
ಮೈಸೂರಿನಲ್ಲಿ ಹೈಟೆಕ್ ತಾರಾಲಯ ಕಟ್ಟಡ ಕಾಮಗಾರಿ ಪೂರ್ಣ
ಮೈಸೂರು: ಖಗೋಳವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಆಸಕ್ತರು, ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಧಿಕೃತ ಮಾಹಿತಿ ನೀಡುವ ಪ್ರಮುಖ ಧ್ಯೇಯೋದ್ದೇಶದೊಂದಿಗೆ ಇಲ್ಲಿ ನಿರ್ಮಿಸಲಾಗುತ್ತಿರುವ ‘ವಿಶ್ವದ ಮೊಟ್ಟಮೊದಲ ಎಲ್‌ಇಡಿ ಬಾಗಿದ ಗುಮ್ಮಟ ತಾರಾಲಯ’ (ಹೈಟೆಕ್ ತಾರಾಲಯ)ದ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ನಗರದ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ನಿರ್ಮಿಸಲಾಗುತ್ತಿದೆ.
ಭಾರತೀಯ ಖಗೋಳಭೌತವಿಜ್ಞಾನ ಸಂಸ್ಥೆ (ಐಐಎ) ಹಾಗೂ ಮೈಸೂರಿನ ‘ಕಾಸ್ಮಾಲಜಿ’ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಸಹಯೋಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ತಾರಾಲಯದಲ್ಲಿ, ಖಗೋಳವಿಜ್ಞಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಹಾಗೂ ಪ್ರಚಾರ ನೀಡುವ ಉದ್ದೇಶವನ್ನು ಹೊಂದಲಾಗಿದೆ.
ಯುವ ಸಮುದಾಯಕ್ಕೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಜ್ಞಾನಿಕ ಉತ್ತೇಜನದ ಈ ಯೋಜನೆಗಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ₹ 5 ಕೋಟಿ ಹೆಚ್ಚುವರಿ ಅನುದಾನವನ್ನು ತಮ್ಮ ಸಂಸದರ ನಿಧಿಯಿಂದ ಬಿಡುಗಡೆ ಮಾಡಿದ್ದಾರೆ. ಇದರ ನಿರ್ಮಾಣಕ್ಕೆ 2022ರ ಮಾರ್ಚ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದ ಅವರು, ಹೆಚ್ಚುವರಿ ಅನುದಾನವನ್ನೂ ಒದಗಿಸಿದ್ದಾರೆ.
ಅತ್ಯಾಧುನಿಕವಾಗಿ: ‘ಈ ಪ್ರಮುಖ ಯೋಜನೆಯು ಮೈಸೂರಿನ ಪ್ರವಾಸಿ ತಾಣದ ಹೆಗ್ಗುರುತಿಗೆ ಮತ್ತೊಂದು ಸೇರ್ಪಡೆಯಾಗಲಿದೆ. ಸ್ಥಳೀಯ ಅಭಿವೃದ್ಧಿಗೆ ಹೊಸ ಮಾರ್ಗ ಅವಕಾಶ ಒದಗಿಸುತ್ತದೆ. ಜ್ಞಾನದ ಕೇಂದ್ರವಾಗಿ ಮೈಸೂರಿನ ಪರಂಪರೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಇದು ವಿಶ್ವದ ಮೊದಲ ಬಾಗಿದ ಗುಮ್ಮಟಾಕೃತಿಯ ಎಲ್‌ಇಡಿ ತಾರಾಲಯವಾಗಲಿದೆ. ಕಾಮಗಾರಿ ಭರದಿಂದ ಸಾಗಿದೆ. ಅತ್ಯಾಧುನಿಕ ಹಾಗೂ ಸುಧಾರಿತ ತಂತ್ರಜ್ಞಾನದ ಸಲಕರಣೆಗಳನ್ನು ಇಲ್ಲಿ ಅಳವಡಿಸಲಾಗುತ್ತದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜಒಡೆಯರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ತಾರಾಲಯದ ಕಾರ್ಯನಿರ್ವಹಣೆಗಾಗಿ ತಂತ್ರಜ್ಞಾನದ ವಿಷಯದಲ್ಲಿ ಜಪಾನ್ ಹಾಗೂ ಫ್ರಾನ್ಸ್‌ನ ಸಂಸ್ಥೆಗಳಿಂದ ತಾಂತ್ರಿಕ ನೆರವು ಪಡೆಯಲಾಗುತ್ತಿದೆ. ‘8ಕೆ ರೆಸಲ್ಯೂಶನ್’ ಹೊಂದಿರಲಿರುವ ಅತ್ಯಾಧುನಿಕ 15-ಮೀಟರ್ ಎಲ್‍ಇಡಿ ಗುಮ್ಮಟದ ತಾರಾಲಯ ಎನಿಸಲಿದೆ. ಕರ್ನಾಟಕ ಹಾಗೂ ಮೈಸೂರಿಗೆ ಹೆಮ್ಮೆಯ ಗರಿ ಮೂಡಿಸಲಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಒಟ್ಟು ₹81 ಕೋಟಿ ಅನುದಾನವನ್ನು ವಿನಿಯೋಗಿಸಲಾಗುತ್ತಿದೆ.
ಮೈಸೂರು ವಿ.ವಿ ಜೊತೆ ಒಪ್ಪಂದ
‘ಡಿಜಿಸ್ಟಾರ್–7 ತಂತ್ರಜ್ಞಾನದ ತಾರಾಲಯ’ವೂ ಇದಾಗಲಿದೆ. ಎಲ್‍ಇಡಿ ಗುಮ್ಮಟವನ್ನು ಕೊನಿಕಾ-ಮಿನೋಲ್ಟಾ (ಜಪಾನ್), ಆರ್‌ಎಸ್‌ಎ-ಕಾಸ್ಮೊಸ್ (ಫ್ರಾನ್ಸ್) ಮತ್ತು ಮೆಸರ್ಸ್ ಆರ್ಬಿಟ್-ಅನಿಮೇಟ್ (ಇಂಡಿಯಾ) ಕನ್ಸೋರ್ಟಿಯಂ ಅಭಿವೃದ್ಧಿಪಡಿಸುತ್ತಿವೆ.
ನಿರ್ಮಾಣ ಮತ್ತು ಕಾರ್ಯಾಚರಣೆಗಾಗಿ ಮೈಸೂರು ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅನುದಾನ ಒದಗಿಸಿದ್ದು, ಸುಧಾರಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಇಲ್ಲಿ ಬಳಸಲು ಯೋಜಿಸಲಾಗಿದೆ.
ಇಲ್ಲಿ ನಡೆಸಲಾಗುವ ವಿಜ್ಞಾನ ಶಿಕ್ಷಣ, ಸಂವಹನ ಮತ್ತು ಇತರ ವೈಜ್ಞಾನಿಕ ಸಹಯೋಗ ಚಟುವಟಿಕೆಗಳಿಗೆ ಪರಸ್ಪರ ಸಹಕಾರಕ್ಕಾಗಿ ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ (ಐಐಎ), ಕಾಸ್ಮೋಸ್–ಮೈಸೂರು ಕೇಂದ್ರ ಮತ್ತು ಮೈಸೂರು ವಿಶ್ವವಿದ್ಯಾಲಯ ಜಂಟಿಯಾಗಿ ಕಾರ್ಯನಿರ್ವಹಿಸಲಿವೆ. ಇದಕ್ಕಾಗಿ ಈ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ.
ತಾರಾಮಂಡಲ ಕಣ್ತುಂಬಿಕೊಳ್ಳುವ ಅವಕಾಶ
ಮೈಸೂರು ಜಿಲ್ಲೆಯೊಂದಿಗೆ ಈ ಭಾಗದ ಶಾಲಾ–ಕಾಲೇಜುಗಳ ಮಕ್ಕಳು, ಆಸಕ್ತರು ಹಾಗೂ ಪ್ರವಾಸಿಗರು ಚಾಮುಂಡಿಬೆಟ್ಟದ ತಪ್ಪಲಿನಿಂದ ಇಡೀ ತಾರಾಮಂಡಲವನ್ನೇ ಕಣ್ತುಂಬಿಕೊಳ್ಳುವ ಅವಕಾಶ ಈ ತಾರಾಲಯ ಪೂರ್ಣಗೊಂಡ ನಂತರ ಸಿಗಲಿದೆ.
ಧೂಮಕೇತುಗಳು, ಗ್ರಹಣದಂತಹ ಖಗೋಳದಲ್ಲಿನ ಕೌತುಕಗಳನ್ನು ಅತ್ಯಾಧುನಿಕ ಟೆಲಿಸ್ಕೋಪ್‌ಗಳ ಮೂಲಕ ವೀಕ್ಷಿಸಬಹುದು. ಆಕಾಶ, ನಕ್ಷತ್ರ ವೀಕ್ಷಣೆ ಮೊದಲಾದ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಲು ಉದ್ದೇಶಿಸಲಾಗಿದೆ.