
ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಸಮ್ಮುಖದಲ್ಲಿ ತರಕಾರಿ ಹರಾಜು
ಬಾಗೇಪಲ್ಲಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದ 3 ದಿನಗಳಿಂದ ಬೆಳಿಗ್ಗೆ 8 ರಿಂದ 12 ಗಂಟೆವರೆಗೆ ತರಕಾರಿಗಳ ಹರಾಜು ನಡೆಯುತ್ತಿದ್ದು, ತರಕಾರಿಗಳು ಉತ್ತಮ ಬೆಲೆಗೆ ಬಿಕರಿಯಾಗುತ್ತಿರುವುದು ರೈತರಲ್ಲಿ ಹರ್ಷ ತರಿಸಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಒಂದು ವರ್ಷದಿಂದ ಕೆಲವು ದಲ್ಲಾಳಿಗಳು ಮಧ್ಯರಾತ್ರಿ ಮನಬಂದಂತೆ ತರಕಾರಿಗಳನ್ನು ಹರಾಜು ಮಾಡುತ್ತಿದ್ದರು. ತರಕಾರಿಗಳಿಗೆ ಉತ್ತಮ ಬೆಲೆ ಸಿಗುತ್ತಿರಲಿಲ್ಲ. ಹೀಗಾಗಿ, ರೈತರು ಮತ್ತು ವ್ಯಾಪಾರಿಗಳು ಹರಾಜು ಪ್ರಕ್ರಿಯೆ ಸಮಯವನ್ನು ಬದಲಿಸುವಂತೆ ತಹಶೀಲ್ದಾರ್ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಗೆ ರೈತರು ಮತ್ತು ಎಪಿಎಂಸಿ ಅಧಿಕಾರಿಗಳ ಸಮ್ಮುಖದಲ್ಲೇ ಹರಾಜು ಮತ್ತು ವ್ಯಾಪಾರ ನಡೆಯಬೇಕು ಎಂದು ಸೂಚಿಸಲಾಗಿದೆ. ಅವಧಿಗೂ ಮುನ್ನ ಹರಾಜು, ವ್ಯಾಪಾರ ವಹಿವಾಟು ನಡೆಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ಶಶಿಕಲಾ ಎಚ್ಚರಿಕೆ ನೀಡಿದ್ದಾರೆ.
ಪ್ರಾಂಗಣದಲ್ಲಿ ಬೆಳಗಿನ ಜಾವ 3 ಗಂಟೆಗೆ ವ್ಯಾಪಾರ ನಡೆಯುತ್ತಿದ್ದರಿಂದ ರೈತರು ಹಿಂದಿನ ರಾತ್ರಿ ತರಕಾರಿಗಳನ್ನು ಸಾಗಿಸಬೇಕಿತ್ತು. ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವ್ಯಾಪಾರ ಸಮಯವನ್ನು ಬೆಳಗ್ಗೆ 8ರಿಂದ 12 ಗಂಟೆವರೆಗೆ ಬದಲಿಸಿಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ 3 ದಿನಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಳಗ್ಗೆ 8 ರಿಂದ 12 ಗಂಟೆವರೆಗೆ ವ್ಯಾಪಾರ ನಡೆಯುತ್ತಿದೆ. ಸೋಮವಾರ ಬಿಳಿ ಬೀನ್ಸ್ ಕೆ.ಜಿ.ಗೆ ₹50, ಅಲಸಂದೆ ₹60–₹65, ಸೋರೆಕಾಯಿ ₹25–₹30, ದಪ್ಪಬಜ್ಜಿ ₹20, ಗಡ್ಡೆಕೋಸು ₹10, ಹೂಕೋಸು ₹25, ಕ್ಯಾರೆಟ್ ₹40, ನುಗ್ಗೆಕಾಯಿ ₹25, ಬದನೆ ₹15ಕ್ಕೆ ಬಿಕರಿಯಾದವು. ಈ ಕ್ರಮದಿಂದ ರೈತರಿಗೆ ಲಾಭ ತಂದಿದೆ ಬಂದಿದೆ ಎಂದು ರೈತರಾದ ಅಶ್ವತ್ಥಪ್ಪ, ಅಶ್ವತ್ಥನಾರಾಯಣರೆಡ್ಡಿ ತಿಳಿಸಿದ್ದಾರೆ.
ಕೆಲವು ದಲ್ಲಾಳಿಗಳು ತರಕಾರಿಗಳನ್ನು ರೈತರ ಸಮ್ಮುಖದಲ್ಲಿ ಹರಾಜು ಮಾಡಲ್ಲ. ವ್ಯಾಪಾರಸ್ಥರ ಜೊತೆ ದಲ್ಲಾಳಿಗಳು ಶಾಮೀಲಾಗಿ, ಕಡಿಮೆ ಬೆಲೆಗೆ ಹರಾಜು ಹಾಕುತ್ತಾರೆ. ಇದರಿಂದ ಬೆಳೆಗಳಿಗೆ ಉತ್ತಮ ಬೆಲೆ ಸಿಗದೆ, ರೈತರಿಗೆ ತೊಂದರೆ ಆಗುತ್ತಿತ್ತು ಎಂದು ರೈತರೊಬ್ಬರು ತಿಳಿಸಿದ್ದಾರೆ.
‘ಎಪಿಎಂಸಿಯಲ್ಲಿ ಕಡಿಮೆ ಬೆಲೆಗೆ ಹರಾಜು ಆಗುತ್ತಿದ್ದರಿಂದ ರೈತರಿಗೆ ಹೆಚ್ಚಿನ ಲಾಭ ಸಿಗುತ್ತಿರಲಿಲ್ಲ. ಇದೀಗ ಬೆಳಗ್ಗೆ 8ರಿಂದ 12 ಗಂಟೆವರೆಗೆ ರೈತರ ಸಮ್ಮುಖದಲ್ಲಿ ವ್ಯಾಪಾರ ನಡೆಯುತ್ತಿರುವುದರಿಂದ ಬೆಳೆಗಳಿಗೆ ಹೆಚ್ಚಿನ ಬೆಲೆ ಸಿಗುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಸಿಗಬೇಕು ಎಂಬುದೇ ನಮ್ಮ ಉದ್ದೇಶ’ ಎಂದು ಶ್ರೀಸಾಯಿ ಟ್ರೇಡರ್ಸ್ ಮಂಡಿ ಮಾಲೀಕ ನಂಜುಂಡ ತಿಳಿಸಿದ್ದಾರೆ.
ಸಿಬ್ಬಂದಿ ಕೊರತೆಯೇ ಸವಾಲು
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಳಗ್ಗೆ 8ರಿಂದ 12 ಗಂಟೆವರೆಗೆ ವ್ಯಾಪಾರ ಮಾಡಬೇಕು ಎಂದು ನೋಟಿಸ್ ಜಾರಿ ಮಾಡಲಾಗಿದೆ. ರೈತರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ವ್ಯಾಪಾರ ನಡೆಯಬೇಕು ಎಂದು ತಹಶೀಲ್ದಾರ್ ಮನೀಷಾ ಎನ್. ಪತ್ರಿ ಸೂಚಿಸಿದ್ದಾರೆ. ಆದರೆ, ಎಪಿಎಂಸಿಯಲ್ಲಿನ 11 ಹುದ್ದೆ ಪೈಕಿ ಇಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 9 ಹುದ್ದೆಗಳು ಖಾಲಿ ಇವೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯೇ ಸವಾಲಾಗಿದೆ.
ಶಶಿಕಲಾ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-16-149448399