ಜಾತಿ ಗಣತಿಯಿಂದ OBC ಕೈಬಿಟ್ಟಿರುವುದು ಮೋದಿ ಸರ್ಕಾರದ ದೊಡ್ಡ ಪಿತೂರಿ: ಕಾಂಗ್ರೆಸ್
ನವದೆಹಲಿ: ಜಾತಿ ಗಣತಿಯಿಂದ ಹಿಂದುಳಿದ ವರ್ಗಗಳನ್ನು(ಒಬಿಸಿ) ಬೇಕಂತಲೇ ಕೈಬಿಟ್ಟಿದ್ದು, ಇದು ಮೋದಿ ಸರ್ಕಾರದ ದೊಡ್ಡ ಪಿತೂರಿಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಅನಿಲ್ ಜೈಹಿಂದ್, ‘ಜನಗಣತಿಯ ಪ್ರಶ್ನಾವಳಿಯಲ್ಲಿ ಒಬಿಸಿ ವರ್ಗದವರಿಗಾಗಿ ಪ್ರತ್ಯೇಕ ಕಾಲಂ ಸೇರಿಸದಿರುವುದು ಸಾಮಾಜಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸುತ್ತದೆ. ಇದು ಒಬಿಸಿ ಸಮುದಾಯದ ನಿಜವಾದ ಜನಸಂಖ್ಯೆಯ ಅಂಕಿ ಅಂಶಗಳನ್ನು ದಾಖಲಿಸುವುದನ್ನು ತಡೆಯುತ್ತದೆ’ ಎಂದು ಕಿಡಿಕಾರಿದ್ದಾರೆ.
ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ಜಾತಿ ಗಣತಿ ಮಾಡುವುದನ್ನು ಬಿಟ್ಟು, ಕೇಂದ್ರ ಸರ್ಕಾರವು ಅಧಿಕೃತ ಅಂಕಿಅಂಶಗಳಿಂದ ಒಬಿಸಿಗಳನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದೆ. ಇದು ವಾಸ್ತವದಲ್ಲಿ ಮನುವಾದಿ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಆಗಸ್ಟ್ 14ರಂದು ಕೇಂದ್ರ ಸರ್ಕಾರವು ಹೊರಡಿಸಲಾದ ಅಧಿಸೂಚನೆಯನ್ನು ಉಲ್ಲೇಖಿಸಿದ ಜೈಹಿಂದ್, ಪ್ರಶ್ನಾವಳಿಯ 10ನೇ ಪ್ರಶ್ನೆಯಲ್ಲಿ ಒಬಿಸಿ ವರ್ಗವನ್ನು ನಮೂದಿಸಲು ಯಾವುದೇ ಕಾಲಂ ಇಲ್ಲ ಎಂದು ತಿಳಿಸಿದ್ದಾರೆ.
ದೇಶದ ವಿವಿಧ ಪ್ರದೇಶಗಳಲ್ಲಿ ಜಾತಿಗಳ ಸ್ವರೂಪ ಭಿನ್ನವಾಗಿರುವುದರಿಂದ, ಜನಗಣತಿಯ ವೇಳೆ ಜಾತಿಗಳನ್ನು ನಿಖರವಾಗಿ ಗುರುತಿಸಬೇಕು ಎಂದು ಹೇಳಿದ್ದಾರೆ.