
Sandalwood: ಉಪೇಂದ್ರ ಇನ್ನು ‘ನೆಕ್ಸ್ಟ್ ಲೆವೆಲ್’
ತರುಣ್ ಶಿವಪ್ಪ ನಿರ್ಮಾಣ ಮಾಡುತ್ತಿರುವ ‘ನೆಕ್ಸ್ಟ್ ಲೆವೆಲ್’ ಸಿನಿಮಾದ ಚಿತ್ರೀಕರಣಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು.
ಉಪೇಂದ್ರ ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿ ಮಾಲಾಶ್ರೀ ಪುತ್ರಿ ‘ಕಾಟೇರ’ ಖ್ಯಾತಿಯ ಆರಾಧನಾ ನಟಿಸುತ್ತಿದ್ದಾರೆ. ‘ನಮ್ ಏರಿಯಾಲ್ ಒಂದಿನ’, ‘ಅರ್ದಂಬರ್ಧ ಪ್ರೇಮಕಥೆ’ ನಿರ್ದೇಶಿಸಿದ್ದ ಅರವಿಂದ್ ಕೌಶಿಕ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಮೊದಲ ದೃಶ್ಯಕ್ಕೆ ಉಪೇಂದ್ರ ಅವರ ಪುತ್ರ ಆಯುಷ್ ಕ್ಲ್ಯಾಪ್ ಮಾಡಿದ್ದು ವಿಶೇಷವಾಗಿತ್ತು. ಪ್ರಿಯಾಂಕ ಉಪೇಂದ್ರ ಹಾಗೂ ಮಾಲಾಶ್ರೀ ಈ ವೇಳೆ ಉಪಸ್ಥಿತರಿದ್ದರು.
‘ಕಾಟೇರ’ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆರಾಧನಾ ಈ ಚಿತ್ರದಲ್ಲಿ ಬೋಲ್ಡ್ ಹಾಗೂ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದೆ ಚಿತ್ರತಂಡ. ಮುಖ್ಯಮಂತ್ರಿಯ ಮಗಳ ಪಾತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಉಪೇಂದ್ರ ಜೊತೆಗೆ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ವಿಕ್ಟರಿ-2’ ಮತ್ತು ‘ಛೂ ಮಂತರ್’ನಂತಹ ಸಿನಿಮಾಗಳನ್ನು ನಿರ್ಮಿಸಿರುವ ತರುಣ್ ಶಿವಪ್ಪ ತಮ್ಮದೇ ತರುಣ್ ಸ್ಟುಡಿಯೋಸ್‌ನಡಿ ಈ ಸಿನಿಮಾ ನಿರ್ಮಿಸಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಚಿತ್ರವು ನಿರ್ಮಾಣವಾಗಲಿದ್ದು, ಉಪೇಂದ್ರ ಅವರ ಕ್ಲಾಸಿಕ್ ಸಿನಿಮಾಗಳಾದ ‘ಎ’, ‘ಉಪೇಂದ್ರ’ ಮತ್ತು ‘ರಕ್ತಕಣ್ಣೀರು’ ಶೈಲಿಯಲ್ಲಿ ಈ ಸಿನಿಮಾವಿರಲಿದೆ. ಇಂದಿನ ಪೀಳಿಗೆಗೆ ತಕ್ಕಂತೆ ಉಪ್ಪಿ ಅವರ ಶೈಲಿಯ ಪಾತ್ರವನ್ನು ರೂಪಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-51-1407995414