PV Web Exclusive: ಜಕ್ಕಲಿ ಕಂಡ ಗಾಂಧಿ: ಇಂದಿಗೂ ಸ್ಮರಣೆ, ಆರಾಧನೆ

PV Web Exclusive: ಜಕ್ಕಲಿ ಕಂಡ ಗಾಂಧಿ: ಇಂದಿಗೂ ಸ್ಮರಣೆ, ಆರಾಧನೆ

PV Web Exclusive: ಜಕ್ಕಲಿ ಕಂಡ ಗಾಂಧಿ: ಇಂದಿಗೂ ಸ್ಮರಣೆ, ಆರಾಧನೆ

ಅದು 1934ರ ಮಾರ್ಚ್ 3ನೇ ತಾರೀಕು. ಅದೊಂದು ಸುದ್ದಿ, ಗದಗ ಜಿಲ್ಲೆಯಾದ್ಯಂತ ಭಾರಿ ಕಂಪನ ಉಂಟುಮಾಡಿತ್ತು. ಇಂತಹುದೊಂದು ದಿನ–ಕ್ಷಣಕ್ಕೆ ನಾವು ಸಾಕ್ಷಿಯಾಗುತ್ತೇವೆ, ಸತ್ಯ–ಅಹಿಂಸೆಯನ್ನೇ ದೇಹದ ಕಣ ಕಣದಲ್ಲಿ ತುಂಬಿಕೊಂಡಿದ್ದ ಮಹನೀಯನ ಕಾಣುತ್ತೇವೆಂದು ಇಲ್ಲಿನ ಜನರು ಕನಸಲ್ಲೂ ಊಹಿಸಿರಲಿಲ್ಲ. ಸರಳತೆಯ ಸಾಕಾರ ಮೂರ್ತಿಯನ್ನು ಅಂದು ಕಣ್ಣೆದುರೇ ಕಂಡವರಿಗೆ, ಇಂದಿಗೆ ಆ ಘಟನೆಯನ್ನು ಕವಿ ನಿಮಿರಿಸಿ ಕೇಳುವ ಮಂದಿಗೆ ಮನದಲ್ಲಿ ಉಳಿದುದೊಂದೇ ‘ಕೌತುಕ’.

ಹೌದು, ಮಹಾತ್ಮ ಗಾಂಧಿ ಅವರು ಅಂದು ಗದಗ ಜಿಲ್ಲೆಯ ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಎಲ್ಲರಲ್ಲೂ ಹಚ್ಚಿ, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿರ್ಮೂಲನೆ, ಹರಿಜನ ಕಲ್ಯಾಣ, ಖಾದಿ ಹಾಗೂ ಸ್ವಾವಲಂಬನೆಯ ಸಂದೇಶವನ್ನು ಜನರ ಮನಸ್ಸಿನಲ್ಲಿ ಬಿತ್ತಿದರು. ಅಂದಿನ ದಿನ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ಕೇಳುಗರಿಗೆ, ಓದುಗರಿಗೆ ಆ ಘಟನೆ ಇಂದಿಗೂ ರೋಮಾಂಚನ ಮೂಡಿಸುತ್ತದೆ. 

ವಾಹನಗಳ ಸೌಲಭ್ಯವಿಲ್ಲದ ಆ ಕಾಲದಲ್ಲೂ ಗದಗ ಜಿಲ್ಲೆಯ ಜನರಷ್ಟೇ ಅಲ್ಲದೆ ವಿಜಯಪುರ, ರಾಯಚೂರು, ಧಾರವಾಡ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಜನರು ಪಾದಯಾತ್ರೆ, ಎತ್ತಿನಗಾಡಿಗಳಲ್ಲಿ ಜಕ್ಕಲಿಗೆ ಬಂದಿದ್ದರು. 20 ಸಾವಿರಕ್ಕೂ ಹೆಚ್ಚು ಜನರು ಅಂದಿನ ಕಾರ್ಯಕ್ರಮದಲ್ಲಿ ಗಾಂಧಿ ಅವರ ದೇಶಭಕ್ತಿಯ ನುಡಿಗಳನ್ನು ಆಲಿಸಿದ್ದರು.

ಆಡಂಬರ ಬೇಡ ಎಂಬ ಗಾಂಧಿ ನುಡಿಯನ್ನು ಪಾಲಿಸಿ, ಹೊಲದಲ್ಲಿ ಹುಲ್ಲಿನಿಂದ ಬೃಹತ್‌ ಮಂಟಪವನ್ನು ಗ್ರಾಮಸ್ಥರೇ ನಿರ್ಮಿಸಿದ್ದರು. ಅದರಲ್ಲಿ ಕುಳಿತು ಗಾಂಧೀಜಿ ಅಸ್ಪೃಶ್ಯತಾ ನಿವಾರಣೆ, ಸ್ವಾತಂತ್ರ್ಯ ಹೋರಾಟ, ಮದ್ಯಪಾನ ನಿರ್ಮೂಲನೆ ಸೇರಿದಂತೆ 14 ವಿಚಾರಗಳ ಕುರಿತು ಮಾತುಗಳನ್ನಾಡಿದ್ದರು. ಅವರ ಮಾತುಗಳನ್ನು ಗಂಗಾಧರರಾವ್ ಕನ್ನಡಕ್ಕೆ ಅನುವಾದಿಸಿದ್ದರು. ಈ ಮಂಟಕಕ್ಕೆ ವ್ಯಾಸ ಮಂಟಪವೆಂದು ಹೆಸರಿಡಲಾಗಿತ್ತು.

ಸುಮಾರು 35 ನಿಮಿಷಗಳ ಗಾಂಧೀಜಿ ಭಾಷಣದಿಂದ ಪ್ರೇರಣೆಗೊಂಡ ಯುವಕರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳಲು ದೀಕ್ಷೆ ಕೈಗೊಂಡರು. ಆನಂತರ, ಜಕ್ಕಲಿಯಿಂದ ಗದಗ, ಅಲ್ಲಿಂದ ಹುಬ್ಬಳ್ಳಿಗೆ ತೆರಳಿ ಗಾಂಧೀಜಿ ವಾಸ್ತವ್ಯ ಮಾಡಿದರು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.

ಅಪ್ರತಿಮ ಹೋರಾಟಗಾರ ಅಂದಾನಪ್ಪ ದೊಡ್ಡಮೇಟಿ

ಗಾಂಧೀಜಿ ಅವರನ್ನು ಜಕ್ಕಲಿ ಗ್ರಾಮಕ್ಕೆ ಆಹ್ವಾನಿಸಿದ್ದೇ ಅಂದಾನಪ್ಪ ದೊಡ್ಡಮೇಟಿ ಎಂದು ಹಲವರು ಹೇಳುತ್ತಾರೆ.

‘ಕಿತ್ತೂರು ರಾಣಿ ಚನ್ನಮ್ಮ, ಛತ್ರಪತಿ ಶಿವಾಜಿ ಮಹಾರಾಜರ ನಾಟಕಗಳನ್ನು ನೋಡಿ, ಅದರಿಂದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿ. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಕಾರಣ ಆರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಆಗ, ಸ್ವತಃ ಗಾಂಧೀಜಿ, ಅಂದಾನಪ್ಪ ಅವರ ತಾಯಿಗೆ ಪತ್ರ ಬರೆದಿದ್ದರು’ ಎಂದು ಅಂದಾನಪ್ಪ ಅವರ ಮೊಮ್ಮಗ ರವೀಂದ್ರನಾಥ ದೊಡ್ಡಮೇಟಿ ಸ್ಮರಿಸುತ್ತಾರೆ.

ಮೊದಲು ತಮ್ಮ ರೇಷ್ಮೆ ವಸ್ತ್ರಗಳನ್ನು ಸುಡುವ ಮೂಲಕ ಸ್ವದೇಶಿ ಚಳವಳಿ ಆರಂಭಿಸಿದ ಅಂದನಾಪ್ಪ ಅವರು ಗಾಂಧೀಜಿ ಕರೆ ನೀಡಿದ ಹೋರಾಟಗಳನ್ನು ಸ್ಥಳೀಯವಾಗಿ ಸಂಘಟಿಸುತ್ತಿದ್ದರು. ಅಖಂಡ ಧಾರವಾಡ ಜಿಲ್ಲೆ ಸುತ್ತಿ ದೇಶಭಕ್ತರ ಸಂಘಟನೆ ಸ್ಥಾಪನೆ ಮಾಡಿದರು. ಈ ಹೋರಾಟದ ಕಾರಣಕ್ಕೆ ಅವರ ಮನೆಯನ್ನು ಬ್ರಿಟಿಷರು ಜಪ್ತಿ ಮಾಡಿದ್ದರು.

1931ರಲ್ಲಿ ಜವಾಹಾರ ಲಾಲ್ ನೆಹರೂ ಅವರು ಜಕ್ಕಲಿಗೆ ಬಂದು ಭಾಷಣ ಮಾಡಿದ್ದರು. ಅಂದಾನಪ್ಪ ಅವರ ಹೊಲದಲ್ಲೇ ನಡೆದಿದ್ದ ಸಭೆಯಲ್ಲಿ 20 ಸಾವಿರ ಜನ ಸೇರಿದ್ದರು. 1934ರಲ್ಲಿ ಗಾಂಧೀಜಿ ಜಕ್ಕಲಿಗೆ ಬಂದಾಗ ನರೇಗಲ್‌ನಿಂದ ಜಕ್ಕಲಿವರೆಗೆ ರಸ್ತೆ ಮಾಡಿಸಿದವರು ಅಂದಾನಪ್ಪ. ಗಾಂಧಿ ಕರೆಗೆ ಓಗೊಟ್ಟು ಅಂದಾನಪ್ಪ ಅವರ ಕುಟುಂಬದಿಂದ ₹1,200 ದೇಣಿಗೆಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ನೀಡಲಾಗಿತ್ತು. 

ದುರಂತವೆಂದರೆ, ಅಂದಿನ ಸಮಾರಂಭದ ಫೋಟೊ ತೆಗೆದಿದ್ದ ಕ್ಷತ್ರಿಯ ಸ್ಟುಡಿಯೊ ಅಗ್ನಿ ಅವಘಡಕ್ಕೊಳಗಾಗಿದ್ದರಿಂದ ಒಂದೂ ಕುರುಹು ಇಲ್ಲದಂತಾಗಿದೆ. ಆದರೆ, ಅಂದಾನಪ್ಪ ಅವರು ಸೋಮಪ್ಪ ಎಂಬ ಶಿಲ್ಪಿಯ ಮೂಲಕ ಗಾಂಧಿ ಮೂರ್ತಿಯನ್ನು ಕೆತ್ತಿಸಿ, ಮಂಟಪ ನಿರ್ಮಿಸಿದರು. 

ಗಾಂಧಿ ಭೇಟಿ ನೀಡಿದ ಸ್ಮರಣೆಯನ್ನು ಶಾಶ್ವತಗೊಳಿಸುವ ಉದ್ದೇಶದಿಂದ 1970ರ ಏಪ್ರಿಲ್ 4ರಂದು ಗ್ರಾಮದ ಮಾದರಿ ಕೇಂದ್ರ ಶಾಲೆಯ ಆವರಣದಲ್ಲಿ ಗಾಂಧೀಜಿ  ಮೂರ್ತಿ ಸ್ಥಾಪಿಸಲಾಯಿತು. ಗ್ರಾಮಸ್ಥರು ಇಂದಿಗೂ ಗಾಂಧಿ ಅವರನ್ನು ಪೂಜಿಸುತ್ತಾರೆ. 

ಜಕ್ಕಲಿಯ ಹೆಸರು ಚರಿತ್ರೆಯ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿಯುವಲ್ಲಿ ಶ್ರಮಿಸಿದ ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ನಿರ್ಮಾಣ ಕಾರ್ಯ ಈಚೆಗಷ್ಟೇ ಆರಂಭವಾಗಿದೆ. ಗಾಂಧಿ ಮೆಟ್ಟಿದ ಮಣ್ಣಿನ ಕಣಗಳು ಇಂದಿಗೂ ಸ್ವಾತಂತ್ರ್ಯದ ಜಪ ಮಾಡುತ್ತಿವೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ