
KAS Transfer:ಕೆಎಎಸ್ ಅಧಿಕಾರಿಗಳ ವರ್ಗ, ಶಾಂತ ಹುಲ್ಮನಿ ಬೆಂಗಳೂರು ಮೆಟ್ರೊ ಜಿಎಂ
ಬೆಂಗಳೂರು: ಕರ್ನಾಟಕ ಸರ್ಕಾರವು ಸೂಪರ್ ಟೈಂ ಸ್ಕೇಲ್ ದರ್ಜೆಯ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಆದೇಶ ಹೊರಡಿಸಿದೆ.
ಪಿಂಚಣಿ, ಸಣ್ಣ ಉಳಿತಾಯ ಹಾಗೂ ಆಸ್ತಿ ಹೊಣೆಗಾರಿಕೆ ಮೇಲ್ವಿಚಾರಣಾ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಶಾಂತಾ ಎಲ್.ಹುಲ್ಮನಿ ಅವರನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ( ಬಿಎಂಆರ್ ಸಿಎಲ್) ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪರ ಹುದ್ದೆಗೆ ನೇಮಕ ಮಾಡಲಾಗಿದೆ. ಈ ಹುದ್ದೆಯನ್ನು ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಯನ್ನಾಗಿ ಉನ್ನತೀಕರಿಸಲಾಗಿದೆ.
ಕೆಜಿಐಡಿ ನಿರ್ದೇಶಕರಾಗಿರುವ ಕೆ.ಅನ್ನಪೂರ್ಣ ಅವರಿಗೆ ಪಿಂಚಣಿ, ಸಣ್ಣ ಉಳಿತಾಯ ಹಾಗೂ ಆಸ್ತಿ ಹೊಣೆಗಾರಿಕೆ ಮೇಲ್ವಿಚಾರಣಾ ನಿರ್ದೇಶನಾಲಯದ ನಿರ್ದೇಶಕರ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ನಗರ ಭೂಸಾರಿಗೆ ನಿರ್ದೇಶನಾಲಯದ ಆಡಳಿತ ವಿಭಾಗದ ಜಂಟಿ ನಿರ್ದೇಶಕರಾಗಿದ್ದ ಕೆ.ರೂಪಶ್ರೀ ಅವರನ್ನು ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಆಡಳಿತ ಮತ್ತು ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಬಿ.ಆರ್.ರೂಪ ಅವರನ್ನು ವರ್ಗ ಮಾಡಲಾಗಿದ್ದು ಯಾವುದೇ ಹುದ್ದೆ ತೋರಿಸಿಲ್ಲ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ವಿಭಾಗದ ಜಂಟಿ ಆಯುಕ್ತರಾಗಿದ್ದ ಬಿ.ಪಿ.ವಿಜಯ್ ಅವರನ್ನು ಕರ್ನಾಟಕ ರಾಜ್ಯ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ವ್ಯವಸ್ಥಾಪಕರ ನಿರ್ದೇಶಕರ ಹುದ್ದೆಗೆ ನಿಯೋಜಿಸಲಾಗಿದೆ. ಇದರೊಟ್ಟಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ವಿಭಾಗದ ಜಂಟಿ ಆಯುಕ್ತರ ಹುದ್ದೆಯ ಅಧಿಕ ಪ್ರಭಾರ ವಹಿಸಲಾಗಿದೆ.
ಸ್ಥಳ ನಿರೀಕ್ಷಣೆಯಲ್ಲಿದ್ದ ಕೆಎಎಸ್ ಅಧಿಕಾರಿ ಕೆ.ಎ.ಹಿದಾಯತ್ ಉಲ್ಲಾ ಅವರಿಗೆ ಇ ಆಡಳಿತ ಕೇಂದ್ರದ ಕುಟುಂಬ ವಿಭಾಗದ ಯೋಜನಾ ನಿರ್ದೇಶಕರ ಹುದ್ದೆ ನೀಡಲಾಗಿದೆ.
ಬೆಂಗಳೂರು ಮೆಟ್ರೊ ರೈಲು ನಿಗಮದ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿದ್ದ ಬಿ.ಬಿ.ಸರೋಜಾ ಅವರನ್ನು ಹಾವೇರಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ