಆಧರಿಸಿ ರಾಜ್ಯದ ಪಶ್ಚಿಮಘಟ್ಟ ಪ್ರದೇಶದ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ 1,449 ಗ್ರಾಮಗಳ ಜನ ತಮ್ಮ ಬದುಕು ಅತಂತ್ರವಾಗುವ ಭೀತಿಯಲ್ಲಿದ್ದಾರೆ. ಈ ವರದಿಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿವೆ.

ವಿಶೇಷ ಅಧಿವೇಶನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೂಡ ಅಧಿಸೂಚನೆ ಯಿಂದ ಆತಂಕದಲ್ಲಿರುವ ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಅಭಿಪ್ರಾಯ ಆಲಿಸಿದ್ದಾರೆ. ‘ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಜನಾಭಿಪ್ರಾಯದ ಪರ ನಮ್ಮ ಸರ್ಕಾರ ನಿಲ್ಲಲಿದೆ. ಅಧಿಸೂಚನೆ ಜಾರಿ ವಿರುದ್ಧ ನಿರ್ಣಯ ಕೈಗೊಂಡು ಸರ್ವ ಪಕ್ಷ ನಿಯೋಗದೊಂದಿಗೆ ದೆಹಲಿ ತೆರಳಿ ಕೇಂದ್ರ ಮೇಲೆ ಒತ್ತಡ ಹಾಕಲಾಗುವುದು’ ಎಂದು ಅವರು ಭರವಸೆ ನೀಡಿದ್ದಾರೆ.

ಇನ್ನು, ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಎದುರಾಗಿರುವ ಭೀಕರ ಬರ ಪರಿಸ್ಥಿತಿ ನಿಭಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆಯಲಿದೆ. ಈಗಾಗಲೇ 124 ತಾಲ್ಲೂಕುಗಳನ್ನು ಬರ ಪೀಡಿತವೆಂದು ಘೋಷಿಸಲಾಗಿದೆ. ಇದರಿಂದ ಈವರೆಗೆ ₹ 18 ಸಾವಿರ ಕೋಟಿಗೂ ಹೆಚ್ಚು ಬೆಳೆ ನಷ್ಟ ಸಂಭವಿಸಿದೆ ಎಂದೂ ಅಂದಾಜಿಸಲಾಗಿದೆ. ಬರ ಪರಿಶೀಲನೆ ಇನ್ನೂ ಮುಂದುವರೆದಿದ್ದು, ಇನ್ನಷ್ಟು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಕಲಾಪದ ನಡುವೆಯೇ ಸರ್ಕಾರ ಘೋಷಿಸುವ ಸಾಧ್ಯತೆ ಇದೆ. ಅಲ್ಲದೆ, ಬರದಿಂದ ಉಂಟಾಗಿರುವ ಒಟ್ಟು ನಷ್ಟ, ರೈತರು ಎದುರಿಸುತ್ತಿರುವ ಸಂಕಷ್ಟ, ಜನ, ಜಾನುವಾರುಗಳಿಗೆ ಎದುರಾಗಿರುವ ಕುಡಿಯುವ ನೀರು, ಮೇವಿನ ಸಮಸ್ಯೆಗಳ ಬಗ್ಗೆಯೂ ಸದಸ್ಯರು ಚರ್ಚೆ ನಡೆಸುವ ನಿರೀಕ್ಷೆಯಿದೆ. ಎನ್‌ಡಿಆರ್‌ಎಫ್‌ ಮಾನದಂಡಗಳ ಆಧಾರದಲ್ಲಿ ರಾಜ್ಯಕ್ಕೆ ಎಷ್ಟು ಪರಿಹಾರ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಹಾಗೂ ದೆಹಲಿಗೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಬರ ಪರಿಹಾರಕ್ಕೆ ಬೇಡಿಕೆ ಸಲ್ಲಿಸುವ ಬಗ್ಗೆಯೂ ಸದನದಲ್ಲಿ ಸರ್ಕಾರ ನಿರ್ಧರಿಸುವ ಸಾಧ್ಯತೆಗಳಿವೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಪಟ್ಟು ಹಿಡಿದ ಕಾರಣ ಇದೇ ಜುಲೈ–ಆಗಸ್ಟ್‌ನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಯಾವುದೇ ವಿಚಾರಗಳೂ ಚರ್ಚೆ ಆಗಿರಲಿಲ್ಲ. ಈ ಕಾರಣಕ್ಕೆ ವಿಶೇಷ ಅಧಿವೇಶನದಲ್ಲಿ ಬರಗಾಲ ಹಾಗೂ ಪಶ್ಚಿಮಘಟ್ಟಗಳ ವಿಚಾರದಲ್ಲಿ ಮಾತ್ರ ಚರ್ಚೆ ನಡೆಯಲಿದೆ. ಕಲಾಪ ಪಟ್ಟಿಯಲ್ಲಿ ಬೇರೆ ಯಾವುದೇ ವಿಚಾರ ಕೈಗೆತ್ತಿಕೊಳ್ಳುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ಬರಗಾಲ ತೀವ್ರಗೊಂಡಿರುವ ಕಾರಣ ಇದರಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್‌ ಸಮಸ್ಯೆ, ಬರ ಘೋಷಣೆಯಲ್ಲಿ ತಾರತಮ್ಯ, ಗ್ಯಾರಂಟಿಗಳಿಗೆ ಕತ್ತರಿ, ಪಿಂಚಣಿ ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು‌ ವಿರೋಧ ಪಕ್ಷಗಳು ಸಿದ್ಧತೆ ನಡೆಸಿದೆ. ಆಡಳಿತಾರೂಢ ಕಾಂಗ್ರೆಸ್‌ನ ಸದಸ್ಯರು, ಕೇಂದ್ರದಿಂದ ಬರ ಪರಿಹಾರಕ್ಕೆ ತ್ವರಿತ ಸ್ಪಂದನೆ ಸಿಗದಿರುವ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ.

27 ರೊಳಗೆ ಕೇಂದ್ರಕ್ಕೆ ಮಾಹಿತಿ– ಸಿ.ಎಂ

ಸಕಲೇಶಪುರ (ಹಾಸನ): ‘ಕಸ್ತೂರಿರಂಗನ್ ವರದಿ ಕುರಿತು ರಾಜ್ಯದ ಅಭಿಪ್ರಾಯವನ್ನುಇದೇ 27ರೊಳಗೆ ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಿದ್ದು, ಜನರು, ರೈತರು ಹಾಗೂ ಅರಣ್ಯ ಪ್ರದೇಶದ ಸುತ್ತ ವಾಸಿಸುವವರ ಅಭಿಪ್ರಾಯ ಪಡೆದು, ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಇಲ್ಲಿಗೆ ಭಾನುವಾರ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗಲೂ ಕಸ್ತೂರಿರಂಗನ್ ವರದಿ ತಿರಸ್ಕರಿಸಿ, ಕೇಂದ್ರಕ್ಕೆ ರಾಜ್ಯದ ನಿಲುವನ್ನು ತಿಳಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಅದನ್ನು ಒಪ್ಪದೇ ಮತ್ತೆ ರಾಜ್ಯಕ್ಕೆ ಕಳುಹಿಸಿದ್ದು, ಇದೀಗ ರಾಜ್ಯದ ಅಭಿಪ್ರಾಯ ತಿಳಿಸುವಂತೆ ಸೂಚಿಸಿದೆ’ ಎಂದರು.

ಜನರ ಅಭಿಪ್ರಾಯಕ್ಕೆ ಆದ್ಯತೆ: ‘ಕಸ್ತೂರಿ ರಂಗನ್ ವರದಿಯ ಜೊತೆಗೆ ಕಾಡಾನೆಗಳ ಹಾವಳಿ, ರೈತರ ಸಮಸ್ಯೆಗಳು ಹಾಗೂ ಅರಣ್ಯ ಪ್ರದೇಶದ ಸುತ್ತ ವಾಸಿಸುವ ಜನರ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗುವುದು’ ಎಂದು ಹೇಳಿದರು.

ನವದೆಹಲಿಗೆ ಸರ್ವಪಕ್ಷ ನಿಯೋಗ: ‘ಕಸ್ತೂರಿರಂಗನ್ ವರದಿ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡಿ, ತೀರ್ಮಾನ ಮಾಡಿದ ಬಳಿಕ ಶಾಸಕರು, ಸಂಸದರನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಹಾಗೂ ಕೇಂದ್ರ ಸಚಿವರ ಬಳಿಗೆ ಕರೆದೊಯ್ದು ಜನರ ಅಭಿಪ್ರಾಯವನ್ನು ಮುಟ್ಟಿಸುತ್ತೇವೆ’ ಎಂದು ತಿಳಿಸಿದರು.

ವರದಿಯಿಂದ ಜನರ ಬದುಕಿನ ಮೇಲೆ ಬೀರುವ ಪರಿಣಾಮ, ರೈತರ ಸಮಸ್ಯೆಗಳು ಹಾಗೂ ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಜನರ ಆತಂಕಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದರು.

ಸಕಲೇಶಪುರ: ‘ಕಸ್ತೂರಿ ರಂಗನ್‌ ವರದಿ ರೈತರ ಪಾಲಿನ ಮರಣ ಶಾಸನ. ಅದನ್ನು ಅನುಷ್ಠಾನ ಮಾಡಬಾರದು. ಅಧಿವೇಶನದಲ್ಲಿ ಈ ವರದಿಯನ್ನು ತಿರಸ್ಕರಿಸಿ ನಿರ್ಣಯ ಹೊರಡಿಸಬೇಕು’ ಎಂದು ವಿವಿಧ ಸಂಘಟನೆಗಳ ಪ್ರಮುಖರು ಒತ್ತಾಯಿಸಿದರು. ಉಚ್ಚಂಗಿ ಕೃಷಿಕ ಎಚ್ ಉದಯ್ ದೇವಾಲದಕೆರೆಯ ಡಿ.ಎಸ್. ಲೋಕೇಶ್ ಬ್ಯಾಕರವಳ್ಳಿಯ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೇಘರಾಜು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿ ‘ಇದೊಂದು ಅವೈಜ್ಞಾನಿಕ ವರದಿ. ಈ ಭಾಗದಲ್ಲಿ ಪ್ರವಾಸೋದ್ಯಮ ಪ್ರಗತಿಗೆ ಈ ವರದಿಯಿಂದ ಪೆಟ್ಟು ಬೀಳಲಿದೆ. ಸಕಲೇಶಪುರ ತಾಲ್ಲೂಕಿನ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಹಳ್ಳಿಗಳಿಗೆ ಈ ವರದಿ ಒಳಪಡುತ್ತಿದೆ. ನಮ್ಮ ಪ್ರತಿ ಗ್ರಾಮದ ಪ್ರತಿ ಮನೆ ಹಾಗೂ ಜಮೀನು ಸಮೀಕ್ಷೆ ಮಾಡಬೇಕು’ ಎಂದು ಒತ್ತಾಯಿಸಿದರು. ಕರ್ನಾಟಕದ ಸುಮಾರು 20 ಸಾವಿರ ಚದರ ಕಿ.ಮೀ ಪ್ರದೇಶ ಇದರ ವ್ಯಾಪ್ತಿಗೆ ಸೇರಿದೆ. ಕಸ್ತೂರಿ ರಂಗನ್ ಹಾಗೂ ಅವರ ಸಮಿತಿಯ 10 ಜನ ಸದಸ್ಯರು ಈ ಭಾಗದ ಜನರನ್ನು ಭೇಟಿ ಮಾಡಿಲ್ಲ. ಜನರ ಜೀವನ ನೋಡಿಲ್ಲ. ಉಪಗ್ರಹ ಸಮೀಕ್ಷೆ ಮಾಡಿದ್ದಾರೆ ಎಂದು ದೂರಿದರು.

ರಾಜಕಾರಣದಲ್ಲಿ ಟೀಕೆ ಸಹಜ

ಕರಾವಳಿಯಲ್ಲಿ ಸಂಪುಟ ಸಭೆಯ ಕುರಿತು ‘ಟೂರಿಂಗ್ ಟಾಕೀಸ್’ ಎಂಬ ಎಚ್.ಡಿ. ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದ ಅವರು ರಾಜಕಾರಣದಲ್ಲಿ ಟೀಕೆಗಳು ಸಹಜ. ಅದನ್ನು ನಾನು ಸ್ಫೂರ್ತಿಯಿಂದ ಸ್ವೀಕರಿಸುತ್ತೇನೆ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ‘ಟೂರಿಂಗ್ ಟಾಕೀಸ್ ನಾನು ನಡೆಸಿದ್ದೀನಿ ಅಂತ ಅವರು ಹೇಳಲಿ. ತಪ್ಪೇನಿದೆ? ಅವರಲ್ಲಿ ಅನುಭವ ಇದೆ. ಅವರು ಹೇಳುವುದರಲ್ಲಿ ಒಳ್ಳೆಯ ಸಲಹೆಗಳಿದ್ದರೆ ಅದನ್ನೂ ಸ್ವೀಕರಿಸೋಣ’ ಎಂದರು. ‘ನಾನು ಮುಖ್ಯಮಂತ್ರಿಯಾಗಿ ಇನ್ನೂ ಸುಮಾರು ನೂರು ದಿನಗಳಷ್ಟೇ ಆಗಿದೆ. ನಮ್ಮ ಕುಟುಂಬದ ಹಿನ್ನೆಲೆಯೂ ಸಾಮಾನ್ಯವಾಗಿದ್ದು ಹಿರಿಯ ನಾಯಕರ ಟೀಕೆಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ’ ಎಂದರು.

ಬರ ಪಟ್ಟಿಗೆ ಸೇರಿಸದಿದ್ದರೆ ರಾಜೀನಾಮೆ: ಎಚ್‌.ಕೆ. ಪಾಟೀಲ

‘ಗದಗ ತಾಲ್ಲೂಕನ್ನು ಅಕ್ಟೋಬರ್‌ 10ರ ಒಳಗೆ ಬರ ಪೀಡಿತವೆಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರೊಂದಿಗೆ ಹೋರಾಟ ಮಾಡುತ್ತೇನೆ’ ಎಂದು ಗದಗ ಶಾಸಕ ಎಚ್‌.ಕೆ. ಪಾಟೀಲ ಹೇಳಿದರು. ತಾಲ್ಲೂಕಿನ ಮುಳಗುಂದದಲ್ಲಿ ರೈತರು ಭಾನುವಾರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಚೆಗೆ ಜಿಲ್ಲೆಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದ್ದಾರೆ. ಶೇ 49 ರಷ್ಟು ಮಳೆ ಕೊರತೆ ಇದ್ದರೂ ಏಕೆ ಬರ ಘೋಷಣೆ ಮಾಡಿಲ್ಲ? ಇದಕ್ಕೆ ಅಡ್ಡಿ ಮಾಡಿದವರು ಯಾರು? ಈ ಅನ್ಯಾಯವನ್ನು ಸಹಿಸಲಾಗದು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಉತ್ತರ ಕರ್ನಾಟಕ ಭಾಗದ ಎಲ್ಲ ತಾಲ್ಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸಬೇಕು. ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ಕೂಡಲೇ ರೈತರ ನೆರವಿಗೆ ಧಾವಿಸಬೇಕು’ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ