
ಚಿಂತಾಮಣಿ : ವೈದ್ಯಕೀಯ ಕಾಲೇಜಿಗೆ ಜಮೀನು; ಪರ ವಿರೋಧದ ಜಟಾಪಟಿ
ಚಿಂತಾಮಣಿ: ತಾಲ್ಲೂಕಿನ ಕೈವಾರ ಹೋಬಳಿಯ ದೊಡ್ಡಿಹಳ್ಳಿಯಲ್ಲಿ ಸರ್ವೆ ನಂ 28 ರಲ್ಲಿನ 20 ಎಕರೆ ಸರ್ಕಾರಿ ಖರಾಬು ಜಮೀನನ್ನು ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ಗೆ ಮಂಜೂರು ಮಾಡುವ ಪ್ರಸ್ತಾವಕ್ಕೆ ತಾಲ್ಲೂಕಿನಲ್ಲಿ ಪರ–ವಿರೋಧ ವ್ಯಕ್ತವಾಗಿದೆ.
ಜಮೀನು ಮಂಜೂರು ಮಾಡುವ ಪ್ರಸ್ತಾವಕ್ಕೆ ಅಡ್ಡಗಾಲು ಹಾಕುವವರ ವಿರುದ್ಧ ಒಕ್ಕಲಿಗರ ಸಂಘದಿಂದ ಈಚೆಗೆ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಮತ್ತೊಂದೆಡೆ ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಜಮೀನು ಮಂಜೂರು ಮಾಡಲು ಎದುರಾಗಿರುವ ತಾಂತ್ರಿಕ ತೊಡಕುಗಳ ಬಗ್ಗೆ ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ಪ್ರಸ್ತಾಪಿಸಿದ್ದರು.
ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 20 ಎಕರೆ ಜಮೀನು ಮಂಜೂರು ಮಾಡುವಂತೆ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ.
ಆದರೆ, ಈ ವಿಚಾರದಲ್ಲಿ ಶಾಸಕ ಡಾ.ಎಂ.ಸಿ. ಸುಧಾಕರ್ ಹಾಗೂ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ನಡುವೆ ತಿಕ್ಕಾಟ ನಡೆದಿದೆ. ಆಸ್ಪತ್ರೆ ನಿರ್ಮಾಣವಾದ ಬಳಿಕ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೌಲಭ್ಯಗಳು ಸಿಗಲಿವೆ ಎಂದುಜಮೀನು ಮಂಜುರಾತಿ ಪರ ಇರುವವರ ವಾದ. ಆದರೆ, ಜಮೀನು ಮಂಜೂರಾತಿಗೆ ತಾಂತ್ರಿಕ ತೊಡಕುಗಳಿವೆ. ಜಮೀನು ಮಂಜೂರು ಮಾಡಬಾರದು ಎಂಬುದು ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ಮತ್ತು ಅವರ ಬೆಂಬಲಿಗರ ವಾದ.
ಈ ಕುರಿತು ಪ್ರತಿಕ್ರಿಯಿಸಿದ್ದ ಶಾಸಕ ಡಾ.ಎಂ.ಸಿ. ಸುಧಾಕರ್, ‘ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕಷ್ಟ. ಈ ಹಿನ್ನೆಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಆದಿಚುಂಚನಗಿರಿ ಮಠ, ಜೈನ ಸಂಸ್ಥೆ ಸೇರಿದಂತೆ ಇನ್ನಿತರ ಅನೇಕ ಸಂಸ್ಥೆಗಳನ್ನು ಸಂಪರ್ಕಿಸಿದ್ದಾಗಿ’ ಹೇಳಿದ್ದರು.
ಶಿಕ್ಷಣ ಸಂಸ್ಥೆಗಳ ಸ್ಥಾಪನೆಗಾಗಿ ರಾಜ್ಯದ ಅನೇಕ ಮಠಗಳು ಮತ್ತು ಸಂಸ್ಥೆಗಳಿಗೆ ಈ ಹಿಂದಿನ ಸರ್ಕಾರಗಳು ಜಮೀನು ಮಂಜೂರು ಮಾಡಿವೆ. ಜನರ ಅನುಕೂಲಕ್ಕಾಗಿ ಬಳಕೆ ಮಾಡಿಕೊಳ್ಳುವ ಜಮೀನು ಮಂಜೂರಾತಿಗೆ ಕೆಲವು ತಿದ್ದುಪಡಿಗಳನ್ನು ಮಾಡಿದ ಹಲವು ನಿದರ್ಶನಗಳಿವೆ ಎಂದು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಜಮೀನು ಮಂಜೂರು ಮಾಡಬೇಕು ಎಂಬುವವರ ವಾದವಾಗಿದೆ.
ಚಿಂತಾಮಣಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಾದರೆ, ಆಸ್ಪತ್ರೆಗಳ ನಿರ್ವಹಣೆ ಸುಲಭವಾಗುತ್ತದೆ. ಚಿಂತಾಮಣಿ ಮತ್ತು ಸುತ್ತಮುತ್ತಲಿನ ಗ್ರಾಮಗಳು ಮತ್ತು ಇತರ ತಾಲ್ಲೂಕುಗಳ ಜನರಿಗೂ ಗುಣಮಟ್ಟದ ಚಿಕಿತ್ಸೆ ಸಿಗಲಿದೆ. ಬಡವರು ಮತ್ತು ಮಧ್ಯಮ ವರ್ಗದವರು ಚಿಕಿತ್ಸೆಗಾಗಿ ಬೆಂಗಳೂರು ಸೇರಿ ದೂರದ ನಗರ ಪ್ರದೇಶಗಳಿಗೆ ಹೋಗುವುದು ತಪ್ಪಲಿದೆ ಎಂದು ಶಾಸಕ ಡಾ.ಎಂ.ಸಿ. ಸುಧಾಕರ್ ಹಲವು ಬಾರಿ ಪ್ರತಿಪಾದಿಸಿದ್ದಾರೆ.
ನಗರದಲ್ಲಿ ₹60 ಕೋಟಿ ವೆಚ್ಚದಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಆಧುನಿಕರಣಗೊಳಿಸಲಾಗಿದೆ. ಹೊಸದಾಗಿ ತುರ್ತು ನಿಗಾ ಘಟಕ ಕಾಮಗಾರಿ ಬರದಿಂದ ಸಾಗುತ್ತಿದೆ. ನಗರದ ಹೃದಯ ಭಾಗದಲ್ಲಿನ ಈ ಮೂರು ಆಸ್ಪತ್ರೆಗಳಲ್ಲಿ ಒಟ್ಟಾರೆ 400 ಹಾಸಿಗೆಗಳಿವೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-16-890466181