ಪತ್ನಿ ಮನೆಗೆಲಸದ ಉದ್ಯೋಗಿಯಲ್ಲ: ಹೈಕೋರ್ಟ್

ಪತ್ನಿ ಮನೆಗೆಲಸದ ಉದ್ಯೋಗಿಯಲ್ಲ: ಹೈಕೋರ್ಟ್

ಪತ್ನಿ ಮನೆಗೆಲಸದ ಉದ್ಯೋಗಿಯಲ್ಲ: ಹೈಕೋರ್ಟ್

ಬೆಂಗಳೂರು: ಪತ್ನಿ ಎನಿಸಿಕೊಂಡ ಮಹಿಳೆ ಮನೆಯ ಕೆಲಸಗಳನ್ನು ಮಾಡಲು, ಪತಿ ಮತ್ತು ಪತಿಯ ಪೋಷಕರನ್ನು ನೋಡಿಕೊಳ್ಳಲು ನೇಮಕಗೊಂಡ ಉದ್ಯೋಗಿಯಲ್ಲ‘ ಎಂದು ಹೈಕೋರ್ಟ್​ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿದೆ.

ಜೀವನಾಂಶಕ್ಕೆ ಸಂಬಂಧಿಸಿದಂತೆ 36 ವರ್ಷದ ಪತಿಯೊಬ್ಬರು ಸಲ್ಲಿಸಿದ್ದ; ಕೌಟುಂಬಿಕ ನ್ಯಾಯಾಲಯ ಮರು ಪರಿಶೀಲನಾ ಅರ್ಜಿ (ಆರ್ ಪಿಎಫ್ ಸಿ) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲ್ಲಕೂರು ಸುಮಲತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ‌.

‘ಪತ್ನಿ ಮತ್ತು ತನ್ನ 5 ವರ್ಷದ ಮಗಳಿಗೆ ಪ್ರತಿ ತಿಂಗಳೂ ₹9 ಸಾವಿರ ಜೀವನಾಂಶ ನೀಡುವಂತೆ ಕೌಟುಂಬಿಕ ಕೋರ್ಟ್ 2025ರ ನವೆಂಬರ್ ನಲ್ಲಿ ನೀಡಿರುವ ಆದೇಶ ರದ್ದುಪಡಿಸಬೇಕು ಹಾಗೂ ಮೊತ್ತದಲ್ಲಿ ಮಾರ್ಪಾಡು ಮಾಡಬೇಕು‘ ಎಂಬ ಪತಿಯ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.

‘ಪ್ರಸ್ತಕ್ತ ದಿನಗಳಲ್ಲಿ ಈ ಮೊತ್ತವನ್ನು ಕಡಿಮೆ ಮಾಡಬೇಕು ಎಂಬ ಅರ್ಜಿದಾರರ ಮನವಿಯನ್ನು ಪರಿಗಣಿಸಲಾಗದು‘ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಇಂದಿನ ದಿನಗಳಲ್ಲಿ ಮಹಿಳೆಯೊಬ್ಬಳು ತನ್ನ ಪೋಷಕರ ಮನೆಗೆ ಹೋಗಲು ಪತಿ ಅಥವಾ ಅತ್ತೆ-ಮಾವಂದಿರ ಅನುಮತಿ ಪಡೆಯಬೇಕು ಎನ್ನುವುದು ಪತಿಯ ಸರ್ವಾಧಿಕಾರಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ‘ ಎಂದು ನ್ಯಾಯಪೀಠ ಹೇಳಿದೆ.

‘ಮದುವೆ ಎಂಬುದು ಪತ್ನಿಯ ಸ್ವಾತಂತ್ರ್ಯ ಮತ್ತು ಇಚ್ಛೆಯನ್ನು ನಿಯಂತ್ರಿಸುವ ಪರವಾನಗಿಯಲ್ಲ. ಪತ್ನಿಯಾದವರು ಪತಿಯ ಮನೆ ಕೆಲಸ ಮತ್ತು ಪೋಷಕರನ್ನು ನೋಡಿಕೊಳ್ಳಲು ನೇಮಕವಾದವರಲ್ಲ‘ ಎಂದೂ ನ್ಯಾಯಪೀಠ ವಿವರಿಸಿದೆ.

‘ಹೆತ್ತವರನ್ನು ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯವು ಮಗ ಅಥವಾ ಮಗಳ ಮೇಲಿರುತ್ತದೆಯೇ ಹೊರತು, ಸೊಸೆ ಅಥವಾ ಅಳಿಯನ ಮೇಲಲ್ಲ. ಇಂತಹ ಕಾಳಜಿ ಸ್ವಯಂ ಪ್ರೇರಿತವಾಗಿ ಇರಬೇಕೇ ಹೊರತು ಬಲವಂತವಾಗಿ ನಡೆಯುವಂತಹುದಲ್ಲ‘ ಎಂದು ನ್ಯಾಯಪೀಠ ವಿವರಿಸಿದೆ.

‘ಮಹಿಳೆಯು ತನ್ನ ವೃತ್ತಿ, ಹಣಕಾಸಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ಹೊಂದಿರುತ್ತಾಳೆ. ತನ್ನ ಇಚ್ಛೆ ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಬದುಕಬೇಕು ಎಂದು ಪತಿ ಒತ್ತಾಯ ಮಾಡುವುದಕ್ಕೆ ಅವಕಾಶವಿಲ್ಲ‘ ಎಂದು ತಿಳಿಸಿದೆ.

‘ಮದುವೆ ಎಂಬುದು ಅಸಮಾನರ ನಡುವಿನ ಸಂಬಂಧವಲ್ಲ. ಮಹಿಳೆಯ ಸ್ವಾಯತ್ತತೆ ಕಸಿದುಕೊಳ್ಳುವ ಅಥವಾ ಕೇವಲ ಲಿಂಗವನ್ನು ಆಧರಿಸಿ ಅವಳ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಯಾವುದೇ ಪ್ರಯತ್ನ ಅಥವಾ ಸಾಹಸವು, ಸಮಾನತೆಯ ತತ್ವ ಹಾಗೂ ಸಾಮಾಜಿಕ ನ್ಯಾಯದ ಸಾಂವಿಧಾನಿಕ ಮನೋಭಾವಕ್ಕೆ ತದ್ವಿರುದ್ಧವಾಗಿ ಇರಲಿದೆ‘ ಎಂದು ತಿಳಿಸಿದೆ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ