
ಮುಖ್ಯಮಂತ್ರಿ ಡಿಕೆಶಿ ನಿವಾಸಕ್ಕೆ ಅದಾನಿ ಭೇಟಿ, ಮಾತುಕತೆ
ಬೆಂಗಳೂರು: ಇಲ್ಲಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ್ದ ಉದ್ಯಮಿ ಗೌತಮ್ ಅದಾನಿ ಕೆಲಹೊತ್ತು ಸಮಾಲೋಚನೆ ನಡೆಸಿದರು.
ಇದಕ್ಕೂ ಮೊದಲು ಅದಾನಿ ಅವರು ‘ಆರ್ಟ್ ಆಫ್ ಲಿವಿಂಗ್’ಗೆ ಭೇಟಿ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ‘ಇದೊಂದು ಸೌಜನ್ಯದ ಭೇಟಿಯಷ್ಟೆ’ ಎಂದಿದ್ದಾರೆ.
ಶಿವಕುಮಾರ್ ಜೊತೆ ಸುಮಾರು 20 ನಿಮಿಷ ಚರ್ಚೆ ನಡೆಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಗೌತಮ್ ಅದಾನಿ ಚರ್ಚೆ ನಡೆಸಿದ್ದಾರೆ. ಬೆಂಗಳೂರಿನ ಉದ್ದೇಶಿತ ಸುರಂಗ ಮಾರ್ಗ ಯೋಜನೆ ಬಗ್ಗೆಯೂ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.
ಉಪ ಮುಖ್ಯಮಂತ್ರಿಯಾಗಿದ್ದಾಗ ಶಿವಕುಮಾರ್ ಅವರು ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗಿನ 16.75 ಕಿ.ಮೀ. ಉದ್ದದ ಉತ್ತರ– ದಕ್ಷಿಣ ಸುರಂಗ ರಸ್ತೆ ಯೋಜನೆಯನ್ನು ರೂಪಿಸಿದ್ದರು. ಈ ಯೋಜನೆಗೆ ಅಂದಾಜು ₹17,698 ಕೋಟಿ ವೆಚ್ಚಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಆದರೆ, ಟೆಂಡರ್ನಲ್ಲಿ ಇದಕ್ಕೂ ಮೀರಿದ ಬಿಡ್ ದಾಖಲಾಗಿದೆ. ಅತ್ಯಂತ ಕಡಿಮೆ ಬಿಡ್ ಸಲ್ಲಿಸಿರುವ ಅದಾನಿ ಎಂಟರ್ಪ್ರೈಸಸ್ ₹22,267 ಕೋಟಿ (ಶೇ 25.87) ನಮೂದಿಸಿದೆ. ಈ ಸಂಬಂಧ ಚರ್ಚೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅದಾನಿ ಸಮೂಹದ ಒಡೆತನದಲ್ಲಿರುವ ‘ಎಸಿಸಿ ಲಿಮಿಟೆಡ್’ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಸಿಮೆಂಟ್ ಉತ್ಪಾದನೆಗೆ ಬಳಸುವ ಸುಣ್ಣದ ಕಲ್ಲಿನ ಗಣಿಯನ್ನು ಹೊಂದಿತ್ತು. ಗಣಿಗಾರಿಕೆಯ ಬಾಬ್ತು ಸುಮಾರು ₹850.21 ಕೋಟಿ ರಾಯಧನವನ್ನು ಕರ್ನಾಟಕ ಸರ್ಕಾರಕ್ಕೆ ಈ ಕಂಪನಿ ಪಾವತಿಸಬೇಕಾಗಿದೆ. ಎಸಿಸಿ ಲಿಮಿಟೆಡ್ ಅನ್ನು ಅದಾನಿ ಸಮೂಹ ವಶಕ್ಕೆ ಪಡೆದಾಗ ಈ ಮೊತ್ತವು ₹837 ಕೋಟಿಯಷ್ಟಿತ್ತು.
ಬಾಕಿ ತೀರುವಳಿ ಮಾಡದೇ ಇರುವ ಕಾರಣಕ್ಕೆ, ಎಸಿಸಿ ಲಿಮಿಟೆಡ್ ವಿರುದ್ಧ ಕ್ರಿಮಿನಲ್ ಕಟ್ಲೆ ಹೂಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಈ ವಿಷಯದ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಹೆಜ್ಜೆ ಇಟ್ಟಿದೆ. ಸ್ಥಳ ಆಯ್ಕೆ ಹಾಗೂ ಕಾರ್ಯಸಾಧ್ಯತಾ ವರದಿಯ ನಿರೀಕ್ಷೆಯಲ್ಲಿ ಸರ್ಕಾರ ಇದೆ. ವಿಮಾನ ನಿಲ್ದಾಣ ನಿರ್ಮಾಣ–ನಿರ್ವಹಣೆಯಲ್ಲಿ ಈಚೆಗಿನ ದಿನಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ಅದಾನಿ ಸಮೂಹ, ಬೆಂಗಳೂರಿನತ್ತಲೂ ದೃಷ್ಟಿ ನೆಟ್ಟಿದೆ.
ತೆಲಂಗಾಣದಲ್ಲಿನ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡಾ ಗೌತಮ್ ಅದಾನಿ ಜೊತೆ ಹೂಡಿಕೆ ಒಪ್ಪಂದಗಳನ್ನು ಮಾಡಿದ್ದರು.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಪ್ರಧಾನಿ ನರೇಂದ್ರ ಮೋದಿ ಆಪ್ತ’ ಎಂಬ ಕಾರಣಕ್ಕೆ ಉದ್ಯಮದಲ್ಲಿ ಬಹಳಷ್ಟು ವಿನಾಯಿತಿ ಪಡೆದಿದ್ದಾರೆ ಎಂದು ಗೌತಮ್ ಅದಾನಿ ವಿರುದ್ಧ ಆರೋಪ, ಟೀಕೆ ಮಾಡುತ್ತಿದ್ದಾರೆ.