ಕೇಂದ್ರಸ್ಥಾನ ಬಿಡುವ ಸಿಬ್ಬಂದಿ ಅಮಾನತು: ಶಾಸಕ ಕೊತ್ತೂರು ಮಂಜನಾಥ್ ಎಚ್ಚರಿಕೆ

ಕೇಂದ್ರಸ್ಥಾನ ಬಿಡುವ ಸಿಬ್ಬಂದಿ ಅಮಾನತು: ಶಾಸಕ ಕೊತ್ತೂರು ಮಂಜನಾಥ್ ಎಚ್ಚರಿಕೆ

ಕೇಂದ್ರಸ್ಥಾನ ಬಿಡುವ ಸಿಬ್ಬಂದಿ ಅಮಾನತು: ಶಾಸಕ ಕೊತ್ತೂರು ಮಂಜನಾಥ್ ಎಚ್ಚರಿಕೆ

ವೇಮಗಲ್: ಇಲ್ಲಿನ ರಾಮಶೆಟ್ಟಿ ಬಯಲು ರಂಗಮಂದಿರದಲ್ಲಿ ಪ್ರಜಾಸೇವೆ ಆಂದೋಲನವನ್ನು ಶನಿವಾರ ಆಯೋಜಿಸಲಾಗಿತ್ತು.

ಶಾಸಕ ಕೊತ್ತೂರು ಮಂಜನಾಥ್ ಮಾತನಾಡಿ, ‘ಕಂದಾಯ ಇನ್‌ಸ್ಪೆಕ್ಟರ್‌ಗಳು, ಗ್ರಾಮ ಆಡಳಿತಾಧಿಕಾರಿಗಳು, ಪಿಡಿಒಗಳು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿ ಬಿಟ್ಟು ನಗರದಲ್ಲಿ ಕಾಲ ಕಳೆಯುವುದು ಕಂಡುಬಂದರೆ, ಅಮಾನತು ಮಾಡಲು, ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ವೇಮಗಲ್ ಹೋಬಳಿಯ ಸಾರ್ವಜನಿಕರು ನೀಡಿದ ಪಿಂಚಣಿ ಅರ್ಜಿಗಳ ಪೈಕಿ 432 ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ. ಜೊತೆಗೆ 34 ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ವಿವಿಧ ಇಲಾಖೆಗಳಿಂದ ಒಟ್ಟು 84 ಸವಲತ್ತುಗಳನ್ನು ಸ್ಥಳದಲ್ಲಿ ವಿತರಿಸಲಾಗಿದೆ ಎಂದರು.

ಸಾರ್ವಜನಿಕರ ಜಮೀನಿನ ಪೋಡಿ, ದುರಸ್ತಿ, ಪೌತಿ ಖಾತೆ, ರಾಜಕಾಲುವೆ ಹಾಗೂ ಗುಂಡುತೋಪು ರಕ್ಷಣೆಯಂತಹ ಕೆಲಸಗಳು ತಾಲ್ಲೂಕು ಕಚೇರಿಗೆ ಅಲೆಯದೆ ಸ್ಥಳದಲ್ಲೇ ಇತ್ಯರ್ಥವಾಗಬೇಕು. ಸರ್ಕಾರಿ ಆಸ್ತಿ ಒತ್ತುವರಿ ವಿಚಾರದಲ್ಲಿ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಿಸಿದರು.

ಜಿಲ್ಲಾಧಿಕಾರಿ ಎಂ.ಆರ್. ರವಿ ಮಾತನಾಡಿ, ‘ಸಾರ್ವಜನಿಕರು ಪಿಂಚಣಿ, ಆರ್‌ಟಿಸಿ ತಿದ್ದುಪಡಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಜಮೀನಿನ ಸರ್ವೆ, ಪೋಡಿ, ವಂಶವೃಕ್ಷ ಹಾಗೂ ರೇಷನ್ ಕಾರ್ಡ್ ಪಡೆಯಲು ಮತ್ತು ಗ್ರಾಮಗಳಲ್ಲಿ ಚೆಕ್‌ಡ್ಯಾಂ, ಶಾಲೆಗಳಿಗೆ ಕಾಂಪೌಂಡ್, ಅಂಗನವಾಡಿಗೆ ಕೈತೋಟ ಹಾಗೂ ವಿದ್ಯುತ್ ಸಂಪರ್ಕದಂತಹ ಕೆಲಸಗಳಿಗಾಗಿ ತಿಂಗಳುಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇತ್ತು. ಕೆಳಹಂತದ ಸಿಬ್ಬಂದಿಯಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಎಲ್ಲರೂ ಒಂದೇ ಕಡೆ ಸಿಗದೆ, ಜನಸಾಮಾನ್ಯರು ಕಚೇರಿಗಳ ಮುಂದೆ ಪರದಾಡುತ್ತಿದ್ದರು. ಇದೀಗ ಅದನ್ನು ತಪ್ಪಿಸಲಾಗಿದೆ’ ಎಂದು ಪ್ರತಿಪಾದಿಸಿದರು.

ಕಂದಾಯ ಇಲಾಖೆಗೆ ಸಂಬಂಧಿಸಿ ಹೆಚ್ಚಿನ ಅರ್ಜಿಗಳು ಬರುತ್ತಿದ್ದು, ಪರಿಹಾರಕ್ಕೆ ಆದ್ಯತೆ ನೀಡಬೇಕು. ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳನ್ನೂ ಬಗೆಹರಿಸಬೇಕು. ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳ ನೀರಿನ ಸಮಸ್ಯೆ ನಿವಾರಣೆಗೆ ಕೆ.ಸಿ. ವ್ಯಾಲಿ, ಎಚ್.ಎನ್. ವ್ಯಾಲಿ ಜಾರಿ ಮಾಡಿದ್ದು, ಕೆ.ಸಿ. ವ್ಯಾಲಿಯಿಂದ 480 ಎಂಎಲ್‌ಡಿ ನೀರು ಬರಬೇಕಿದ್ದು, 200 ಎಂಎಲ್‌ಡಿ ಮಾತ್ರ ಬರುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ವೇಮಗಲ್–ಕುರಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನುಷಾ ಮುನಿರಾಜು, ಜಿಲ್ಲಾ‌ ಅರಣ್ಯಾಧಿಕಾರಿ ಸರೀನಾ ಸಿಕ್ಕಲಿಗರ್, ತಹಶೀಲ್ದಾರ್ ಶ್ರೀನಿವಾಸ್, ವೈ. ಶಿವಕುಮಾರ್, ಮುನಿಯಪ್ಪ, ಚಂಜಿಮಲೆ ರಮೇಶ್, ಉರಟ ಅಗ್ರಹಾರ ಚೌಡರೆಡ್ಡಿ, ಬೈರಂಡಹಳ್ಳಿ ನಾಗೇಶ್, ಅಜಯ್ ಕುಮಾರ್, ಫಯಾಜ್ ಅಹಮದ್, ಏಜಾಜ್ ಪಾಷ, ನಾಗೇಶ್,‌ ಪಟ್ಟಣ ಪಂಚಾಯತಿಗಳ ಸದಸ್ಯರು ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

‘ಸರ್ಕಾರವೇ ಜನರ ಮನೆ ಬಾಗಿಲಿಗೆ’

‘ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬೇರೆ ಹೆಸರಿನಲ್ಲಿ ಜನಸ್ಪಂದನಾ ಕಾರ್ಯಕ್ರಮಗಳು ನಡೆದಿದ್ದರೂ, ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಜನರ ಸಮಸ್ಯೆಗಳನ್ನು ಹತ್ತಿರದಿಂದ ಅರಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಜಾ ಸೇವೆ ಇಲಾಖೆ ಆರಂಭಿಸಿದ್ದಾರೆ. ಇದಕ್ಕಾಗಿ ಹಿರಿಯ ಅಧಿಕಾರಿಯನ್ನು ನೇಮಿಸಿ, ಅವರ ಮಾರ್ಗದರ್ಶನದಲ್ಲಿ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು.

ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಮನವಿಗಳ ಪೈಕಿ ಶೇ 90ರಷ್ಟು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಪ್ರತಿ ಹೋಬಳಿ ಕೇಂದ್ರದಲ್ಲಿ ಶನಿವಾರ ಕಾರ್ಯಕ್ರಮ ನಡೆಯುತ್ತಿದ್ದು, ಅಧಿಕಾರಿಗಳಿಗೆ 2ನೇ ಶನಿವಾರವು ರಜೆ ನೀಡದೆ ಸೇವೆ ಒದಗಿಸಲಾಗುತ್ತಿದೆ. ವೇಮಗಲ್ ದೊಡ್ಡ ಹೋಬಳಿಯಾಗಿದ್ದರೂ ಜನರಲ್ಲಿ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿದ್ದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ