
ಜನರ ಮನೆ ಬಾಗಿಲಿಗೆ ‘ಪ್ರಜಾಸೇವೆ’ ವ್ಯವಸ್ಥೆ: ಸತೀಶ್ ಜಾರಕಿಹೊಳಿ
ಯರಗಟ್ಟಿ: ‘ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸುವ ಉದ್ದೇಶದಿಂದ ‘ಪ್ರಜಾ ಸೇವೆ’ ವ್ಯವಸ್ಥೆ ಜಾರಿಗೆ ತರಲಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಈ ರೀತಿಯ ವ್ಯವಸ್ಥೆ ರೂಪಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಪಟ್ಟಣದ ಸತ್ತಿಗೇರಿ ರಸ್ತೆ ಪಕ್ಕದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ಸಭಾಭವನದಲ್ಲಿ ಶನಿವಾರ ಯರಗಟ್ಟಿ ಮತ್ತು ಸವದತ್ತಿ ತಾಲ್ಲೂಕುಗಳ ಪ್ರಜಾಸೇವಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ರಾಜ್ಯ ಸರ್ಕಾರದ ಯೋಜನೆ ಪ್ರತಿಯೊಬ್ಬ ಪ್ರಜೆಗೂ ತಲುಪಬೇಕು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಸರ್ಕಾರ ಸಿದ್ಧವಾಗಿದೆ ಎಂಬ ಸಂದೇಶವನ್ನು ಪ್ರತಿ ಮನೆ ಮನೆಗೆ ನೀಡಬೇಕು ಎನ್ನುವ ಆಶಯದೊಂದಿಗೆ ಆಂದೋಲನ ಹಮ್ಮಿಕೊಳ್ಳಲಾಗಿದೆ’ ಎಂದರು.
‘ಜನರ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲೂ ‘ಪ್ರಜಾ ಸೇವೆ’ ಆಂದೋಲನ ಕಾರ್ಯಕ್ರಮ ನಡೆಸಲಾಗುವುದು. ಅಧಿಕಾರಿಗಳು ಅರ್ಜಿಗಳನ್ನು ಕೇವಲ ಸ್ವೀಕರಿಸುವುದಕ್ಕೆ ಸೀಮಿತವಾಗದೆ, ಕಾನೂನು ಬದ್ಧವಾಗಿ ಸಾಧ್ಯವಿರುವ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದರು.
ಶಾಸಕ ವಿಶ್ವಾಸ್ ವೈದ್ಯ ಮಾತನಾಡಿ, ‘ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ಸರ್ಕಾರವು ನುಡಿದಂತೆ ನಡೆಯುತ್ತಿದೆ’ ಎಂದರು.
ಸಚಿವರ ಕಾರ್ಯದರ್ಶಿ ಶೇಬಣ್ಣ ಕಟ್ಟೆನ್ನವರ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ವಾ.ಕ.ರ.ಸಾರಿಗೆ ನಿಗಮದ ಉಪಾಧ್ಯಕ್ಷ ಸುನಿಲ ಹನುಮನ್ನವರ, ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಯರಗಟ್ಟಿ ತಹಶೀಲ್ದಾರ್ ಎಂ.ವಿ.ಗುಂಡಪ್ಪಗೋಳ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಆನಂದ ಭಡಕುಂದ್ರಿ, ಯರಗಟ್ಟಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಹೇಶ ಭಜಂತ್ರಿ, ಜಿಲ್ಲಾಮಟ್ಟದ ತಾಲ್ಲೂಕುಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.
ಕೃಷಿ, ಹೆಸ್ಕಾಂ, ಕಾರ್ಮಿಕ ಇಲಾಖೆ, ನೀರಾವರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಸೌಲಭ್ಯ, ಹಕ್ಕುಪತ್ರ ವಿತರಣೆ
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಅನುಷ್ಠಾನಗೊಳ್ಳಲಿರುವ ಫಲಾನುಭವಿ ಆಧಾರಿತ ವಿವಿಧ ಕಾರ್ಯಕ್ರಮಗಳಾದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿಯಲ್ಲಿ ಕುರಿ, ಮೇಕೆ ಘಟಕ ಅನುಷ್ಠಾನಕ್ಕಾಗಿ ₹90 ಸಾವಿರಗಳ ಸಹಾಯಧನದ ಚೆಕ್, ಅನುಗ್ರಹ ಯೋಜನೆಯಡಿ ಆಕಸ್ಮಿಕವಾಗಿ ಮರಣಹೊಂದಿದ ದೊಡ್ಡ ಜಾನುವಾರುಗಳ ಮಾಲೀಕರಿಗೆ ನೀಡಲಾಗುವ ಪರಿಹಾರ, ರೈತರಿಗೆ ಮೇವಿನ ಕಿಟ್, ಸಂಚಾರಿ ಕುರಿಗಾರರಿಗೆ ಗುರುತಿನ ಚೀಟಿ, ಪಶುಸಖಿಯರಿಗೆ ಪಶುಸಖಿ ಕಿಟ್ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಕಿಟ್‌ಗಳನ್ನು, ಪಿಂಚಣಿ ಆದೇಶ ಪ್ರತಿಗಳನ್ನು ವಿತರಿಸಲಾಯಿತು.
ವಸತಿ ಶಾಲೆ, ಕ್ರೀಡಾಂಗಣ ಹಾಗೂ ಹಲವಾರು ಕಟ್ಟಡ ನಿರ್ಮಾಣಕ್ಕಾಗಿ ಮಂಜೂರಾದ ಜಮೀನಿನ ಹಕ್ಕುಪತ್ರ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ನಿರ್ಮಾಣಕ್ಕಾಗಿ ಮಂಜೂರಾದ ಜಮೀನಿನ ಹಕ್ಕು ಪತ್ರ, ತಾವಗೇರಿ ಗ್ರಾಮದ ಹೆಳೆವ ಜನಾಂಗದವರಿಗೆ ಮನೆ ಕಟ್ಟಡ ಅಥವಾ ನಿವೇಶನ ನಿರ್ಮಾಣಕ್ಕಾಗಿ ಮಂಜೂರಾದ ಜಮೀನಿನ ಹಕ್ಕು ಪತ್ರಗಳನ್ನು ಆಯಾ ಇಲಾಖೆಗಳಿಗೆ ಹಸ್ತಾಂತರಿಸಿದರು.