
ಕನಸುಗಳನ್ನು ನುಂಗಿಕೊಂಡ ಪ್ರವಾಹ: ಹುಟುಹಬ್ಬ ಸಂಭ್ರಮಿಸಬೇಕಿದ್ದ ವ್ಯಕ್ತಿ ಕಣ್ಮರೆ
ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹವು 616 ಜನರ ಪ್ರಾಣವನ್ನಷ್ಟೇ ಕಸಿದುಕೊಂಡಿಲ್ಲ. ಬದಲಾಗಿ ಅವರ ಕುಟುಂಬಗಳ ಭವಿಷ್ಯದ ಕನಸುಗಳನ್ನು ಬಲಿತೆಗೆದುಕೊಂಡಿದೆ.
ದುರ್ಗಮ ಹಾದಿಯಲ್ಲಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದು, ಕಣ್ಮರೆಯಾದವರು ಸುರಕ್ಷಿತವಾಗಿ ಎಂಬ ಭರವಸೆಯಲ್ಲಿ ಅನೇಕ ಕುಟುಂಬಗಳು ಕಾಯುತ್ತಿವೆ.
ಪ್ರವಾಹದಲ್ಲಿ 320 ಭಾರತೀಯರು ಸೇರಿದಂತೆ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಅವರಲ್ಲಿ ಆಸ್ಟ್ರೇಲಿಯಾದಿಂದ ಕೈಲಾಶ-ಮಾನಸಸರೋವರ ಯಾತ್ರೆಗೆಂದು ಬಂದಿದ್ದ ಭಾವಿನ್ ರಾವಲ್ ಕೂಡ ಒಬ್ಬರು.
ಭಾವಿನ್ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 5ರಂದು ಅದ್ದೂರಿ ಆಚರಣೆಗೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. 'ನನ್ನ ಸಹೋದರನ ಜನ್ಮದಿನವಿತ್ತು. ಅವರು ಸೆಪ್ಟೆಂಬರ್ 11ಕ್ಕೆ ಆಸ್ಟ್ರೇಲಿಯಾಗೆ ಮರಳಬೇಕಿತ್ತು' ಎಂದು ಭಾವಿನ್ ಅವರ ಸಹೋದರ ಧವಲ್ ತಿಳಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಸಹೋದರರು ದೂರವಾಣಿಯಲ್ಲಿ ಯಾತ್ರೆಯ ಕುರಿತು ಮಾತನಾಡಿದ್ದರು. ಒಂದು ವಾರದ ಹಿಂದಷ್ಟೇ ಆಸ್ಟ್ರೇಲಿಯಾದಿಂದ ಚಂಡೀಗಢಕ್ಕೆ ಬಂದಿದ್ದ ಭಾವಿನ್, ನೇಪಾಳಕ್ಕೆ ತೆರಳಿದ್ದರು.
ಭಾವಿನ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಆಸ್ಟ್ರೇಲಿಯಾದಲ್ಲಿದ್ದಾರೆ.
'ಭಾವಿನ್ ಕೊನೆಯದಾಗಿ ಪತ್ನಿಯೊಂದಿಗೆ ಮಾತನಾಡಿದ್ದರು. ಇಮಿಗ್ರೇಷನ್ ಕಚೇರಿ ಬಳಿ ಇರುವುದಾಗಿ ಹಾಗೂ ಬೆಳಗ್ಗೆ 8 ಗಂಟೆಗೆ ಕಚೇರಿ ತೆರೆದ ನಂತರ ಮಾನಸಸರೋವರಕ್ಕೆ ತೆರಳುವುದಾಗಿ ಹೇಳಿದ್ದರು. ಅವರೊಂದಿಗೆ ಇದ್ದ ಸಹಪ್ರಯಾಣಿಕರು ಸೇರಿದಂತೆ ಐದಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ' ಎಂದು ಧವಲ್ ಹೇಳಿದ್ದಾರೆ.