
ಬೆಂಗಳೂರು| ಶಿವರಾಮ ಕಾರಂತ ಬಡಾವಣೆ: 3,200 ರೈತರಿಗೆ ನಿವೇಶನ ಹಂಚಿಕೆ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿರುವ ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ 3,200 ರೈತರಿಗೆ ಪರಿಹಾರ ರೂಪದಲ್ಲಿ 18,399 ನಿವೇಶನ ಹಂಚಿಕೆ ಮಾಡಲಾಯಿತು. ಇದೇ ವೇಳೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ನಗರದ ನೆಹರೂ ತಾರಾಲಯದಲ್ಲಿ ಬಿಡಿಎ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂ ಮಾಲೀಕರಿಗೆ 3 ಕೋಟಿ ಚದರ ಅಡಿ ವಿಸ್ತೀರ್ಣದ ಜಾಗವನ್ನು ಸಿಇಜಿ ಯುಎಲ್‌ಎಂಎಸ್ ಸಾಫ್ಟ್‌ವೇರ್ ಮೂಲಕ ಹಂಚಿಕೆ ಮಾಡಲಾಯಿತು. 20 ಭೂ ಮಾಲೀಕರಿಗೆ ಡಿ.ಕೆ.ಶಿವಕುಮಾರ್ ಅವರು ಸಾಂಕೇತಿಕವಾಗಿ ಹಂಚಿಕೆ ಪತ್ರ ವಿತರಿಸಿದರು. ಉಳಿದವರಿಗೆ ಕೌಂಟರ್‌ಗಳಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು.
ಬಡಾವಣೆಯಲ್ಲಿ 2,815 ನಿವೇಶನಗಳ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸುವ ತಂತ್ರಾಂಶಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು. ಪ್ರತಿ ಚದರ ಅಡಿಗೆ ₹6,000 ದರ ನಿಗದಿಪಡಿಸಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ‘ಮೂರು ವರ್ಷಗಳಿಂದಲೇ ಪರಿಹಾರ ನೀಡುವ ಪ್ರಯತ್ನ ಮಾಡಿ ಅರ್ಜಿಗಳನ್ನು ಕರೆಯಲಾಗಿತ್ತು. ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಶಿವರಾಮ ಕಾರಂತ ಬಡವಾಣೆಯ ಭೂ ಮಾಲೀಕರಿಗೆ ಪರಿಹಾರ ನೀಡುವುದು ತಡವಾಯಿತು. ನಿವೇಶನ ಹಂಚಿಕೆಗೆ ಅರ್ಜಿ ಹಾಕಲು ಆಹ್ವಾನ ನೀಡಲು ಮುಂದಾದಾಗ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದರಿಂದ ಸರ್ಕಾರಕ್ಕೆ ಪ್ರತಿ ವರ್ಷ ₹1000 ಕೋಟಿ ನಷ್ಟವಾಗಿದೆ’ ಎಂದು ತಿಳಿಸಿದರು.
‘ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಮಲ್ಲೇಶ್ವರ, ಚಾಮರಾಜಪೇಟೆ, ಜಯನಗರ, ಇಂದಿರಾನಗರದ ಸ್ವಲ್ಪ ಭಾಗ ಬಿಟ್ಟರೆ ಬೇರೆ ಪ್ರದೇಶಗಳು ಯೋಜಿತ ಬಡಾವಣೆಗಳಲ್ಲ. ಎಲ್ಲಿಯೂ ನೂರು ಅಡಿ ರಸ್ತೆಗಳಿಲ್ಲ. ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 8 ಲಕ್ಷ ಇದ್ದ ಬೆಂಗಳೂರಿನ ಜನಸಂಖ್ಯೆ ಈಗ ಒಂದೂವರೆ ಕೋಟಿ ಆಗಿದೆ. 60 ಲಕ್ಷ ಜನ ನಿತ್ಯ ಬೆಂಗಳೂರಿಗೆ ಓಡಾಡುತ್ತಾರೆ ಎಂದರು.
ಬೆಂಗಳೂರು ಸುತ್ತಮುತ್ತಲಿನ ಕೋಲಾರ, ರಾಮನಗರ, ಚನ್ನಪಟ್ಟಣ, ತುಮಕೂರು, ಮಾಗಡಿ, ಕುಣಿಗಲ್, ಮದ್ದೂರು, ಮಂಡ್ಯದಿಂದ 30-50 ಸಾವಿರ ಜನ ಬೆಂಗಳೂರು ಸೇರಿದ್ದಾರೆ. ಈಶಾನ್ಯ ರಾಜ್ಯಗಳಿಂದ 11 ಲಕ್ಷ ಜನ ಉದ್ಯೋಗ ಅರಸಿ ಬಂದಿದ್ದಾರೆ. 1.40 ಕೋಟಿ ವಾಹನಗಳಿವೆ. ರಸ್ತೆಗಳು ಮಾತ್ರ ಹಾಗೇ ಇವೆ. ಅಕ್ಕಪಕ್ಕದ ಕಟ್ಟಡಗಳನ್ನು ಒಡೆದು ಈ ರಸ್ತೆಗಳನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ’ ಎಂದರು.
ಭೂಮಿ ಮಾರಾಟ ಮಾಡಬೇಡಿ: ‘ರೈತರು ಅಲೆಯಬಾರದು, ಲಂಚ ಕೊಡಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಮ್ಮ ಭೂಮಿಯಲ್ಲಿಯೇ ನಿವೇಶನಗಳನ್ನು ಕೋರಿದವರಿಗೆ ಅಲ್ಲಿಯೇ ನೀಡಲಾಗುತ್ತಿದೆ. ಆದರೆ, ನಿವೇಶನಗಳನ್ನು ಮಾರಿಕೊಳ್ಳಬೇಡಿ. ಕಷ್ಟ ಎಲ್ಲರಿಗೂ ಬರುತ್ತದೆ. ನಂತರದ ದಿನಗಳಲ್ಲಿ ಈ ನಿವೇಶನಗಳ ಬೆಲೆ ನೀವು ಊಹಿಸಲು ಸಾಧ್ಯವಿಲ್ಲ’ ಎಂದು ಶಿವಕುಮಾರ್ ಕಿವಿಮಾತು ಹೇಳಿದರು.
ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಮಾತನಾಡಿ, ‘18 ವರ್ಷದ ಹಿಂದೆ ಭೂಮಿ ಕಳೆದುಕೊಂಡವರ ನೋವು ಅರ್ಥವಾಗುತ್ತದೆ. ರೈತರಿಗೆ ಸಿಗಬೇಕಾದ ನಿವೇಶನ ಸಿಗುತ್ತದೆ. ಯಾವುದೇ ಕಾರಣಕ್ಕೆ ಮಧ್ಯವರ್ತಿಗಳನ್ನು ಹತ್ತಿರ ಸೇರಿಸಬೇಡಿ. ಪ್ರಾಧಿಕಾರವೇ ಮಧ್ಯಸ್ಥಿಕೆ ವಹಿಸಲಿದೆ.
ಬಡಾವಣೆಗೆ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ 60:40 ಅನುಪಾತದಲ್ಲಿ ಪರಿಹಾರ ನೀಡಲಾಗುತ್ತಿದೆ. ಒಂದು ಎಕರೆ ಭೂಮಿ ಬಿಟ್ಟುಕೊಟ್ಟ ರೈತರಿಗೆ 9,583 ಚದರ ಅಡಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಸಾಧ್ಯವಾದಷ್ಟು ಅವರ ಸರ್ವೆ ನಂಬರ್‌ಗಳಲ್ಲಿಯೇ ನಿವೇಶನ ನೀಡಲು ಆದ್ಯತೆ ನೀಡಲಾಗಿದೆ. ಒಂದು ವೇಳೆ ಅಲ್ಲಿ ಸಾರ್ವಜನಿಕ ಮೌಲಸೌಕರ್ಯಗಳಿದ್ದರೆ ಸಮೀಪದಲ್ಲಿ ನಿವೇಶನ ನೀಡಲಾಗುತ್ತದೆ’ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಮುನಿರಾಜು, ಬಿಡಿಎ ಮಾಜಿ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಭಾಗವಹಿಸಿದ್ದರು.
ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ
‘ಸರ್ಕಾರದ ‘ಭೂ ಗ್ಯಾರಂಟಿ’ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಸರ್ಕಾರಕ್ಕಾಗಿ ತಮ್ಮ ಆಸ್ತಿಯನ್ನು ತ್ಯಾಗ ಮಾಡುವ ಎಲ್ಲರಿಗೂ ಇದು ಅನ್ವಯವಾಗಲಿದೆ. ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಅವರು ಹೊಂದಿರುವ ಭೂಮಿಯಲ್ಲಿಯೇ ಅವರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಬೇಕು. ಇದು ರಾಜ್ಯದ ಎಲ್ಲಾ ಭೂ ಮಾಲೀಕರಿಗೂ ಅನ್ವಯವಾಗಬೇಕು’ ಎಂದು ಶಿವಕುಮಾರ್ ಹೇಳಿದರು.
‘ಫಲಾನುಭವಿಗಳ ಭಾವಚಿತ್ರ ಸೇರಿದಂತೆ ಎಲ್ಲ ಅಗತ್ಯ ವಿವರಗಳನ್ನು ಒಳಗೊಂಡ ಸೂಕ್ತ ದಾಖಲೆಗಳನ್ನು ನೀಡಲು ವ್ಯವಸ್ಥೆ ಮಾಡುತ್ತಿದ್ದೇವೆ. ಬಿ ಖಾತಾದಿಂದ ಎ ಖಾತಾಗೆ ಪರಿವರ್ತಿಸುವಾಗಲೂ ಕಾನೂನು ಬದ್ಧತೆ ಇರಬೇಕು. ದಾಖಲೆಗಳು ಕಾನೂನು ಬದ್ಧವಾಗಿರಬೇಕು. ಬೋಗಸ್ ಇದ್ದರೆ ನೋಂದಣಿ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಕಾನೂನಿನ ಚೌಕಟ್ಟಿನೊಳಗೆ ಅವರಿಗೆ ಸೂಕ್ತ ದಾಖಲೆಗಳನ್ನು ಒದಗಿಸಲು ವ್ಯವಸ್ಥೆ ಮಾಡಿದ್ದೇವೆ. ಏಕೆಂದರೆ ಭವಿಷ್ಯದಲ್ಲಿ ಅವರ ಆಸ್ತಿ ವರ್ಗಾವಣೆ ಮಾಡಬೇಕಾಗಬಹುದು ಸಾಲ ಪಡೆಯಬೇಕಾಗಬಹುದು ಅಥವಾ ಕುಟುಂಬದ ಸದಸ್ಯರ ನಡುವೆ ಆಸ್ತಿಯನ್ನು ಹಂಚಿಕೆ ಮಾಡಬೇಕಾಗಬಹುದು. ಇಂತಹ ಹಲವು ಸಾಧ್ಯತೆಗಳಿವೆ. ಅವರ ಹಕ್ಕುಗಳು ಮತ್ತು ಆಸ್ತಿಗಳು ಸುರಕ್ಷಿತವಾಗಿರುವುದನ್ನು ಸರ್ಕಾರವು ಖಚಿತಪಡಿಸಿಕೊಳ್ಳಬೇಕು’ ಎಂದರು.
ಒಂದೇ ನಿವೇಶನ ಇಬ್ಬರಿಗೆ ಹಂಚಿಕೆಯಿಲ್ಲ: ಹ್ಯಾರಿಸ್ ‘ಹಳೇ ಬಿಡಿಎ ಅಲ್ಲ. ಪ್ರಾಧಿಕಾರವು ಇನ್ನು ಮುಂದೆ ಒಂದೇ ನಿವೇಶನವನ್ನು ಇಬ್ಬರಿಗೆ ಹಂಚಿಕೆ ಮಾಡುವುದಿಲ್ಲ. ಇ-ಗವರ್ನೆನ್ಸ್ ಮೂಲಕ ಎಲ್ಲವೂ ಆನ್‌ಲೈನ್ ಮಾಡಲಾಗಿದೆ. ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ರೈತರು ದಾಖಲೆಗಳನ್ನು ತಂದು ನಿವೇಶನ ಪಡೆದುಕೊಳ್ಳಬೇಕು. ಉತ್ತರ ಹಾಗೂ ಪೂರ್ವ ದಿಕ್ಕಿನಲ್ಲಿಯೇ ಎಲ್ಲರಿಗೂ ನಿವೇಶನ ನೀಡಲು ಆಗುವುದಿಲ್ಲ. ಸ್ಮಶಾನ ಜಾಗವನ್ನು ಅವರಿಗೆ ಬಿಟ್ಟುಕೊಡಲು ಕ್ರಮ ವಹಿಸಲಾಗುವುದು’ ಎಂದು ಎನ್.ಎ.ಹ್ಯಾರಿಸ್ ಹೇಳಿದರು.
₹16,419 ಕೋಟಿ ವೆಚ್ಚದಲ್ಲಿ ಬಡಾವಣೆ
ನಗರದ ಉತ್ತರ ಭಾಗದಲ್ಲಿರುವ ಪ್ರತಿಷ್ಠಿತ ಡಾ.ಶಿವರಾಮ ಕಾರಂತ (ಎಸ್.ಕೆ) ಬಡಾವಣೆಯನ್ನು 3837 ಎಕರೆ 5.25 ಗುಂಟೆ ಜಮೀನಿನಲ್ಲಿ ₹16419.89 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು 24714 ನಿವೇಶನ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ 20X30 30X40 60X40 50X80 ಚದರ ಅಡಿ ಅಳತೆಯ ನಿವೇಶನಗಳು ಸೇರಿವೆ. ಆವಲಹಳ್ಳಿ ರಾಮಗೊಂಡನಹಳ್ಳಿ ಜಾರಕಬಂಡೆ ಸೇರಿದಂತೆ ಒಟ್ಟು 17 ಹಳ್ಳಿಗಳನ್ನು ಒಳಗೊಂಡಿರುವ ಈ ಬಡಾವಣೆ ದಶಕಕ್ಕೂ ಹೆಚ್ಚು ಕಾನೂನು ಸಂಕೋಲೆಯಲ್ಲಿ ಸಿಲುಕಿತ್ತು.
‘ರೈತರ ಮಕ್ಕಳ’ ಕಾಲದಲ್ಲಿಯೇ ಅಧಿಸೂಚನೆ
‘ನಾನು ಬರುವ ಮೊದಲು ಬಿಡಿಎ ಎಂದರೆ ಬ್ರೋಕರ್ ಅಭಿವೃದ್ಧಿ ಪ್ರಾಧಿಕಾರವಾಗಿತ್ತು. 2008ರಲ್ಲಿಯೇ ಶಿವರಾಮ ಕಾರಂತ ಬಡಾವಣೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದರು.
ತಮ್ಮ ಭೂಮಿ ಕಳೆದುಕೊಳ್ಳುವಾಗ ರೈತರು ಲಂಚ ಕೊಡಬೇಕಾದ ಪರಿಸ್ಥಿತಿ ಇತ್ತು. ಆಗ ‘ರೈತರ ಮಕ್ಕಳು’ ಎಂದು ಹೇಳಿಕೊಳ್ಳುವವರ ಕಾಲದಲ್ಲಿಯೇ ಅಧಿಸೂಚನೆ ಹೊರಡಿಸಿದ್ದು ಈಗ ಮಾತನಾಡಲು ಅವರಿಗೆ ಧಮ್ ಇಲ್ಲವೇ? ಬೆಂಗಳೂರಿನ ಸುತ್ತಮುತ್ತ ಅವರ ಜಮೀನುಗಳಿವೆ. ಅವುಗಳನ್ನು ಯೋಜನೆಗಳ ಸ್ವಾಧೀನಕ್ಕೆ ಕೊಟ್ಟಿದ್ದಾರೆಯೇ? ಅವರ ಜಮೀನನ್ನು ಮಾತ್ರ ಬಿಡಿಸಿಕೊಂಡರು. ಅವರದ್ದು ಎಷ್ಟು ಎಕರೆ ಇದೆ ಎಂಬುದು ನನಗೆ ಅರಿವಿದೆ’ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರನ್ನು ಕುಟುಕಿದರು.