
ಅರಣ್ಯ ಹುತಾತ್ಮರ ದಿನ: ಬಿಳಿಗಿರಿಬೆಟ್ಟದ ಬಂಡೆಯ ಮೇಲೆ ಶ್ರೀನಿವಾಸ್ ನೆನಪು
ಯಳಂದೂರು: ಗಾಂಧಿವಾದಿ ಚಿಂತನೆಗಳು ಹಾಗೂ ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದ ಐಪಿಎಸ್ ಅಧಿಕಾರಿ ಪಿ.ಶ್ರೀನಿವಾಸ್ ವೀರಪ್ಪನ್ ಗುಂಡಿಗೆ ಬಲಿಯಾಗಿ ಮೂರು ದಶಕಗಳು ಕಳೆದರೂ ಅವರ ಹೆಜ್ಜೆ ಗುರುತುಗಳು ಇಂದಿಗೂ ಮಾಸಿಲ್ಲ. ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ಸಂರಕ್ಷಣೆಯ ಒತೆಗೆ ಅರಣ್ಯ ಪ್ರದೇಶದಂಚಿನಲ್ಲಿರುವ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಶ್ರೀನಿವಾಸ್ ಸೂರಿಲ್ಲದವರಿಗೆ ಸೂರು, ವೈದ್ಯಕೀಯ ನೆರವು ಸಹಿತ ಹಲವು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಶ್ರೀನಿವಾಸ್ ಅವರ ವ್ಯಕ್ತಿತ್ವ ಹಾಗೂ ಪರಿಸರ ಪ್ರೇಮದ ಕುರಿತು ಬಿಳಿಗಿರಿರಂಗನ ಬೆಟ್ಟದಲ್ಲಿರುವ ಬಂಡೆಗಲ್ಲಿನ ಮೇಲೆ ನಿರ್ಮಿಸಲಾಗಿರುವ ಕಟ್ಟಡವೂ ಕಥೆ ಹೇಳುತ್ತದೆ. ಬಿಳಿಗಿರಿರಂಗನಾಥ ಸ್ವಾಮಿ ಅರಣ್ಯದಲ್ಲಿ ಅರಣ್ಯ ಅಧಿಕಾರಿಯಾಗಿ ಶ್ರೀನಿವಾಸ್ ಕಾರ್ಯನಿರ್ವಹಿಸುತ್ತಿದ್ದಾಗ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ನಿಸರ್ಗದೊಂದಿಗೆ ಬೆರೆತು ಬಂಡೆ, ನದಿ, ಗಿಡ–ಮರಗಳ ಜೊತೆಗೆ ಜೀವಿಸಿದ್ದರು.
ಬೆಟ್ಟದಲ್ಲಿರುವ ಬಂಡೆಗೆ ಹಾನಿಯಾಗದಂತೆ, ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು ಕಟ್ಟಡ ನಿರ್ಮಿಸಿರುವುದು ಶ್ರೀನಿವಾಸ್ ಅವರ ಪ್ರಕೃತಿ ಪ್ರೇಮಕ್ಕೆ ಸಾಕ್ಷಿ. ಅವರ ಅವಧಿಯಲ್ಲಿ ನಿರ್ಮಾಣವಾದ ಕಟ್ಟಡ ಹಾಗೂ ನೆಟ್ಟ ವೃಕ್ಷಗಳು ಇಂದಿಗೂ ನೆರಳು ನೀಡುತ್ತಿವೆ ಎನ್ನುತ್ತಾರೆ ಸ್ಥಳೀಯ ಎಆರ್ಎಫ್ಒ ಮಧು. ಅರಣ್ಯ, ವನ್ಯಜೀವಿಗಳು ಮತ್ತು ಪರಿಸರ ಸಂರಕ್ಷಣೆಯ ಜೊತೆಗೆ ಕಾಡಂಚಿನ ಜನರ ಬದುಕು ಸುಧಾರಣೆಗೂ ಶ್ರಮಿಸಿದ ಶ್ರೀನಿವಾಸ್ ಅವರ ಕಾರ್ಯಗಳು ಹುತಾತ್ಮರ ದಿನಕ್ಕೆ ಸೀಮಿತವಾಗದೆ ಮುಂದಿನ ಪೀಳಿಗೆಗೂ ತಲುಪಬೇಕು ಎಂಬುದು ಪರಿಸರ ಪ್ರಿಯರ ಕಾಳಜಿ.