
ಗುಂಡ್ಲುಪೇಟೆ: ಪುಸ್ತಕ ಓದಲು ಕ್ಯೂಆರ್ ಕೋಡ್
ಗುಂಡ್ಲುಪೇಟೆ: ಗ್ರಾಮ ಪಂಚಾಯಿತಿಗಳಲ್ಲಿ ವಿದ್ಯಾರ್ಥಿಗಳು ಕ್ಯೂಆರ್ ಕೋಡ್ ಮೂಲಕ ಪುಸ್ತಕಗಳನ್ನು ಓದಲು ಹಾಗೂ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ವಿಶಿಷ್ಟ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಈಚೆಗೆ ಅನುಷ್ಠಾನಗೊಳಿಸಿದೆ. ಮೊದಲ ಹಂತವಾಗಿ ರಾಜ್ಯದ 10 ಗ್ರಾಮ ಪಂಚಾಯಿತಿಗಳಲ್ಲಿ ಜಾರಿಗೆ ಬಂದಿದ್ದು, ಅವುಗಳ ಪೈಕಿ ಗುಂಡ್ಲುಪೇಟೆಯ ಮಂಗಲ ಗ್ರಾಮ ಪಂಚಾಯಿತಿಯೂ ಒಂದಾಗಿದೆ.
ತಾಲ್ಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ರಾಜ್ಯದ ದಕ್ಷಿಣ ತುದಿಯಲ್ಲಿರುವ ಮಂಗಲ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ಲಭ್ಯವಿರುವ ಸೌಲಭ್ಯವನ್ನು ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುತ್ತಿದ್ದು ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ.
ಹೇಗೆ ಓದುವುದು: ವಿದ್ಯಾರ್ಥಿಗಳು ಪಂಚಾಯಿತಿಯ ಗ್ರಂಥಾಲಯಕ್ಕೆ ಬಂದು ಅಲ್ಲಿರುವ ಕ್ಯೂಆರ್ ಕೋಡ್ ಅನ್ನು ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್ ಮೂಲಕ ಸ್ಕ್ಯಾನ್ ಮಾಡಿದರೆ ಪುಸ್ತಕಗಳು ಓದಲು ಲಭ್ಯವಾಗಲಿವೆ. ಪಂಚಾಯಿತಿಯ ಗ್ರಂಥಾಲಯದಲ್ಲಿ ಕುಳಿತು ಪುಸ್ತಕಗಳನ್ನು ಓದಬಹುದು, ಸಮಯ ಇಲ್ಲದಿದ್ದರೆ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡು ಮನೆಗಳಲ್ಲಿ ಓದಬಹುದು. ಬಿಡುವಿದ್ದಾಗ ಕಾಲೇಜು ಅಥವಾ ಸಾರ್ವಜನಿಕ ಸ್ಥಳಗಳಲ್ಲೂ ಓದಬಹುದು. ಸದ್ಯ 10,000 ಪುಸ್ತಕಗಳು ಓದಲು ಲಭ್ಯವಿದೆ ಎನ್ನುತ್ತಾರೆ ಪಂಚಾಯಿತಿ ಅಧಿಕಾರಿಗಳು.
ಮಂಗಲ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ವತಿಯಿಂದ ಆರಂಭವಾಗಿರುವ ಸೌಲಭ್ಯ ಮಕ್ಕಳನ್ನು ಸೆಳೆಯುತ್ತಿದ್ದು, ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ. ಅರಿವು ಕೇಂದ್ರದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಕಲಿಕೆ, ಬೇಸಿಗೆ ಶಿಬಿರ, ಶೈಕ್ಷಣಿಕ ಪ್ರವಾಸ, ‘ಗಟ್ಟಿ ಓದು’, ಯೂಟ್ಯೂಬ್ ತರಬೇತಿ, ಮಾಸಿಕ ಚಟುವಟಿಕೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಆರ್. ಮೋಹನ್ ಕುಮಾರ್.
ಕಾಲೇಜು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು, ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಸಾಹಿತ್ಯ, ಕಥೆ, ಕಾದಂಬರಿಗಳನ್ನು ಓದಲು ಅವಕಾಶ ಇದೆ. ಇಷ್ಟವಾದ ಪುಸ್ತಕಗಳನ್ನು ಕ್ಯೂಆರ್ ಕೋಡ್ ಬಳಸಿ ಓದಬಹುದು, ಸಾಮಾನ್ಯವಾಗಿ ಭೌತಿಕ ಗ್ರಂಥಾಲಯದಲ್ಲಿ ಪುಸ್ತಕಗಳ ಲಭ್ಯತೆ ಕಡಿಮೆ ಇರುತ್ತದೆ, ಆದರೆ ಅಂತರ್ಜಾಲದಲ್ಲಿ ಅಸಂಖ್ಯ ಪುಸ್ತಕಗಳು ಓದಲು ಲಭ್ಯವಾಗುವುದರಿಂದ ವಿದ್ಯಾರ್ಥಿಗಳ ಜ್ಞಾನ ವಿಸ್ತಾರಗೊಳ್ಳುತ್ತದೆ, ತಂತ್ರಜ್ಞಾನದ ಮೂಲಕ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ, ಹೊಸ ಹೊಸ ವಿಚಾರಗಳನ್ನು ಯುವಜನತೆ ಕಲಿಯಬಹುದು ಎನ್ನುತ್ತಾರೆ ಪಿಡಿಒ ಮೋಹನ್ ಕುಮಾರ್.
ಯಾವ ಪಂಚಾಯಿತಿಗಳಲ್ಲಿ ಅನುಷ್ಠಾನ: ಮೈಸೂರು ವಿಭಾಗದಿಂದ ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿ ಗ್ರಂಥಾಲಯ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮಂಡೆಕೋಲು, ಬೆಂಗಳೂರು ವಿಭಾಗದಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನೀಲಸಂದ್ರ, ಬೆಂಗಳೂರು ನಗರ ಜಿಲ್ಲೆಯಿಂದ ಯಲಹಂಕದ ರಾಜನಕುಂಟೆ, ಬೆಳಗಾವಿ ವಿಭಾಗದಿಂದ ಗದಗ ಜಿಲ್ಲೆಯ ಕುರ್ತಕೋಟೆ, ಬೆಳಗಾವಿ ಜಿಲ್ಲೆಯ ಖಾನಾಪುರದ ಬೀಡಿ ಗ್ರಂಥಾಲಯ, ಕಲಬುರಗಿ ವಿಭಾಗದಿಂದ ಕೊಪ್ಪಳದ ಕಿನ್ನಾಲ್, ವಿಜಯನಗರ ಜಿಲ್ಲೆಯ ಕೊಟ್ಟೂರಿನ ನಿಂಬಳಗೆರೆ, ಬೀದರ್ ಜಿಲ್ಲೆಯಿಂದ ಭಾಲ್ಕಿಯ ಅಂಬೆ ಸಾಂಘಿ ಗ್ರಂಥಾಲಯಗಳಲ್ಲಿ ಅನುಷ್ಠಾನಗೊಂಡಿದೆ.
ಹಲವು ಗ್ರಾಮಗಳಿಗೆ ಪ್ರಯೋಜನ
ಕ್ಯೂಆರ್ ಕೋಡ್ ಆಧಾರಿತ ಕಾರ್ಯಕ್ರಮ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಮಾತ್ರವಲ್ಲ ತಾಲ್ಲೂಕಿನ ಓದುಗರಿಗೂ ಪ್ರಯೋಜನವಾಗಲಿದೆ. ಓದುಗರು ಕ್ಯೂಆರ್ ಕೋಡ್ ಮೂಲಕ ಅಗತ್ಯವಿರುವ ಪುಸ್ತಕಗಳನ್ನು ಮೊಬೈಲ್‌ನಲ್ಲಿ ಓದಲು ಹಾಗೂ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಪುಸ್ತಕಗಳ ಜೊತೆಗೆ ಪತ್ರಿಕೆಗಳನ್ನೂ ಓದಲು ಸಾಧ್ಯವಾಗುವಂತೆ ಅವಕಾಶ ಕಲ್ಪಿಸಲಾಗುವುದು. ಓದುಗರ ಬೇಡಿಕೆ ಹಾಗೂ ಆಸಕ್ತಿಗೆ ಅನಗುಣವಾದ ಪುಸ್ತಕಗಳನ್ನು ಯೋಜನೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ವ್ಯವಸ್ಥೆಯೂ ಇರಲಿದ್ದು ಹೆಚ್ಚು ಪ್ರಯೋಜನಕಾರಿಯಾಗಲಿದೆ.
– ಕುಮಾರ.ಎಂ.ಬಿ, ಮಂಗಲ ಗ್ರಂಥಾಲಯ ಮೇಲ್ವಿಚಾರಕ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-37-172264600