
ಖಾಸಗಿ ಶಾಲೆ ಶಿಕ್ಷಕರಿಗೆ ಆರೋಗ್ಯ ವಿಮೆ: ಸಚಿವ ಮಧು ಬಂಗಾರಪ್ಪ
ಆನೇಕಲ್: ಖಾಸಗಿ ಶಾಲೆ ಶಿಕ್ಷಕರಿಗೆ ಆರೋಗ್ಯ ವಿಮೆ ಸೌಲಭ್ಯಕ್ಕೆ ಬೇಡಿಕೆ ಬಂದಿದ್ದು, ಹಣಕಾಸು ಇಲಾಖೆಯ ಸಲಹೆ ಪಡೆದು ಶೀಘ್ರವೇ ಅನುಷ್ಠಾನಗೊಳಿಸಲು ಸಚಿವ ಸಂಪುಟದ ಮುಂದೆ ತರಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲ್ಲೂಕಿನ ಅತ್ತಿಬೆಲೆಯ ಸೇಂಟ್ ಫಿಲೋಮಿನಾಸ್ ಶಾಲೆಯಲ್ಲಿ ಶನಿವಾರ ಅನುದಾನರಹಿತ ಶಾಲೆಗಳ ಒಕ್ಕೂಟದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ‘ಉತ್ತಮ ಶಿಕ್ಷಕ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ವಿವಿಧ ಇಲಾಖೆ ಗಳ ನಿರಾಕ್ಷೇಪಣಾ ಪತ್ರ ಪಡೆಯುವುದು ಸೇರಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಇಂತಹ ಸಮಸ್ಯೆ ಅರಿತು ಸೂಕ್ತ ಪರಿಹಾರ ರೂಪಿಸಲು ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ರಚಿಸಿದ ಸದನ ಸಮಿತಿಯು ಅಧ್ಯಯನ ನಡೆಸಿ ಹಲವು
ಶಿಫಾರಸುಗಳನ್ನು ಮಾಡಿದೆ. ಇದರ ಬಗ್ಗೆ ಅಧ್ಯಯನ ನಡೆಸಿ ಅನುಷ್ಠಾನ
ಗೊಳಿಸಲಾಗುವುದು ಎಂದರು.
ರಾಜ್ಯ ಮಟ್ಟದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ನೀಡುವ ‘ಉತ್ತಮ ಶಿಕ್ಷಕ’
ಪ್ರಶಸ್ತಿಯನ್ನು ಖಾಸಗಿ ಶಾಲೆಯ ಅರ್ಹ ಶಿಕ್ಷಕರಿಗೂ ನೀಡಲಾಗುವುದು ಎಂದು ಹೇಳಿದರು.
ತಾಂತ್ರಿಕ ಸಮಸ್ಯೆಗೆ ಪರಿಹಾರ: ಅನುದಾನಿತ, ಅನುದಾನರಹಿತ ಮತ್ತು ಸರ್ಕಾರಿ ಶಾಲೆಗಳ ಸ್ಯಾಟ್ಸ್ ತಂತ್ರಾಂಶದ ಅಭಿವೃದ್ಧಿಗೆ ಹಣಕಾಸು ಇಲಾಖೆ ಅಗತ್ಯ ನೆರವು ನೀಡಿಲ್ಲ. ಹೀಗಾಗಿ, ತಾಂತ್ರಿಕ ಸಮಸ್ಯೆ ಉಂಟಾಗಿದೆ. ಶೀಘ್ರ ತಂತ್ರಾಂಶಗಳ ಲೋಪ ಸರಿಪಡಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.
‘ಶಾಲಾ ಸಮಯ ಬದಲಾವಣೆಗೆ ಚಿಂತನೆ’
ಶಾಲಾ ಸಮಯ ಬದಲಾಯಿಸುವಂತೆ ಒತ್ತಾಯ ಕೇಳಿ ಬಂದಿದ್ದು ಪೋಷಕರು ಶಿಕ್ಷಕರು ಮತ್ತು ಸಂಬಂಧಿತ ಇಲಾಖೆಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು. ಆಯಾಯ ಶಾಲೆಗಳ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಪರಿಶೀಲನೆಯೊಂದಿಗೆ ಶಾಲಾ ಆಡಳಿತ ಮಂಡಳಿ ಶಿಕ್ಷಕರು ಪೋಷಕರು ಪೊಲೀಸ್ ಮತ್ತು ಸಂಚಾರ ಪೊಲೀಸರ ಸಲಹೆ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.