ಒಳನೋಟ: ‘ನಿರ್ಮಾಣ’ಕ್ಕೆ ಮರಳಿನ ಬರ

ಒಳನೋಟ: ‘ನಿರ್ಮಾಣ’ಕ್ಕೆ ಮರಳಿನ ಬರ

ಒಳನೋಟ: ‘ನಿರ್ಮಾಣ’ಕ್ಕೆ ಮರಳಿನ ಬರ

ದಾವಣಗೆರೆ: ‘ಕನಸಿನ ಮನೆ ಕಟ್ಟಿಕೊಳ್ಳುವ ನಿರ್ಧಾರ ಕೈಗೊಂಡ ಕೆಲ ದಿನಗಳಲ್ಲಿ ಗೃಹ ಸಾಲವೂ ಸಿಕ್ಕಿತು. ಮೊದಲೇ ಖರೀದಿಸಿದ್ದ ನಿವೇಶನದಲ್ಲಿ ಅಡಿಪಾಯಕ್ಕೆ ಸಿದ್ಧತೆ ಮಾಡಿಕೊಂಡೆವು. ಅಗತ್ಯ ಕಟ್ಟಡ ಸಾಮಗ್ರಿಗಳೆಲ್ಲವೂ ಕೈಗೆಟುಕಿದವು. ಆದರೆ ನಿಸರ್ಗದತ್ತವಾದ ಮರಳು ಮಾತ್ರ ಸಕಾಲಕ್ಕೆ ಸಿಗಲೇ ಇಲ್ಲ’ ಎನ್ನುವಾಗ ಉಮೇಶ್‌ ಅವರ ಮುಖಭಾವದಲ್ಲಿ ಹತಾಶೆ ಇಣುಕಿತ್ತು.

ನಗರದ ಹೊರವಲಯದ ಶಿವಪಾರ್ವತಿ ಬಡಾವಣೆಯಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭಿಸಿ 20 ತಿಂಗಳು ಕಳೆದಿವೆ. ಮರಳು ಸಿಗದೆ ನಿರ್ಮಾಣ ಕಾರ್ಯ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಎರಡು ವರ್ಷ ತುಂಬುವುದರೊಳಗೆ ಗೃಹ ಪ್ರವೇಶ ಮಾಡಬೇಕು ಎಂಬ ಬಯಕೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಹಳಹಳಿಕೆ ಅವರ ಮಾತಿನಲ್ಲಿತ್ತು.

‘ಮನೆಯ ಬುನಾದಿ ಹಂತದವರೆಗೆ ಮರಳು ಸುಲಭವಾಗಿ ಸಿಕ್ತು. ನಂತರ ಹಾವೇರಿ, ಶಿವಮೊಗ್ಗ ಜಿಲ್ಲೆಗಳಿಂದ ಮರಳು ತರಿಸಿದೆ. ಜಿಲ್ಲೆಯಲ್ಲಿರುವ ತುಂಗಭದ್ರಾ ನದಿಯಿಂದಲೇ ಮರಳು ಸಿಗಲಿದೆ ಎಂಬ ವಿಶ್ವಾಸ ದಿನಕಳೆದಂತೆ ಕಮರಿತು. 30 ಟನ್‌ ಸಾಮರ್ಥ್ಯದ ಒಂದು ಟಿಪ್ಪರ್‌ ಮರಳಿಗೆ ₹ 60,000 ಬೆಲೆ ತೆತ್ತು ಸಾಕಾಗಿದೆ. ಸಕಾಲಕ್ಕೆ ಮರಳು ಸಿಗದೇ ಮನೆ ಕಟ್ಟುವುದಕ್ಕೂ ತೊಂದರೆ ಆಗಿದೆ’ ಎಂದು ಅವರು ಬೇಸರ ಹೊರಹಾಕಿದರು.

ಇದು ಉಮೇಶ್‌ ಅವರ ವ್ಯಥೆ ಮಾತ್ರವಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮನೆ, ವಾಣಿಜ್ಯ ಸಂಕೀರ್ಣ ಸೇರಿದಂತೆ ಕಟ್ಟಡ ಕಾಮಗಾರಿ ಕೈಗೆತ್ತಿಕೊಂಡವರ ಸಂಕಟ. ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಮರಳು ಸುಲಭವಾಗಿ ಸಿಗುತ್ತಿಲ್ಲ. ನದಿ ತೀರದ ಮರಳು ನಿಕ್ಷೇಪಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡು ವರ್ಷಗಳು ಉರುಳಿದರೂ ಆರಂಭವಾಗಿಲ್ಲ. ಇದು ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದು, ಜನರು ದುಬಾರಿ ಬೆಲೆ ತೆತ್ತು ಮರಳು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಹಣ ಕೊಟ್ಟರೂ ಸಾರ್ವಜನಿಕರಿಗೆ ಮರಳು ಸಿಗುತ್ತಿಲ್ಲ. ಕ್ವಾರಿ ಮಾಲೀಕರ ಮುಷ್ಕರದಿಂದಾಗಿ ಮರಳಿಗೆ ಪರ್ಯಾಯವಾಗಿ ಬಳಸುವ ಕಲ್ಲಿನ ಪುಡಿಯಾದ ‘ಎಂ–ಸ್ಯಾಂಡ್‌’ಗೂ ಅಭಾವ ಸೃಷ್ಟಿಯಾಗಿದೆ.

‘ರಾಜ್ಯದಲ್ಲಿ ಸರ್ಕಾರಿ ಕಾಮಗಾರಿ ಮತ್ತು ಸಾರ್ವಜನಿಕರ ಗೃಹ ನಿರ್ಮಾಣ ಕಾಮಗಾರಿಗಳಿಗೆ ವಾರ್ಷಿಕ ಅಂದಾಜು 45 ದಶಲಕ್ಷ ಟನ್ ಮರಳಿಗೆ ಬೇಡಿಕೆ ಇದೆ. ಇಲಾಖೆಯ ಸಮಗ್ರ ಗುತ್ತಿಗೆ ನಿರ್ವಹಣಾ ವ್ಯವಸ್ಥೆ (ಐಎಲ್‌ಎಂಎಸ್‌) ತಂತ್ರಾಂಶದ ಮಾಹಿತಿಯಂತೆ ಅಂದಾಜು 8.2 ದಶಲಕ್ಷ ಟನ್ ಮರಳು ಮಾತ್ರ ಪೂರೈಕೆಯಾಗುತ್ತದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಗಳು ತಿಳಿಸಿವೆ. ಬೇಡಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಾಸದಿಂದಾಗಿ ಮರಳಿನ ಬೆಲೆ ಅತಿ ಹೆಚ್ಚಾಗಿದ್ದು, ಇದು ಕಟ್ಟಡ ನಿರ್ಮಾಣದ ಮೇಲೆ ಪರಿಣಾಮ ಬೀರಿದೆ.

ಕಾರ್ಯಾರಂಭವಾಗದ ಮರಳು ನಿಕ್ಷೇಪ: ಸಾರ್ವಜನಿಕರಿಗೆ ಸುಲಭ ಹಾಗೂ ಯೋಗ್ಯ ದರದಲ್ಲಿ ಮರಳು ಪೂರೈಸುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಹೊಸ ಮರಳು ನೀತಿ –2020’ ರೂಪಿಸಿದೆ. ಮರಳು ಪೂರೈಕೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ‘ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮ’ಕ್ಕೆ ಕಾಲಕಾಲಕ್ಕೆ ತಿದ್ದುಪಡಿ ತರಲಾಗಿದೆ. ನದಿ ತಟದ ಮರಳು ನಿಕ್ಷೇಪಗಳನ್ನು ಗುರುತಿಸಿ ಹರಾಜು ಹಾಕುವ ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ‘ಜಿಲ್ಲಾ ಮರಳು ಉಸ್ತುವಾರಿ ಸಮಿತಿ’ಗೆ ನೀಡಲಾಗಿದೆ. ರಾಜ್ಯದಲ್ಲಿ ಪ್ರತಿ ಟನ್‌ ಮರಳಿಗೆ ₹ 850 ಬೆಲೆ ನಿಗದಿಪಡಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಹೊಳೆ, ನದಿಗಳ ಪಾತ್ರಗಳಲ್ಲಿ ಸಾರ್ವಜನಿಕ ಟೆಂಡರ್ ಮೂಲಕ ಮರಳು ಗುತ್ತಿಗೆ ಮಂಜೂರಾತಿಗೆ ಒಟ್ಟು 354 ಮರಳು ನಿಕ್ಷೇಪಗಳನ್ನು ಗುರುತಿಸಲಾಗಿದೆ. ಈ ಪೈಕಿ, 48 ಮರಳು ನಿಕ್ಷೇಪಗಳನ್ನು ಸರ್ಕಾರಿ ಕಾಮಗಾರಿಗಳಿಗೆ ಮೀಸಲಿರಿಸಲಾಗಿದೆ. 280 ಮರಳು ನಿಕ್ಷೇಪಗಳನ್ನು ಹರಾಜು ಮೂಲಕ ವಿತರಿಸಲು ಅಧಿಸೂಚನೆ ಹೊರಡಿಸಲಾಗಿದ್ದು, ಪ್ರಸ್ತುತ 277 ಮರಳು ಬ್ಲಾಕ್‌ಗಳನ್ನು ಇ- ಟೆಂಡ‌ರ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ. 251 ಮರಳು ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, 31 ಬಿಡ್‌ಗಳನ್ನು ತಿರಸ್ಕರಿಸಲಾಗಿದೆ. 221 ಮರಳು ಬ್ಲಾಕ್‌ಗಳನ್ನು ಯಶ್ವಸಿ ಬಿಡ್‌ದಾರರಿಗೆ ತಾತ್ಕಾಲಿಕ ಅಂಗೀಕಾರ ಪತ್ರ ನೀಡಲಾಗಿದೆ.

ಮರಳು ನಿಕ್ಷೇಪಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗುತ್ತಿಗೆದಾರ ಗಣಿಗಾರಿಕೆ ಆರಂಭಿಸಲು ಪರಿಸರ ಅನುಮತಿ ಪತ್ರ (ಇಸಿ) ಪಡೆಯುವುದು ಕಡ್ಡಾಯ. ಕರ್ನಾಟಕ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದಿಂದ ನಿರಾಕ್ಷೇಪಣ ಪತ್ರ ಪಡೆಯಲು ಗುತ್ತಿಗೆದಾರರಿಗೆ ಹೆಚ್ಚು ಕಾಲಾವಕಾಶ ಹಿಡಿಯುತ್ತಿದೆ. ಇದರಿಂದ ವರ್ಷಗಳೇ ಕಳೆದರೂ ಮರಳು ನಿಕ್ಷೇಪಗಳು ಕಾರ್ಯಾರಂಭವಾಗುತ್ತಿಲ್ಲ. ಹೀಗಾಗಿ ಮರಳು ಗಣಿಗಾರಿಕೆ ನಡೆಯುತ್ತಿಲ್ಲ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು.

ನಿಕ್ಷೇಪದಿಂದ ತೆಗೆದ ಮರಳನ್ನು ಸಂಗ್ರಹಣಾಗಾರಕ್ಕೆ ಸ್ಥಳಾಂತರಿಸಬೇಕು. ನಿಕ್ಷೇಪದ ಬಳಿ ಸಂಗ್ರಹಣಾಗಾರವನ್ನು ಗುರುತಿಸಬೇಕು. ಪಟ್ಟಾ ಭೂಮಿಯನ್ನು ಸಂಗ್ರಹಣಾಗಾರಕ್ಕೆ ಬಳಕೆ ಮಾಡಿಕೊಳ್ಳಲು ‘ಕೃಷಿಯೇತರ’ ಪ್ರಮಾಣಪತ್ರ ಪಡೆಯಬೇಕು. ಸಿ.ಸಿ. ಟಿವಿ ಕ್ಯಾಮೆರಾ, ವೇಬ್ರಿಡ್ಜ್‌ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಹೊಂದಿದಾಗ ಮಾತ್ರ ಮರಳು ಗಣಿಗಾರಿಕೆಗೆ ಅವಕಾಶ ಸಿಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೂಡ ವಿಳಂಬವಾಗುತ್ತಿದೆ.

ಪಟ್ಟಾಭೂಮಿಯ ಮರಳೇ ಆಸರೆ: ರಾಜ್ಯದ ನದಿ ಪಾತ್ರಗಳಲ್ಲಿ ಈಗ ಅಧಿಕೃತವಾಗಿ ಕೇವಲ 25 ಮರಳು ನಿಕ್ಷೇಪಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ನದಿ ತಟದ 130 ಎಕರೆ ವಿಸ್ತೀರ್ಣದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15, ಉಡುಪಿಯಲ್ಲಿ 6, ಶಿವಮೊಗ್ಗದಲ್ಲಿ 3 ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 1 ಮರಳು ನಿಕ್ಷೇಪಗಳಲ್ಲಿ ಮಾತ್ರ ಅಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿದೆ. ‘ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು-1994ರ’ ಪ್ರಕಾರ ಹಳ್ಳಗಳ ಪಾತ್ರಗಳಲ್ಲಿ ಲಭ್ಯವಿರುವ ಮರಳನ್ನು ತೆಗೆದು ವಿಲೇವಾರಿ ಮಾಡುವ ಜವಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದ್ದು, ಪ್ರಸ್ತುತ 40 ನಿಕ್ಷೇಪಗಳಲ್ಲಿ ಮರಳು ತೆಗೆದು ಸ್ಥಳೀಯ ಕಾಮಗಾರಿಗಳಿಗೆ ನೀಡಲಾಗುತ್ತಿದೆ.

ಪಟ್ಟಾ ಭೂಮಿಯಲ್ಲೂ ಮರಳು ತೆಗೆಯಲು ಅವಕಾಶವಿದ್ದು, 135 ಪರವಾನಗಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ನೀಡಿದೆ. ರಾಜ್ಯದ 971 ಎಕರೆ 38 ಗುಂಟೆ ಪಟ್ಟಾ ಭೂಮಿಯಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 287 ಎಕರೆ, ಗದಗ ಜಿಲ್ಲೆಯಲ್ಲಿ 212 ಎಕರೆ, ಕೊಪ್ಪಳದಲ್ಲಿ 168 ಎಕರೆ, ರಾಯಚೂರಿನಲ್ಲಿ 91, ಚಿತ್ರದುರ್ಗ ಜಿಲ್ಲೆಯ 88 ಎಕರೆ ಪಟ್ಟಾ ಭೂಮಿಯಲ್ಲಿ ಮರಳು ಗಣಿಗಾರಿಕೆಗೆ ಅಧಿಕೃತವಾಗಿ ಅನುಮತಿ ನೀಡಲಾಗಿದೆ.

ಆದರೆ ಬೇಡಿಕೆಗೆ ಅನುಗುಣವಾಗಿ ಮರಳು ಲಭ್ಯವಾಗುತ್ತಿಲ್ಲ. ಇದರಿಂದ ಮರಳು ಅಕ್ರಮ ಗಣಿಗಾರಿಕೆಗೆ ಆಸ್ಪದ ಸಿಕ್ಕಿದೆ. ನದಿ, ಹಳ್ಳ, ಕೆರೆಗಳಲ್ಲಿರುವ ಮರಳು ಗಣಿಗಾರಿಕೆ ‘ಮಾಫಿಯಾ’ ಸ್ವರೂಪ ಪಡೆದಿದೆ.

ಕಟ್ಟಡ ನಿರ್ಮಾಣಕ್ಕೆ ಮರಳು ಇದೀಗ ಅನಿವಾರ್ಯವಲ್ಲ. ಮರಳಿಗೆ ಪರ್ಯಾಯವಾಗಿ ‘ಎಂ–ಸ್ಯಾಂಡ್‌’ (ಮ್ಯಾನುಫ್ಯಾಚರ್ಡ್‌ ಸ್ಯಾಂಡ್‌) ಬಳಸಬಹುದು. ಆದರೂ ನಿಸರ್ಗದತ್ತ ಖನಿಜದ ಮೇಲಿನ ವ್ಯಾಮೋಹ ಕಡಿಮೆಯಾಗಿಲ್ಲ. ಕಟ್ಟಡ ನಿರ್ಮಾಣದ ಹಲವು ಕೆಲಸಗಳಿಗೆ ಮರಳು ಅನಿವಾರ್ಯ ಎಂಬ ಭಾವನೆ ಇನ್ನೂ ಜನರಲ್ಲಿದೆ. ಇದನ್ನೇ ಬಂಡವಾಳ ಮಾಡಿಕೊಂಡು ‘ಮಾಫಿಯಾ’ ಬೆಳೆದಿದೆ. ಮರಳು ಅಕ್ರಮದ ವಿರುದ್ಧ ಕಾರ್ಯಾಚರಣೆ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ, 2024ರ ಏಪ್ರಿಲ್‌ನಿಂದ 2026ರ ಜುಲೈವರೆಗೆ 7,699 ಪ್ರಕರಣಗಳಿಂದ ₹ 18 ಕೋಟಿ ದಂಡ ವಸೂಲಿ ಮಾಡಿದೆ.

ಕಾರ್ಯಪಡೆಗಳ ವೈಫಲ್ಯ: ಮರಳು ಅಕ್ರಮ ಗಣಿಗಾರಿಕೆ, ಸಾಗಣೆ ಹಾಗೂ ದಾಸ್ತಾನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ‘ಜಿಲ್ಲಾ ಮಟ್ಟದ ಕಾರ್ಯಪಡೆ’ ಹಾಗೂ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ‘ತಾಲ್ಲೂಕು ಮಟ್ಟದ ಕಾರ್ಯಪಡೆ’ ಅಸ್ತಿತ್ವದಲ್ಲಿವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಇದರ ಸದಸ್ಯರಾಗಿದ್ದಾರೆ. ಆದರೂ, ರಾಜ್ಯದಲ್ಲಿ ಮರಳು ಅಕ್ರಮ ಸಾಗಣೆ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ.

ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ಹಾಗೂ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳ ಪ್ರಕಾರ ಅಕ್ರಮ ಮರಳು ಗಣಿಗಾರಿಕೆ, ಸಾಗಣೆ ಮತ್ತು ದಾಸ್ತಾನು ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಾಲ್ಕು ಇಲಾಖೆಗಳ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಹಲವು ಜಿಲ್ಲೆ, ತಾಲ್ಲೂಕುಗಳಲ್ಲಿ ಈ ಕಾರ್ಯಪಡೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿವೆ.

‘ಅನುಮತಿ ಇಲ್ಲದ ಮರಳು ಗಣಿಗಾರಿಕೆ ಮತ್ತು ಸಾಗಣೆ ಶಿಕ್ಷಾರ್ಹ ಅಪರಾಧ. ಈ ಸಂಬಂಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ. ಇದರಿಂದ ಸರ್ಕಾರ ಹಾಗೂ ಇಲಾಖೆ ಮುಜುಗರಕ್ಕೆ ಒಳಗಾಗುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಾರ್ಯಪಡೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಇದು ಬಿಂಬಿಸುತ್ತದೆ’ ಎಂದು ಪೊಲೀಸ್‌ ಮಹಾನಿರ್ದೇಶಕರ ಕಚೇರಿ ಜುಲೈ 17ರಂದು ಹೊರಡಿಸಿದ ಆದೇಶದಲ್ಲಿ ಕಳವಳ ವ್ಯಕ್ತಪಡಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದ 25 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಜೂನ್‌ 30ರಂದು ದಾಳಿ ನಡೆಸಿದ್ದರು. ತುಂಗಾ, ಭದ್ರಾ, ತುಂಗಭದ್ರಾ ಹಾಗೂ ಶರಾವತಿ ನದಿಗಳ ತಟದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 17,000 ಟನ್‌ ಮರಳು ಹಾಗೂ 52 ವಾಹನಗಳನ್ನು ವಶಕ್ಕೆ ಪಡೆದಿದ್ದರು. 

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೆಲ ಅಧಿಕಾರಿಗಳು ಮರಳು ಮಾಫಿಯ ಮತ್ತು ಅಕ್ರಮ ಕಲ್ಲು ಕ್ವಾರಿಗಳ ಪ್ರಭಾವಿಗಳ ಜೊತೆ ಅಕ್ರಮವಾಗಿ ಕೈಜೋಡಿಸಿರುವುದನ್ನು ತಡೆಯಲು ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿದ್ದ ಇಲಾಖೆಯ 160 ಅಧಿಕಾರಿಗಳ ವರ್ಗಾವಣೆ ಮಾಡಿ ಜುಲೈ 20ರಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದರೂ, ಅಕ್ರಮಗಳಿಗೆ ಕಡಿವಾಣ ಬಿದ್ದಿರುವಂತೆ ಕಾಣುತ್ತಿಲ್ಲ.

ಅಕ್ರಮಕ್ಕೆ ಅಧಿಕಾರಿಗಳ ಶಾಮೀಲು?: ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ವ್ಯಾಪಕವಾಗಿ ನದಿ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಕೃಷ್ಣಾ, ತುಂಗಭದ್ರಾ, ಭೀಮಾ, ಕಾಗಿಣಾ ನದಿಗಳಲ್ಲಿ ನೂರಾರು ಮರಳು ನಿಕ್ಷೇಪಗಳನ್ನು ಗುರುತಿಸಿದ್ದು, ಹೊಸ ನಿಕ್ಷೇಪಗಳ ಪತ್ತೆಗೆ ಇನ್ನೂ ಡ್ರೋನ್ ಸಮೀಕ್ಷೆ ನಡೆಯುತ್ತಿದೆ. ರಾಯಚೂರು ಜಿಲ್ಲೆಯ ದೇವದುರ್ಗ, ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕುಗಳಲ್ಲಿ ಸಿಗುವ ಮರಳಿಗೆ ವ್ಯಾಪಕ ಬೇಡಿಕೆ ಇದೆ.

ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿ ಹರಿದಿರುವುದರಿಂದ ನದಿ ಮರಳು ಹೇರಳವಾಗಿ ಲಭ್ಯವಿದೆ. ಮರಳು ಅಕ್ರಮ ಗಣಿಗಾರಿಕೆ ಹಾಗೂ ಸಾಗಣೆಯ ದೊಡ್ಡ ಜಾಲವೇ ಇದೆ. ಸಂಜೆಯಾಗುತ್ತಲೇ ಅಕ್ರಮ ಚಟುವಟಿಕೆಗಳು ಗರಿ ಬಿಚ್ಚಿಕೊಳ್ಳುತ್ತವೆ. ನಂಬರ್‌ ಪ್ಲೇಟ್‌ ಇಲ್ಲದ ಟಿಪ್ಪರ್‌ಗಳಲ್ಲಿ ನೆರೆಯ ಜಿಲ್ಲೆಗಳಿಗೂ ಮರಳು ಸಾಗಿಸಲಾಗುತ್ತದೆ. ಅಕ್ರಮ ತಡೆಯಲು ಜಿಲ್ಲಾಡಳಿತ 12 ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿ ತಂಡ ರಚಿಸಿದರೂ ಪ್ರಯೋಜನವಾಗುತ್ತಿಲ್ಲ. ಗಣಿ ಮತ್ತು ಭೂವಿಜ್ಞಾನ, ಕಂದಾಯ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವುದು ಕಾನೂನು ಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ನದಿ ತಟದ ಗ್ರಾಮಸ್ಥರು ದೂರುತ್ತಾರೆ.

ಯಾದಗಿರಿ ಜಿಲ್ಲೆಯಲ್ಲಿ ಗುರುತಿಸಿದ ಮರಳು ನಿಕ್ಷೇಪಗಳು ಕಾರ್ಯಾರಂಭ ಮಾಡಿಲ್ಲ. ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಸುರಪುರ ತಾಲ್ಲೂಕು ಒಂದರಲ್ಲೇ ಅಕ್ರಮ ಗಣಿಗಾರಿಕೆ ಮೂಲಕ ಹೊರತೆಗೆದ 4 ಲಕ್ಷ ಟನ್‌ ಮರಳನ್ನು ಜಪ್ತಿ ಮಾಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಗುರುತಿಸಿದ ಮರಳು ನಿಕ್ಷೇಪಗಳು ಹೆಚ್ಚಾಗಿ ಚಿತ್ತಾಪುರ ತಾಲ್ಲೂಕಿನ ದಂಡೋತಿ, ಇವಣಿ ಗ್ರಾಮದ ಬಳಿ ಇವೆ. ಚಿತ್ತಾಪುರ ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಮಿತಿಮೀರಿದೆ ಎಂದು ಆರೋಪಿಸಿ ವರ್ಷದ ಹಿಂದೆ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆದಿತ್ತು. ಇದು ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಟಾಪಟಿಗೆ ಕಾರಣವಾಗಿತ್ತು. ಈಗಲೂ ಅಕ್ರಮ ಗಣಿಗಾರಿಕೆ ಮರಳೇ ಕಟ್ಟಡ ಕಾಮಗಾರಿಗಳಿಗೆ ಬಳಕೆಯಾಗುತ್ತಿದೆ.

ದ್ವೀಪಗಳಿಗೆ ಅಪಾಯ: ಅಕ್ರಮ ಮರಳುಗಾರಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕುದ್ರುಗಳು (ದ್ವೀಪ) ಅಪಾಯಕ್ಕೆ ಸಿಲುಕಿವೆ. ಪ್ರತಿವರ್ಷವೂ ನದಿಯಲ್ಲಿ ಬಂದು ಶೇಖರಗೊಳ್ಳುವ ಮರಳು ಈ ಕುದ್ರುಗಳು ಸವಕಳಿಯಾಗದಂತೆ ಪೊರೆಯುತ್ತದೆ. ಆದರೆ ನದಿಯಿಂದ ಹೆಚ್ಚು ಮರಳು ತೆಗೆದಷ್ಟೂ ಈ ಕುದ್ರುಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುವ ಅಪಾಯ ಜಾಸ್ತಿ. ಅಳಿವೆ ಬಾಗಿಲುಗಳ ಬಳಿ ಕಾಂಡ್ಲ ಸಸ್ಯಗಳ ಬೆಳವಣಿಗೆಗೂ ಅಕ್ರಮ ಮರಳುಗಾರಿಕೆಯಿಂದ ಕುತ್ತು ಉಂಟಾಗುತ್ತಿದೆ ಎಂದು ದೂರುತ್ತಾರೆ ಪರಿಸರ ಕಾರ್ಯಕರ್ತರು.

ಉತ್ತರ ಕರ್ನಾಟಕದ ಹಾವೇರಿ, ಬಾಗಲಕೋಟೆ, ವಿಜಯಪುರ, ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮರಳು ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಬಾಗಲಕೋಟೆಗೆ ಪಕ್ಕದ ಗದಗ ಜಿಲ್ಲೆಯಿಂದಲೂ ಮರಳು ಬರುತ್ತದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಲೋಕಾಯುಕ್ತ ದಾಳಿ ನಡೆಸಿ 10ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ.

ವಿಜಯಪುರ ಜಿಲ್ಲೆಯಲ್ಲಿ ಹರಿದಿರುವ ಕೃಷ್ಣಾ ನದಿಯಲ್ಲಿ ನೀರಿರುವ ಕಾರಣಕ್ಕೆ ಮರಳುಗಾರಿಕೆಗೆ ನಿರ್ಬಂಧವಿದೆ. ಡೋಣಿ ನದಿಯಲ್ಲಿ ಮರಳು ಗಣಿಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಎನ್‌ಜಿಟಿ ನಿಷೇಧ ವಿಧಿಸಿರುವ ಕಾರಣ ನಾಲ್ಕು ವರ್ಷಗಳಿಂದ ಅಧಿಕೃತ ಮರಳು ಗಣಿಗಾರಿಕೆ ಸ್ಥಗಿತಗೊಂಡಿದೆ. ಕಾಳಿ ಮತ್ತು ಶರಾವತಿ ನದಿಗಳಲ್ಲಿ ಅಕ್ರಮ ಗಣಿಗಾರಿಕೆ ಮುಂದುವರಿದಿದೆ. ಸ್ಥಳೀಯವಾಗಿ ‘ಎಂ-ಸ್ಯಾಂಡ್’ ಲಭ್ಯವಿಲ್ಲದಿರುವುದರಿಂದ ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಿಂದ ಪೂರೈಕೆಯಾಗುತ್ತಿದೆ. ಜಪ್ತಿ ಮಾಡಿದ ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ಬಳಸಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯಲ್ಲಿ ನಿಯಂತ್ರಣವೇ ಇಲ್ಲದಂತೆ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಪೊಲೀಸ್‌ ಠಾಣೆಗಳಲ್ಲಿ ನಿರಂತರವಾಗಿ ಎಫ್‌ಐಆರ್‌ಗಳು ದಾಖಲಾಗುತ್ತಿವೆ. ಹಾಸನ ಜಿಲ್ಲೆಯ ಹೇಮಾವತಿ, ಯಗಚಿ ಸೇರಿದಂತೆ ಹಲವು ನದಿಗಳು ಮತ್ತು ಹಳ್ಳ- ಕೊಳ್ಳಗಳು ಮರಳಿನ ಪ್ರಮುಖ ಮೂಲಗಳಾಗಿವೆ. ಅಧಿಕೃತ ನಿಕ್ಷೇಪಗಳಿಂದ ಮರಳು ಲಭ್ಯವಿಲ್ಲದ ಪರಿಣಾಮ ಅನೇಕ ಕಟ್ಟಡ ನಿರ್ಮಾಣ ಕಾಮಗಾರಿಗಳು ವಿಳಂಬವಾಗುತ್ತಿವೆ. ಕೆಲ ಸಂದರ್ಭಗಳಲ್ಲಿ ಗುತ್ತಿಗೆದಾರರು ಮರಳು ದೊರೆಯದೇ ಕಾಮಗಾರಿ ಸ್ಥಗಿತಗೊಳಿಸಿರುವ ಉದಾಹರಣೆಗಳೂ ಇವೆ.

–ಪೂರಕ ಮಾಹಿತಿ ವಿವಿಧ ಬ್ಯೂರೊಗಳಿಂದ

ಮೂರು ವರ್ಷದಲ್ಲಿ 5,260 ಪ್ರಕರಣ

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 2023ರಿಂದ 2026ರ ಜುಲೈ 31ರವರೆಗೆ ಮರಳು ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ 5,260 ಪ್ರಕರಣಗಳು ಹಾಗೂ ಮರಳು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ 198 ಪ್ರಕರಣಗಳು ದಾಖಲಾಗಿವೆ. ₹ 63.96 ಕೋಟಿ ಮೌಲ್ಯದ 44.49 ಲಕ್ಷ ಟನ್ ಮರಳನ್ನು ಜಪ್ತಿ ಮಾಡಲಾಗಿದೆ.

20260 202300 1,455, 202400 1,326, 202500 1,350 1,129 ಮರಳು ಅಕ್ರಮ ಸಾಗಣೆ ಪ್ರಕರಣಗಳು ದಾಖಲಾಗಿವೆ. ಈ ವರ್ಷ ಮರಳು ಅಕ್ರಮ ಸಾಗಣೆ ಗಣನೀಯವಾಗಿ ಏರಿಕೆ

ಆಗಿದ್ದು, 7 ತಿಂಗಳಲ್ಲಿ ₹ 29 ಕೋಟಿ ಮೌಲ್ಯದ 32.36 ಲಕ್ಷ ಟನ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಅತಿ ಹೆಚ್ಚು ಮರಳು ಅಕ್ರಮ ಸಾಗಣೆ ಪ್ರಕರಣಗಳು ರಾಯಚೂರು ಜಿಲ್ಲೆಯಲ್ಲಿ ಪತ್ತೆಯಾಗಿವೆ. ಈ ವರ್ಷ 386 ಪ್ರಕರಣಗಳನ್ನು ದಾಖಲಿಸಿದ್ದಾರೆ. ಕಲಬುರ್ಗಿ 118, ಯಾದಗಿರಿ 95, ಬಳ್ಳಾರಿ 94, ಹಾವೇರಿ 60, ದಕ್ಷಿಣ ಕನ್ನಡ 59 ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 58 ಪ್ರಕರಣಗಳು ದಾಖಲಾಗಿವೆ.

ಅಕ್ರಮಕ್ಕೆ ಎತ್ತಿನ ಗಾಡಿ, ತೆಪ್ಪ ಬಳಕೆ

ಮರಳು ಅಕ್ರಮ ಸಾಗಣೆಗೆ ಎತ್ತಿನ ಗಾಡಿ (ಬಂಡಿ) ಹಾಗೂ ತೆಪ್ಪವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎತ್ತಿನ ಬಂಡಿ, ಎತ್ತು ಹಾಗೂ ರೈತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಸುಲಭವಲ್ಲ ಎಂಬ ಕಾರಣಕ್ಕೆ ರಾಜ್ಯದ ಹಲವೆಡೆ ಮರಳು ಮಾಫಿಯಾ ಈ ಮಾರ್ಗ ಅನುಸರಿಸುತ್ತಿದೆ.

ಟಿಪ್ಪರ್, ಲಾರಿ, ಟ್ರ್ಯಾಕ್ಟರ್ ಸೇರಿದಂತೆ ವಾಹನಗಳಲ್ಲಿ ಸಾಗಿಸಲಾಗುವ ಮರಳನ್ನು ಪೊಲೀಸರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಪಾಸಿಸುತ್ತಾರೆ. ಪರವಾನಗಿ ಇಲ್ಲದೇ ಸಾಗಿಸುವ ವಾಹನಗಳನ್ನು ಜಪ್ತಿ ಮಾಡುತ್ತಾರೆ. ಆದರೆ, ಮರಳು ಸಾಗಿಸುವ ಎತ್ತಿನ ಗಾಡಿ ಜಪ್ತಿಗೆ ಅವಕಾಶವಿಲ್ಲ.

ಮರಳನ್ನು ಒಂದೆಡೆ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುವ ಜಾಲವೂ ಸಕ್ರಿಯವಾಗಿದೆ. ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ತೆಗೆದ ಮರಳನ್ನು ತೆಪ್ಪದಲ್ಲಿ ಸಾಗಿಸಿ ನದಿತಟದ ಸಂಗ್ರಹಾಗಾರಕ್ಕೆ ಹಾಕಲಾಗುತ್ತದೆ. ಅಲ್ಲಿಂದ ಎತ್ತಿನ ಬಂಡಿಯಲ್ಲಿ ಮರಳು ಮುಂದಕ್ಕೆ ಸಾಗಿ ಕೈಬದಲಾಗುತ್ತದೆ. ಮರಳು ತುಂಬಿದ ಎತ್ತಿನ ಬಂಡಿಗಳು ಹೊನ್ನಾಳಿ, ಹರಿಹರ, ರಟ್ಟಿಹಳ್ಳಿ ಸೇರಿದಂತೆ ರಾಜ್ಯದ ಹಲವೆಡೆ ಕಾಣಸಿಗುತ್ತವೆ.

ನೆರೆ ರಾಜ್ಯಗಳಿಗೆ `ಎಂ ಸ್ಯಾಂಡ್'

ಚಾಮರಾಜನಗರ ಜಿಲ್ಲೆಯಲ್ಲಿ ವರ್ಷಪೂರ್ತಿ ಕಾವೇರಿ ನದಿ ಹರಿಯುವುದರಿಂದ ಎನ್‌ಜಿಟಿ ನಿಯಮಗಳ ಪ್ರಕಾರ ನದಿಪಾತ್ರದಲ್ಲಿ ಮರಳು ತೆಗೆಯಲು ಅವಕಾಶ ಇಲ್ಲ. ಕೊಳ್ಳೇಗಾಲ ತಾಲ್ಲೂಕಿನ ಹಂಪಾಪುರದ ನಿಕ್ಷೇಪದಲ್ಲಿ ಮಾತ್ರ ಮರಳು ತೆಗೆಯಲಾಗುತ್ತಿದೆ. ಈ ನಿಕ್ಷೇಪದ ಗುತ್ತಿಗೆ ಅವಧಿ 2027ರ ಡಿಸೆಂಬರ್‌ಗೆ ಮುಗಿಯಲಿದೆ.

ಮರಳಿಗೆ ಪರ್ಯಾಯವಾಗಿ 'ಎಂ- ಸ್ಯಾಂಡ್' ಬಳಕೆಯಾಗುತ್ತಿದೆ. ಕ್ರಷರ್‌ಗಳಿಂದ ಕಪ್ಪು ಹಾಗೂ ಬಿಳಿ ಬಣ್ಣದ 'ಎಂ- ಸ್ಯಾಂಡ್' ಲಭ್ಯವಾಗುತ್ತಿದೆ. ಜಿಲ್ಲೆಯ ಅವಶ್ಯಕತೆ ಪೂರೈಸುವ ಜೊತೆಗೆ ಪಕ್ಕದ ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೂ 'ಎಂ- ಸ್ಯಾಂಡ್' ರವಾನೆ ಆಗುತ್ತದೆ. ಪ್ರತಿದಿನ ಸರಾಸರಿ 3,000 ಟನ್ 'ಎಂ- ಸ್ಯಾಂಡ್' ಹೊರ ರಾಜ್ಯಗಳಿಗೆ ರವಾನೆ ಆಗುತ್ತಿದೆ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ