
ವಿದ್ಯುತ್ ‘ಚೆಲ್ಲಾಟ’ | ಜನರಿಗೆ ಸಂಕಟ: ಕೃಷಿ ಚಟುವಟಿಕೆ, ಓದಿಗೆ ಅಡಚಣೆ
ವಿಜಯಪುರ (ದೇವನಹಳ್ಳಿ): ಈಗ ಮಳೆಗಾಲ ಆದರೂ ಬೇಸಿಗೆಯಂತೆ ಭಾಸವಾಗುತ್ತಿದೆ. ಅತಿಯಾದ ಬಿಸಿಲಿನ ತಾಪಮಾನ, ವಿದ್ಯುತ್ ಕಣ್ಣಾಮುಚ್ಚಾಲೆಗೆ ಜನಸಾಮಾನ್ಯರು ಸಂಕಟ ಪಡುವಂತಾಗಿದೆ.
ರಾತ್ರಿ, ಹಗಲು ಎನ್ನದೇ ಯಾವುದೇ ಮುನ್ಸೂಚನೆ ಇಲ್ಲದೇ ಇಷ್ಟಾನುಸಾರ ವಿದ್ಯುತ್ ಕಡಿತಗೊಳಿಸುತ್ತಿರುವ ಕಾರಣ ರೈತರು ಮಾತ್ರವಲ್ಲದೇ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ವಿದ್ಯುತ್ ನಂಬಿ ಉದ್ಯೋಗ ಸೃಷ್ಟಿಸಿಕೊಂಡವರ ಜೀವನಕ್ಕೆ ಕತ್ತಲು ಕವಿದಂತಾಗಿದೆ.
ರೈತರಿಗೆ ಹೊಡೆತ: ಕೃಷಿಗೆ ಕೊಳವೆಬಾವಿಗಳು ಆಸರೆಯಾಗಿವೆ. ಮಳೆ ಕೈಕೊಟ್ಟಿರುವ ಪರಿಣಾಮ, ಕೆರೆ, ಕಾಲುವೆ, ಹಳ್ಳ ಕೊಳ್ಳಗಳು ಬತ್ತಿ ಹೋಗಿವೆ. ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಮೋಟಾರು ಪಂಪ್‍ಗಳು ಕೈ ಕೊಡುತ್ತಿವೆ.
ಅಲ್ಪಸ್ವಲ್ಪ ಕೊಳವೆಬಾವಿಯ ನೀರಿಗೆ ಸಾಲಸೋಲ ಮಾಡಿ ಬೆಳೆಗಳನ್ನು ಬೆಳೆಯುತ್ತಿದ್ದರೆ ಇಂತಹ ಸಮಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಬೆಳೆಗಳಿಗೆ ನೀರು ಹರಿಸಲಾಗದೇ ಬೆಳೆಗಳು ಒಣಗುತ್ತಿದ್ದು ಇದರಿಂದ ರೈತರು ಕಂಗಾಲಾಗಿದ್ದಾರೆ.
ಕುಡಿಯುವ ನೀರಿಗೆ ಸಮಸ್ಯೆ: ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕೊಳವೆಬಾವಿಗಳಿಗೆ ತ್ರೀ ಫೇಸ್ ವಿದ್ಯುತ್ ನೀಡದಿರುವುದರಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದೆ ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗಿದೆ.
ವಿದ್ಯಾರ್ಥಿಗಳಿಗೆ ತೊಂದರೆ: ವಿದ್ಯುತ್ ಕಡಿತದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳ ಓದಿಗೆ ಅಡ್ಡಿಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಒಂಟಿ ಮನೆಗಳಲ್ಲಿ ವಾಸ ಮಾಡುತ್ತಿರುವ ಜನರಿಗೆ ವಿದ್ಯುತ್ ಕಡಿತ ಸಂಕಷ್ಟ ತಂದೊಡ್ಡಿದೆ.
ಕಳೆದೊಂದು ವಾರದಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ರೈತರು ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೇ ಬೆಳೆಗಳು ಒಣಗುತ್ತಿವೆ. ರಾತ್ರಿ ವೇಳೆ ಸಮರ್ಪಕ ವಿದ್ಯುತ್ ಇಲ್ಲದ ಪರಿಣಾಮ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದೆ. ಒಂಟಿ ಮನೆಗಳಲ್ಲಿ ವಾಸ ಮಾಡುವವರು ಭಯದ ವಾತಾವರಣದಲ್ಲಿದ್ದಾರೆ. ಕೂಡಲೇ ಬೆಸ್ಕಾಂ ಇತ್ತ ಗಮನಹರಿಸಿ ವಿದ್ಯುತ್ ಸಮಸ್ಯೆಯನ್ನು ನಿವಾರಿಸಬೇಕು ಎಂದು ಕೊಮ್ಮಸಂದ್ರ ಗ್ರಾಮದ ಮೂರ್ತಿ ಒತ್ತಾಯಿಸಿದರು.
ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ
ವಿಜಯಪುರ ಬೆಸ್ಕಾಂ ಕಚೇರಿ ಗುತ್ತಿಗೆದಾರರ ಅಡ್ಡೆಯಾಗಿ ಪರಿಣಮಿಸಿದೆ. ವಿದ್ಯುತ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೂ ಟಪಾಲಿನಲ್ಲಿ ಪಡೆದು ಹಿಂಬರ ನೀಡುತ್ತಿದ್ದಾರೆಯೇ ಹೊರತು ಸಮಸ್ಯೆ ಬಗೆಹರಿಸುತ್ತಿಲ್ಲ. ಅಧಿಕಾರಿಗಳು ಸಮಸ್ಯೆ ಹೊತ್ತು ಬರುವ ಸಾರ್ವಜನಿಕರ ಸಮಸ್ಯೆ ಆಲಿಸುವವರೇ ಇಲ್ಲ. ಜಿಲ್ಲಾಡಳಿತ ಹಾಗೂ ಬೆಸ್ಕಾಂ ಮೇಲಧಿಕಾರಿಗಳು ಕಚೇರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಂಜೆಯಾಗುತ್ತಲೇ ಕಗ್ಗತ್ತಲು
ಗ್ರಾಮೀಣ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆ ವಿದ್ಯುತ್ ಕಡಿತಗೊಂಡು ಜನರು ಕಗ್ಗತ್ತಲಲ್ಲಿ ವಾಸ ಮಾಡುವಂತಾಗಿದೆ. ವಿದ್ಯುತ್ ಬಂದಾಗಲ್ಲೆಲ್ಲ ಕೊಳವೆಬಾವಿಯ ಪಂಪ್‌ಸೆಟ್ ಆನ್ ಮಾಡಲು ಪದೇಪದೇ ತೋಟಗಳಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ನೂಲು ಬಿಚ್ಚಣಿಕೆದಾರರು ವಿದ್ಯುತ್ ಸಮಸ್ಯೆಯಿಂದ ಉದ್ಯೋಗ ನಿಲ್ಲಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಕರೆ ಸ್ವೀಕರಿಸದ ಬೆಸ್ಕಾಂ ಅಧಿಕಾರಿಗಳು: ವಿದ್ಯುತ್ ಸಮಸ್ಯೆಯ ಕುರಿತು ವಿಚಾರಿಸಲು ವಿಜಯಪುರ ಬೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಕಚೇರಿ ಬಳಿ ಹೋದರೂ ಅಲ್ಲಿನ ಸಿಬ್ಬಂದಿ ಅನ್ಯ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದಾರೆ ಎಂದು ಪ್ರತಿಕ್ರಿಯಿಸಿದರು.