ಸುರಪುರದಲ್ಲಿ ವಿಶಿಷ್ಟ ಸಂಪ್ರದಾಯದ ಹರಿದಾಸರು: ಮೂರು ಶತಮಾನಗಳ ಇತಿಹಾಸ

ಸುರಪುರದಲ್ಲಿ ವಿಶಿಷ್ಟ ಸಂಪ್ರದಾಯದ ಹರಿದಾಸರು: ಮೂರು ಶತಮಾನಗಳ ಇತಿಹಾಸ

ಸುರಪುರದಲ್ಲಿ ವಿಶಿಷ್ಟ ಸಂಪ್ರದಾಯದ ಹರಿದಾಸರು: ಮೂರು ಶತಮಾನಗಳ ಇತಿಹಾಸ

ಸುರಪುರ: ತಲೆ ಮೇಲೆ ಟೋಪಿ ಅಥವಾ ರುಮಾಲು, ಹಣೆಗೆ ಗೋವಿಂದನ ನಾಮ, ಕೈಯಲ್ಲಿ ಏಕಸೂರ್ (ಟಿಂಗರಿ) ವಾದ್ಯ, ಹೆಗಲಿಗೆ ಗೋಪಾಳ ಬುಟ್ಟಿ, ದೇವರ ನಾಮಗಳ ಸುಶ್ರಾವ್ಯ ಗಾಯನ.

ಇವು ನಗರದಲ್ಲಿ ಕಳೆದ ಮೂರು ಶತಮಾನಗಳಿಂದ ವಾಸವಾಗಿರುವ ಹರಿದಾಸರ ಚಹರೆಗಳು. ವೆಂಕಟೇಶ್ವರಸ್ವಾಮಿಯ ವರಪುತ್ರರೆಂದೆ ಕರೆಸಿಕೊಳ್ಳುವ ಇವರಿಗೆ ಗೌರವದ ಸ್ಥಾನವಿದೆ. ಈಗ ಕೇವಲ ದಾಸರೆಂದು ಗುರುತಿಸಿಕೊಳ್ಳುವ ಇವರು ಪರಿಶಿಷ್ಟ ಜಾತಿಗೆ ಒಳಪಡುತ್ತಾರೆ.

ಇವರು ಅಲ್ಪಸಂಖ್ಯಾತರಾಗಿದ್ದು ನಗರದಲ್ಲಿ ಇವರವು ಕೇವಲ 30 ಮನೆಗಳಿವೆ. ತಾಲ್ಲೂಕಿನ ದೇವಪುರ, ಕರ್ನಾಳ, ಹಾವಿನಾಳ, ಲಿಂಗದಳ್ಳಿ, ದೇವರಗೋನಾಲ, ಕೆಂಭಾವಿ, ನಗನೂರ, ಮಲ್ಲಾ ಇತರೆಡೆ ಈ ಜನಾಂಗದವರು ವಾಸಿಸುತ್ತಿದ್ದಾರೆ. ಎಲ್ಲಾ ಸೇರಿ 150 ಮನೆಗಳಿದ್ದರೆ ಹೆಚ್ಚು.

ಹಿಂದೆ ವಿಜಯನಗರದಲ್ಲಿ ನೆಲೆಸಿದ್ದ ಈ ಹರಿದಾಸರನ್ನು ವಿಜಯನಗರ ಸಾಮ್ರಾಜ್ಯದ ಪತನಾನಂತರ ಸುರಪುರ ದೊರೆಗಳು ಕರೆಸಿಕೊಂಡು ಜಮೀನು ಜಹಗೀರು ನೀಡಿದ್ದಾರೆ ಎನ್ನಲಾಗುತ್ತದೆ.

ಹರಿದಾಸರು ತಿರುಮಲ ವೆಂಕಟೇಶ್ವರಸ್ವಾಮಿ ಮತ್ತು ಭಕ್ತರ ಮಧ್ಯ ಕೊಂಡಿಯಂತೆ ಕೆಲಸ ಮಾಡುತ್ತಾರೆ. ಹಿಂದೆ ತಿರುಮಲಕ್ಕೆ ಹೋಗುವುದು ಕಷ್ಟದಾಯಕವಾಗಿತ್ತು. ಭಕ್ತರು ದಿನಾಲೂ ವೆಂಕಟೇಶ್ವರಸ್ವಾಮಿಗೆ ಮುಡಿಪು (ಹಣ) ತೆಗೆದು ಇಡುತ್ತಿದ್ದರು. ನವರಾತ್ರಿಯ ಸಮಯದಲ್ಲಿ ಹರಿದಾಸರು ಭಕ್ತರ ಮನೆಗೆ ಗೋಪಾಳಬುಟ್ಟಿ, ಟಿಂಗರಿಯೊಂದಿಗೆ ಹೋಗುತ್ತಿದ್ದರು.ಭಕ್ತರು ಅವರನ್ನು ಗೌರವದಿಂದ ಬರಮಾಡಿಕೊಂಡು, ಗೋಪಾಳ ಬುಟ್ಟಿ ಮತ್ತು ಟಿಂಗರಿಗೆ ಪೂಜೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

ಹರಿದಾಸರಿಗೆ ನಮಸ್ಕರಿಸಿ ಹೋಳಿಗೆ, ಅನ್ನ ಇತರ ಪದಾರ್ಥಗಳಿಂದ ಬುಟ್ಟಿ ತುಂಬಿಸಿ, ತಾವು ತೆಗೆದಿಟ್ಟ ಮುಡಿಪು ಕೊಡುತ್ತಿದ್ದರು. ದಕ್ಷಿಣೆಯನ್ನೂ ನೀಡುತ್ತಿದ್ದರು.ಹರಿದಾಸರು ತಿರುಮಲಕ್ಕೆ ತೆರಳಿ ನವರಾತ್ರಿ ಪೂರ್ತಿ ಅಲ್ಲಿ ಕಳೆದು ಭಕ್ತರು ನೀಡಿದ ಮುಡಿಪನ್ನು ಹುಂಡಿಗೆ ಹಾಕಿ ಪ್ರಸಾದ ತೀರ್ಥಗಳನ್ನು ತಂದು ಭಕ್ತರಿಗೆ ನೀಡುತ್ತಿದ್ದರು. ಭಕ್ತರು ಪುನಃ ಗೋಪಾಳ ಬುಟ್ಟಿ ತುಂಬಿಸಿ ಗೌರವ ಸಲ್ಲಿಸುತ್ತಿದ್ದರು ಎಂಬುದು ಐತಿಹ್ಯ.

ತಿರುಮಲಕ್ಕೆ ಹೋಗಲು ಈಗ ಹೆಚ್ಚಿನ ಅನುಕೂಲಗಳಿದ್ದು, ಭಕ್ತರು ಆರ್ಥಿಕವಾಗಿ ಸಬಲರಾಗುತ್ತಿರುವುದರಿಂದ ಅವರೇ ಸ್ವತಃ ಸ್ವಾಮಿಯ ದರ್ಶನಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಈ ಬುಟ್ಟಿ ತುಂಬಿಸುವ ಸಂಪ್ರದಾಯ ಕಡಿಮೆಯಾಗುತ್ತಿದ್ದರೂ ಇನ್ನೂ ಜೀವಂತವಾಗಿ ಉಳಿದುಕೊಂಡಿದೆ.

ಯುಗಾದಿ, ದಸರಾ, ದೀಪಾವಳಿ, ಮದುವೆ, ಹಾಲೋಕುಳಿ ಜಾತ್ರೆ ಇತರ ಶುಭ ಸಮಾರಂಭಗಳಲ್ಲಿ ಬುಟ್ಟಿ ತುಂಬಿಸುವ ಸಂಪ್ರದಾಯ ಮುಂದುವರಿದಿದೆ. ಹರಿದಾಸರು ಆಗಮಿಸಿ ಹರಿನಾಮ ಪದಗಳನ್ನು ಹಾಡಿದ ನಂತರ ಪೂಜೆ, ಸಲ್ಲಿಸಿ ಅವರಿಗೆ ಮೊದಲು ಊಟ ಮಾಡಿಸಿದ ನಂತರವೇ ಮನೆಯವರು ಭೋಜನ ಮಾಡುವ ಪದ್ಧತಿ ಇದೆ.

ಅರಮನೆಗೂ ಹರಿದಾಸರಿಗೂ ಅವಿನಾಭಾವ ಸಂಬಂಧವಿದೆ. ಅರಮನೆಯಲ್ಲಿ ನಡೆಯುವ ಎಲ್ಲ ಶುಭ ಕಾರ್ಯಗಳಿಗೂ ಹರಿದಾಸರ ಉಪಸ್ಥಿತಿ ಕಡ್ಡಾಯ. ವಂಶಸ್ಥರು ಅವರಿಗೆ ಪೂಜೆ ಸಲ್ಲಿಸಿ ಊಟ ಮಾಡಿಸಿದ ನಂತರ ತಾವು ಊಟ ಮಾಡುತ್ತಾರೆ.

ಟಿಂಗರಿಯನ್ನು ಹರಿದಾಸರೆ ತಯಾರಿಸಿಕೊಳ್ಳುತ್ತಾರೆ. ಕಾಡಿನಲ್ಲಿ ಸಿಗುವ ಏಕದರಿ ಎಂಬ ಕುಂಬಳಕಾಯಿ ಜಾತಿಯ ಕಾಯಿಯನ್ನು ತಂದು ಒಣಗಿಸಿ ಅದಕ್ಕೆ ಒಂದು ತಂತಿ ಕಟ್ಟಿ ವಾದ್ಯ ತಯಾರಿಸುತ್ತಾರೆ. ಗೋಪಾಳಬುಟ್ಟಿಗೆ ಈಗ ₹500 ಬೆಲೆ ಇದೆ.

ಈಗೀಗ ಈ ಜನಾಂಗದವರು ವಿದ್ಯಾವಂತರಾಗುತ್ತಿದ್ದಾರೆ. ಈಗಾಗಲೇ ಕೆಲವರು ಸರ್ಕಾರಿ ನೌಕರರಾಗಿದ್ದಾರೆ. ಯುವತಿಯೊಬ್ಬಳು ವಕೀಲರಾಗಿದ್ದಾರೆ. ಆರ್ಥಿಕವಾಗಿ ಸ್ಥಿತಿವಂತರೇನು ಅಲ್ಲದ ಈ ಜನಾಂಗಕ್ಕೆ ಸೌಲಭ್ಯಗಳ ಅಗತ್ಯವಿದೆ.

ಇವರಿಗಿದೆ ಭಿಕ್ಷಾಟನೆಯ ಕಾಯಕ

ಹರಿದಾಸರಿಗೆ ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರ ದಕ್ಷಿಣಿ ಊಟ ದೊರೆಯುತ್ತದೆ. ಉಳಿದ ಸಮಯದಲ್ಲಿ ಉಪ ಜೀವನಕ್ಕೆ ಭಿಕ್ಷಾಟನೆ ಮಾಡುತ್ತಿದ್ದರು. ದಶಕದ ಹಿಂದೇಯೇ ಸಮಾಜದ ಹಿರಿಯರು ಈ ಕಾಯಕ ಮಾಡುತ್ತಿದ್ದರು. ಈಗ ಅದು ಮುಂದುವರಿದಿಲ್ಲ. ಮನೆ ಮನೆಗೆ ತೆರಳಿ ಟಿಂಗರಿ ಬಾರಿಸುತ್ತಾ ಭಕ್ತಿಯ ಹಾಡುಗಳನ್ನು ಹಾಡಿದರೆ ಮೈಜುಮ್ಮೆನ್ನುತ್ತಿತ್ತು, ಭಕ್ತಿ ಪುಟಿದೆಳುತ್ತಿತ್ತು. ಮನೆಯವರು ಮತ್ತೊಂದು ಇನ್ನೊಂದು ಹಾಡು ಹಾಡಿಸಿ ದಕ್ಷಿಣೆ, ಕಾಳುಕಡಿ ನೀಡುತ್ತಿದ್ದರು. ಶವದ ಮುಂದೆಯೂ ಬೆಳಗಿನ ಜಾವದವರೆಗೆ ಭಜನೆ ಮಾಡುವ ಕಾಯಕ ಈಗಲೂ ಇದೆ. ಮನೆಯವರು ನೀಡುವ ಅಷ್ಟು ಇಷ್ಟು ದಕ್ಷಿಣೆ ಹರಿದಾಸರ ಅರೆ ಹೊಟ್ಟೆ ತುಂಬಿಸುತ್ತದೆ.

ಆನಂದ ದಾಸರು ಇವರ ಗುರುಗಳು

ಸುರಪುರದ ಆನಂದದಾಸರು ಶ್ರೇಷ್ಠ ಹರಿದಾಸರು. ಅನೇಕ ಹರಿಪದಗಳನ್ನು ರಚಿಸಿದ್ದಾರೆ. ಅವರೇ ಈ ಜನಾಂಗದವರಿಗೆ ಗುರುಗಳು. ಕೇವಲ ಗೋವಿಂದ ಗೋವಿಂದ ಎನ್ನುತ್ತಾ ಗೋಪಾಳಬುಟ್ಟಿ ಕಾಯಕ ಮಾಡುತ್ತಿದ್ದ ಹರಿದಾಸರಿಗೆ ಹಾಡಲು ಕಲಿಸಿದವರೇ ಆನಂದದಾಸರು. ಈ ಜನಾಂಗದ ಹಿರಿಯರಾಗಿದ್ದ ದಿವಂಗತ ಕೊಂಡಯ್ಯ ಮತ್ತು ಬೈಲಪ್ಪ ಅದ್ಭುತ ಹಾಡುಗಾರರಾಗಿದ್ದರು. ಅವರ ಪಾಂಡಿತ್ಯ ಗಮನಿಸಿದ ಸಾಹಿತಿ ದಿವಂಗತ ಎ. ಕೃಷ್ಣ ಅವರನ್ನು ಆಕಾಶವಾಣಿಗೆ ಪರಿಚಯಿಸಿ ಆ ಮೂಲಕ ಅವರ ಅನೇಕ ಹಾಡುಗಳು ಪ್ರಸಾರವಾಗುವಂತೆ ಮಾಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ