ಕಲಬುರಗಿಯಲ್ಲಿ ಆವರಿಸಿದ ಬರದ ಛಾಯೆ: ಉದ್ಯೋಗ ಖಾತ್ರಿ ಕೆಲಸಕ್ಕೆ ಬೇಡಿಕೆ ದ್ವಿಗುಣ

ಕಲಬುರಗಿಯಲ್ಲಿ ಆವರಿಸಿದ ಬರದ ಛಾಯೆ: ಉದ್ಯೋಗ ಖಾತ್ರಿ ಕೆಲಸಕ್ಕೆ ಬೇಡಿಕೆ ದ್ವಿಗುಣ

ಕಲಬುರಗಿಯಲ್ಲಿ ಆವರಿಸಿದ ಬರದ ಛಾಯೆ: ಉದ್ಯೋಗ ಖಾತ್ರಿ ಕೆಲಸಕ್ಕೆ ಬೇಡಿಕೆ ದ್ವಿಗುಣ

ಕಲಬುರಗಿ: ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ದಿನದಿಂದ ದಿನಕ್ಕೆ ‘ಉದ್ಯೋಗ ಖಾತ್ರಿ’ ಕೆಲಸಕ್ಕೆ ಬೇಡಿಕೆ ಹೆಚ್ಚುತ್ತಿದೆ.

ಜಿಲ್ಲೆಯಲ್ಲಿ ಈ ವರ್ಷದ ಜುಲೈನಿಂದ ‘ವಿಬಿ–ಜಿ–ರಾಮ–ಜಿ’ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗುತ್ತಿದೆ. 2026–27ನೇ ಸಾಲಿಗೆ ಜಿಲ್ಲೆಗೆ 60 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಸಿಕ್ಕಿದೆ. ಆ ಪೈಕಿ ಜುಲೈನಲ್ಲಿ 29,454, ಆಗಸ್ಟ್‌ನಲ್ಲಿ 4.85 ಲಕ್ಷ ಹಾಗೂ ಸೆಪ್ಟೆಂಬರ್‌ 10ರ ತನಕ 40,447 ಸೇರಿದಂತೆ ಒಟ್ಟು 5,55,849 ಮಾನವ ದಿನಗಳನ್ನು ಸೃಜಿಸಿ ಗ್ರಾಮೀಣ ಜನರಿಗೆ ಕೆಲಸಗಳನ್ನು ಕೊಡಲಾಗಿದೆ.

ಕಳೆದ ವರ್ಷದ ಜುಲೈನಲ್ಲಿ 1.28 ಲಕ್ಷ ದಿನ, ಆಗಸ್ಟ್‌ನಲ್ಲಿ 73,745 ಹಾಗೂ ಸೆಪ್ಟೆಂಬರ್‌ನಲ್ಲಿ 75,037 ಸೇರಿದಂತೆ ಒಟ್ಟು 2,77,586 ಮಾನವ ದಿನಗಳನ್ನು ಸೃಜಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷದ ಸೆ.10ರ ತನಕವೇ ಬೇಡಿಕೆ ದುಪ್ಪಟ್ಟಾಗಿದೆ.

ಜಿಲ್ಲೆಯಲ್ಲಿ ಒಟ್ಟು 3.75 ಲಕ್ಷ ಉದ್ಯೋಗ ಖಾತ್ರಿ ಚೀಟಿಗಳಿದ್ದು, ಅದರಲ್ಲಿ 6.78 ಲಕ್ಷ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 2.05 ಲಕ್ಷ ಸಕ್ರಿಯ ಉದ್ಯೋಗ ಚೀಟಿಗಳಿದ್ದು, ಅದರಲ್ಲಿ 3.16 ಲಕ್ಷ ಸಕ್ರಿಯ ಕೂಲಿಕಾರ್ಮಿಕರಿದ್ದಾರೆ. ಆದರೆ, ಕೆಲಸಕ್ಕೆ ಬೇಡಿಕೆ ಸಲ್ಲಿಸುವ ಎಲ್ಲರಿಗೂ ಕೆಲಸ ಸಿಗುತ್ತಿಲ್ಲ ಎಂಬುದು ಗ್ರಾಮೀಣ ಕೂಲಿಕಾರ್ಮಿಕರ ಆರೋಪ.

‘ಜಿಲ್ಲೆಯಲ್ಲಿ ಬರ ಆವರಿಸಿದೆ. ಕೃಷಿ ಭೂಮಿಗಳೆಲ್ಲ ಖಾಲಿ ಬಿದ್ದಿವೆ. ಈ ಹೊತ್ತಿನಲ್ಲಿ ನಾವೆಲ್ಲ ಕೃಷಿ ಕೆಲಸದಲ್ಲಿ ತೊಡಗುತ್ತಿದ್ದೆವು. ತೊಗರಿ, ಹತ್ತಿಗೆ ಔಷಧ ಸಿಂಪಡಿಸುವ ಕೆಲಸ, ಕಳೆ ತೆಗೆಯುವ ಕೆಲಸ ಇರುತ್ತಿತ್ತು. ಈ ಸಲ ಮಳೆಯೇ ಇಲ್ಲ. ಉದ್ಯೋಗ ಖಾತ್ರಿ ಕೆಲಸಕ್ಕಾದರೂ ಹೋಗೋಣ ಎಂದರೆ ಅಲ್ಲಿಯೂ ಸುಲಭವಾಗಿ ಕೆಲಸ ಸಿಗುತ್ತಿಲ್ಲ. ನಮ್ಮೂರಿನ 350 ಮಂದಿ ಕೆಲಸ ಕೊಡುವಂತೆ ಮೂರು ತಿಂಗಳಲ್ಲಿ ನಾಲ್ಕು ಸಲ ಅರ್ಜಿ ಹಾಕಿದ್ದೇವೆ. ಶುಕ್ರವಾರದಿಂದ (ಸೆ.11) ಕೆಲಸಕ್ಕೆ ಬರುವಂತೆ ಗುರುವಾರ ಹೇಳಿದ್ದಾರೆ. ಅದೂ ಒಂದು ವಾರಕ್ಕಷ್ಟೇ ಕೆಲಸ ಕೊಟ್ಟಿದ್ದಾರೆ’ ಎಂದು ಜೇವರ್ಗಿ ತಾಲ್ಲೂಕಿನ ಹರನೂರ ಗ್ರಾಮ ಕೂಲಿ ಕಾರ್ಮಿಕ ಮಲ್ಕಪ್ಪ ಚಂದಪ್ಪ ಮ್ಯಾಗೇರಿ ಬೇಸರಿಸುತ್ತಾರೆ.

‘ಉತ್ತಮ ಮಳೆ ಸುರಿದಿದ್ದರೆ, ನಾವು ಮಳೆಗಾಲದಲ್ಲಿ ಉದ್ಯೋಗ ಖಾತ್ರಿ ಕೆಲಸ ಕೇಳುವ ಸ್ಥಿತಿಯೇ ಇರುತ್ತಿರಲಿಲ್ಲ. ಏನೂ ಕೆಲಸ ಸಿಗದಿದ್ದಕ್ಕೆ ದುಡಿಮೆಗಾಗಿ ಉದ್ಯೋಗ ಖಾತ್ರಿಯೊಂದೇ ಆಧಾರ ಆಗಿದೆ. ಅಧಿಕಾರಿಗಳು ನಿರಂತರವಾಗಿ 125 ದಿನ ಕೆಲಸ ಕೊಟ್ಟರೆ ಅನುಕೂಲ’ ಎಂಬುದು ಅವರ ಅಭಿಮತ.

‘ನಿತ್ಯ 24 ಸಾವಿರ ಮಾನವದಿನ ಸೃಜನೆ’

‘ಜಿಲ್ಲೆಯಲ್ಲಿ ಬರದ ಛಾಯೆ ಇರುವುದರಿಂದ ಸಹಜವಾಗಿಯೇ ವಿಬಿ ಜಿ–ರಾಮ್‌–ಜಿ ಯೋಜನೆಯಡಿ ಕೆಲಸಕ್ಕೆ ಬೇಡಿಕೆ ಹೆಚ್ಚಿದೆ. ಜಿಲ್ಲೆಯಲ್ಲಿ ನಿತ್ಯ 24 ಸಾವಿರದಷ್ಟು ಮಾನವ ದಿನಗಳ ಸೃಜನೆಯಾಗುತ್ತಿದ್ದು, ದುಡಿಯುವ ಕೈಗಳಿಗೆ ಕೆಲಸ ನೀಡಲಾಗುತ್ತಿದೆ. ಇನ್ನೂ ಬೇಡಿಕೆ ಬಂದರೆ, ಪರಿಶೀಲಿಸಿ ಕೆಲಸ ನೀಡಲು ಆದ್ಯತೆ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ