ಕೆಪಿಎಸ್‌ಸಿ: ಅಕ್ರಮ ತಡೆಗೆ 4 ಸೂತ್ರ; ಎಲ್ಲ ಅಭ್ಯರ್ಥಿಗಳ ಅಂಕ ಬಹಿರಂಗ

ಕೆಪಿಎಸ್‌ಸಿ: ಅಕ್ರಮ ತಡೆಗೆ 4 ಸೂತ್ರ; ಎಲ್ಲ ಅಭ್ಯರ್ಥಿಗಳ ಅಂಕ ಬಹಿರಂಗ

ಕೆಪಿಎಸ್‌ಸಿ: ಅಕ್ರಮ ತಡೆಗೆ 4 ಸೂತ್ರ; ಎಲ್ಲ ಅಭ್ಯರ್ಥಿಗಳ ಅಂಕ ಬಹಿರಂಗ

ಬೆಂಗಳೂರು: ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮ ಮತ್ತು ಅಧಿಕಾರ ದುರುಪಯೋಗಕ್ಕೆ ಕಡಿವಾಣ ಹಾಕಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮಹತ್ವದ ಸುಧಾರಣಾ ಕ್ರಮಗಳನ್ನು ಜಾರಿ ಮಾಡಲು ತೀರ್ಮಾನಿಸಿದೆ.

ಮುಖ್ಯವಾಗಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿ ಎಲ್ಲರಿಗೂ ಲಭ್ಯವಾಗಿಸುವುದು ಮತ್ತು ಅಭ್ಯರ್ಥಿಗಳ ಅಂಕವನ್ನು ನೋಂದಣಿ ಸಂಖ್ಯೆ, ಹೆಸರು, ಕೆಟಗರಿ ಸಹಿತ ಬಹಿರಂಗಪಡಿಸುವ ಮಹತ್ವದ ನಿರ್ಣಯವನ್ನು ಕೆಪಿಎಸ್‌ಸಿ ತೆಗೆದುಕೊಂಡಿದೆ.

ಆ ಮೂಲಕ, ಪರೀಕ್ಷಾ ಅಕ್ರಮ, ಸ್ವಜನ ಪಕ್ಷಪಾತ ಆರೋಪಗಳ ಕಾರಣಕ್ಕೆ ವಿಶ್ವಾಸಾರ್ಹತೆ ಕಳೆದುಕೊಂಡಿರುವ ಕೆಪಿಎಸ್‌ಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಇನ್ನು ಮುಂದೆ ಯಾವುದೇ ಅನುಮಾನ, ಅಪನಂಬಿಕೆಗಳಿಗೆ ಅವಕಾಶ ಆಗದಂತೆ ಸುಧಾರಣಾ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಈ ನಿರ್ಣಯಗಳು ಈಗಾಗಲೇ ಹೊರಡಿಸಿರುವ ಎಲ್ಲ ನೇಮಕಾತಿ ಅಧಿಸೂಚನೆಗಳು ಮತ್ತು ಇನ್ನು ಮುಂದೆ ಹೊರಡಿಸುವ ಅಧಿಸೂಚನೆಗಳಿಗೆ ಅನ್ವಯ ಆಗಲಿದೆ.

ಕೆಪಿಎಸ್‌ಸಿ ಇತ್ತೀಚೆಗೆ ನಡೆಸಿದ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಎತ್ತಿರುವ ಅನುಮಾನಗಳು, ಮಾಡಿರುವ ಆರೋಪಗಳಿಗೆ ತಡೆ ನೀಡುವ ಉದ್ದೇಶದಿಂದ ಪರೀಕ್ಷಾ ವ್ಯವಸ್ಥೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪರೀಕ್ಷಾ ನಿಯಂತ್ರಕ ಎಚ್‌. ಪ್ರಸನ್ನ ಅವರು ಮುಂದಿಟ್ಟಿದ್ದ ನಾಲ್ಕು ಪ್ರಸ್ತಾವಗಳಿಗೆ ಆಯೋಗ ಅನುಮೋದನೆ ನೀಡಿದೆ.

ಕೆಪಿಎಸ್‌ಸಿ ನಡೆಸುವ ಶೇ 99ರಷ್ಟು ಪರೀಕ್ಷೆಗಳು‌ ಒಎಂಆರ್‌ ಶೀಟ್ ಆಧಾರಿತ. ಗೆಜೆಟೆಡ್‌ ಪ್ರೊಬೇಷನರಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಸೇರಿದಂತೆ ಕೆಲವು ಹುದ್ದೆಗಳ ನೇಮಕಾತಿಗೆ ಒಎಂಆರ್‌ ಆಧಾರಿತ ಪೂರ್ವಭಾವಿ ಪರೀಕ್ಷೆ, ನಂತರ ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ (ವ್ಯಕ್ತಿತ್ವ ಪರೀಕ್ಷೆ) ನಡೆಸಲಾಗುತ್ತದೆ.

ಹಣ ಕೊಟ್ಟ ಅಭ್ಯರ್ಥಿಗಳ ಒಎಂಆರ್ ಶೀಟ್‌ ತಿರುಚಿ ಹುದ್ದೆಗೆ ಆಯ್ಕೆ ಮಾಡಲಾಗುತ್ತಿದೆ ಎನ್ನುವುದು ಅಭ್ಯರ್ಥಿಗಳ ಆರೋಪ. 2024ನೇ ಸಾಲಿನಲ್ಲಿ ಎಇಇ ಹುದ್ದೆಗಳ ನೇಮಕಾತಿಯಲ್ಲಿ ಒಎಂಆರ್‌ ಶೀಟ್‌ ತಿರುಚಲಾಗಿದೆ ಎಂದು ಕೆಪಿಎಸ್‌ಸಿ ಆಂತರಿಕ ಸಮಿತಿ ತನ್ನ ವರದಿಯಲ್ಲಿ ಹೇಳಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಅಭ್ಯರ್ಥಿಗಳು ವಿಶ್ವಾಸ ಕಳೆದುಕೊಳ್ಳಲು ಇದು ಕಾರಣವಾಗಿದೆ. ಒಎಂಆರ್ ಶೀಟ್‌ನಲ್ಲಿ ಸರಿ ಉತ್ತರ ಶೇಡ್‌ ಮಾಡಬೇಕಿರುವ ವೃತ್ತಗಳನ್ನು ಖಾಲಿ ಬಿಟ್ಟು, ಮಧ್ಯವರ್ತಿಗಳ ಮೂಲಕ ಭರ್ತಿ ಮಾಡಿಕೊಂಡು ಆಯ್ಕೆಯಾಗುತ್ತಾರೆ ಎನ್ನುವ ಶಂಕೆಯೂ ಇದೆ. ಇದಕ್ಕೆ ತಡೆ ನೀಡಲು, ಒಎಂಆರ್‌ ಶೀಟ್‌ನಲ್ಲಿ ನಾಲ್ಕು ವೃತ್ತಗಳ ಜೊತೆಗೆ 5ನೇ ವೃತ್ತ ಅಳವಡಿಸಬೇಕು. ಪರೀಕ್ಷಾ ಸಮಯ ಮುಕ್ತಾಯದ ಕೊನೆಯ ಬೆಲ್‌ ನಂತರ 5 ನಿಮಿಷ ಹೆಚ್ಚುವರಿ ಸಮಯ ನೀಡಿ, ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಅಭ್ಯರ್ಥಿ ಕಡ್ಡಾಯವಾಗಿ 5ನೇ ವೃತ್ತ ಶೇಡ್ ಮಾಡಲೇಬೇಕು. ಈ ಬಗ್ಗೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ನಿಗಾ ವಹಿಸಬೇಕು ಎಂಬ ಪ್ರಸ್ತಾವಕ್ಕೆ ಕೆಪಿಎಸ್‌ಸಿ ಅನುಮೋದನೆ ನೀಡಿದೆ.

ಪರೀಕ್ಷೆ ಮುಗಿದ ದಿನವೇ ಅಭ್ಯರ್ಥಿಗಳ ಒಎಂಆರ್‌ ಶೀಟ್‌ ಸ್ಕ್ಯಾನ್‌ ಮಾಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕೆಂಬ ಪ್ರಸ್ತಾವಕ್ಕೂ ಕೆಪಿಎಸ್‌ಸಿ ಒಪ್ಪಿಗೆ ನೀಡಿದೆ. ಇದರಿಂದ ಒಎಂಆರ್ ಶೀಟ್ ನೋಡುವುದಕ್ಕೆ ಎಲ್ಲರಿಗೂ ಮುಕ್ತ ಅವಕಾಶ ನೀಡಿದಂತಾಗುತ್ತದೆ. ಒಎಂಆರ್ ಶೀಟ್ ತಿದ್ದಿದ್ದಾರೆ ಎನ್ನುವ ಆರೋಪಗಳಿಗೂ ಉತ್ತರ ಸಿಗಲಿದೆ. ಸ್ಕ್ಯಾನಿಂಗ್ ಕೆಲಸವನ್ನು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಆರಂಭಿಸಬೇಕು. ಒಎಂಆರ್‌ ಶೀಟ್‌ಗಳನ್ನು ಗುಪ್ತವಾಗಿ ಇಟ್ಟುಕೊಂಡರೆ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆ ಅವಕಾಶ ಆಗದಂತೆ ಮಾಡಲು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿ ಸಾರ್ವಜನಿಕಗೊಳಿಸಬೇಕು ಎಂದೂ ಪರೀಕ್ಷಾ ನಿಯಂತ್ರಕರು ಸೂಚಿಸಿದ್ದರು.

ಒಎಂಆರ್‌ ಶೀಟ್‌ಗಳನ್ನು ಅಪ್‌ಲೋಡ್‌ ಮಾಡಿದ ಬೆನ್ನಲ್ಲೇ ಸರಿ ಉತ್ತರಗಳನ್ನು (ಕೀ ಉತ್ತರ) ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಈಗ ಸರಿ ಉತ್ತರ ಪ್ರಕಟಿಸಲು ಆಯೋಗದ ಅನುಮೋದನೆ ಅಗತ್ಯ. ಸರಿ ಉತ್ತರ ಬಹಿರಂಗಪಡಿಸುವುದು ವಿಳಂಬ ಆದಷ್ಟು ಫಲಿತಾಂಶ ಪ್ರಕಟಣೆ ವಿಳಂಬ ಆಗಲಿದೆ.

ಫಲಿತಾಂಶ ಪ್ರಕಟಿಸುವಾಗ ಪರೀಕ್ಷೆಗೆ ಹಾಜರಾದ ಎಲ್ಲ ಅಭ್ಯರ್ಥಿಗಳ ಅಂಕಗಳನ್ನು (ಸಂದರ್ಶನ ಇರುವ ನೇಮಕಾತಿಗಳಲ್ಲಿ ಮುಖ್ಯ ಪರೀಕ್ಷೆಯ ಅಂಕ ಹೊರತುಪಡಿಸಿ) ಅಭ್ಯರ್ಥಿಯ ನೋಂದಣಿ ಸಂಖ್ಯೆ, ಹೆಸರು, ಕೆಟಗರಿ (ಮೀಸಲಾತಿ), ಅಂಕದ ಸಹಿತ ಪಿಡಿಎಫ್‌ ಸ್ವರೂಪದಲ್ಲಿ ಬಿಡುಗಡೆ ಮಾಡಬೇಕು. ಗೆಜೆಟೆಡ್‌ ಪ್ರೊಬೇಷನರಿ, ಎಇಇ ಹುದ್ದೆಗಳ ನೇಮಕಾತಿಗೆ ಸಂದರ್ಶನ ಇರುವುದರಿಂದ ಮುಖ್ಯ ಪರೀಕ್ಷೆಯ ಅಂಕ ಬಹಿರಂಗವಾದರೆ ಸಂದರ್ಶನದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಆದರೆ, ಈ ಹುದ್ದೆಗಳಿಗೆ ನಡೆಯುವ ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಬಹಿರಂಗಪಡಿಸಬೇಕು. ಈ ಕ್ರಮದಿಂದ ಯಾವ ಅಭ್ಯರ್ಥಿ ಎಷ್ಟು ಅಂಕ ಗಳಿಸಿದ್ದಾರೆಂದು ಎಲ್ಲರೂ ತಿಳಿಯಲು ಸಾಧ್ಯವಾಗುತ್ತದೆ ಎಂದೂ ತಮ್ಮ ಪ್ರಸ್ತಾವದಲ್ಲಿ ಪರೀಕ್ಷಾ ನಿಯಂತ್ರಕರು ಪ್ರತಿಪಾದಿಸಿದ್ದರು.

‘ಈ ನಾಲ್ಕೂ ಪ್ರಸ್ತಾವಗಳನ್ನು ಅಳವಡಿಸಲು ಲಿಖಿತವಾಗಿ ಅನುಮತಿ ನೀಡಿದರೆ ಮಾತ್ರ ಪರೀಕ್ಷಾಪೂರ್ವ ಸಿದ್ಧತೆಗಳನ್ನು ಆರಂಭಿಸುವುದಾಗಿ ಪರೀಕ್ಷಾ ನಿಯಂತ್ರಕರು ಆಯೋಗಕ್ಕೆ ತಿಳಿಸಿದ್ದರು. ಪರೀಕ್ಷಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣ ಆಗಬಹುದಾದ ಈ ಪ್ರಸ್ತಾವಗಳಿಗೆ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ’ ಎಂದು ಕೆಪಿಎಸ್‌ಸಿ ಸದಸ್ಯರೊಬ್ಬರು ಮಾಹಿತಿ ನೀಡಿದರು.

ಆಯೋಗ ಒಪ್ಪಿದ 4 ಪ್ರಸ್ತಾವಗಳು

* ಒಎಂಆರ್ ಶೀಟ್‌ನಲ್ಲಿ 5ನೇ ವೃತ್ತ ಅಳವಡಿಕೆ. ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ 5ನೇ ವೃತ್ತ ಶೇಡ್ ಮಾಡಬೇಕು

* ಪರೀಕ್ಷೆ ಮುಗಿದ ತಕ್ಷಣ ಎಲ್ಲ ಅಭ್ಯರ್ಥಿಗಳ ಒಎಂಆರ್ ಶೀಟ್ ಸ್ಕ್ಯಾನಿಂಗ್ ಮತ್ತು ವೆಬ್‌ಸೈಟ್‌ಗೆ ಅಪ್‌ಲೋಡ್

* ಪರೀಕ್ಷೆ ಮುಗಿದ ತಕ್ಷಣ ಸರಿ ಉತ್ತರ ಪ್ರಕಟ (ಈಗ ಆಯೋಗದ ಅನುಮೋದನೆ ಅಗತ್ಯ) 

* ಫಲಿತಾಂಶ ಪ್ರಕಟಿಸುವಾಗ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳ ಹೆಸರು ನೋಂದಣಿ ಸಂಖ್ಯೆ ಕೆಟಗರಿ ಸಹಿತ ಅಂಕ ಬಹಿರಂಗ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ