
ರೈತರ ಸಾಲಮನ್ನಾಕ್ಕೆ ಆಗ್ರಹ, ಬರಪೀಡಿತ ಪ್ರದೇಶಗಳಿಗೆ ಪರಿಹಾರ
ತುಮಕೂರು: ರಾಜ್ಯ ಸರ್ಕಾರ ಬರಪೀಡಿತ ತಾಲ್ಲೂಕುಗಳ ಪಟ್ಟಿ ಘೋಷಣೆ ಮಾಡಿ ಹಲವು ದಿನಗಳು ಕಳೆದಿವೆ. ಆದರೆ, ಈವರೆಗೆ ಬರಪರಿಹಾರ ಕ್ರಮಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಬರದ ಕಾರಣ ಸಂಕಷ್ಟದಲ್ಲಿರುವ ರೈತರ ಸಾಲಮನ್ನಾ ಮಾಡಬೇಕು. ಹಾಗೆಯೇ, ಬ್ಯಾಂಕ್‌ಗಳು ಬಲವಂತದ ವಸೂಲಿ ಮಾಡದಂತೆ ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಿದೆ.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎ.ಗೋವಿಂದರಾಜು, ‘ಜಿಲ್ಲೆಯಲ್ಲಿ ತಿಪಟೂರು ಹೊರತುಪಡಿಸಿ ಎಲ್ಲ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿವೆ. ಎಲ್ಲೆಡೆ ಅಂತರ್ಜಲ ಮಟ್ಟ ಕುಸಿದಿದೆ. ಕೊಳವೆಬಾವಿ ಬತ್ತಿವೆ. ಮುಂದಿನ 15 ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಂಭವ ಇದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ತಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಮಳೆ ಇಲ್ಲದೇ ರೈತರಿಗೆ ಕೆಲಸ ಇಲ್ಲದಂತಾಗಿದೆ. ಕೃಷಿಕರು ಮತ್ತು ಕೂಲಿ ಕಾರ್ಮಿಕರು ಗುಳೆ ಹೋಗದಂತೆ ತಪ್ಪಿಸಲು ವಿಬಿ ಜಿ ರಾಮ್ ಜಿ ಯೋಜನೆ ಅಡಿ ಸ್ಥಳೀಯವಾಗಿ ಹೆಚ್ಚು ಕೆಲಸ ನೀಡಬೇಕು. ಪ್ರತಿ ರೈತರಿಗೆ ಎಕರೆಗೆ ಕನಿಷ್ಠ ₹50 ಸಾವಿರ ಬೆಳೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಸೆ.21ರೊಳಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ, ಸೆ.23ರಿಂದ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಪಡಿತರ ಅಕ್ಕಿ ಜತೆಗೆ ಬೇಳೆ, ಬೆಲ್ಲ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ರಿಯಾಯತಿ ದರದಲ್ಲಿ ನೀಡಬೇಕು. ಪಶುಸಂಗೋಪನೆಗೆ ಪೂರಕವಾಗಿ ಆಹಾರ ಪದಾರ್ಥಗಳಿಗೆ ಶೇ 50ರ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಚಿಕ್ಕಬೋರೇಗೌಡ, ಲೋಕೇಶ್, ರಂಗಹನುಮಯ್ಯ, ಷಬ್ಬೀರ್ ಪಾಷ, ಮಂಜುನಾಥ್, ತಿಮ್ಮೇಗೌಡ ಉಪಸ್ಥಿತರಿದ್ದರು.